ಕಾರವಾರ: ಬೈಕ್ ಏರಿ ಉತ್ತರಭಾರತ ಸುತ್ತುವ ಕನಸ್ಸಿನೊಂದಿಗೆ ಕಾರವಾರದಿಂದ ತೆರಳಿದ್ದ ಸಾಹಸಿ ಯುವಕರ ತಂಡವೊoದು ಹಿಮಾಚಲ ಪ್ರದೇಶದ ಬಳಿ ಸಂಭವಿಸಿದ ಪ್ರವಾಹದಿಂದ ಕೂದಲೆಳೆ ಅಂತರದಿoದ ಪಾರಾಗಿದೆ. ಪ್ರಯಾಣದುದ್ದಕ್ಕೂ ಹಲವು ಅಡೆತಡೆಗಳನ್ನು ಎದುರಿಸಿ ಇದೀಗ ಸುರಕ್ಷಿತವಾಗಿ ಮರಳಿರುವ ಯುವಕರ ತಂಡ ತಮಗಾದ ಭಯಾನಕ ಅನುಭವ ಬಿಚ್ಚಿಟ್ಟಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ. ಬೈಕ್ ಕ್ರೇಜ್ ಇರುವ ಬಹುತೇಕರಿಗೆ ದೂರದ ಊರುಗಳಿಗೆ ಪ್ರವಾಸ ಕೈಗೊಳ್ಳುವ ಹಂಬಲ ಕೂಡ ಇರುತ್ತದೆ. ಅದರಲ್ಲಿಯೂ ಲಡಾಕ್ ನಂತಹ ಸಾಹಸಿ ಪ್ರದೇಶಗಳಿಗೆ ತೆರಳಲು ಅದೆಷ್ಟೋ ಜನ ಎದುರು ನೋಡುತ್ತಿರುತ್ತಾರೆ. ಇಂತಹದೆ ಕನಸಿನೊಂದಿಗೆ ಉತ್ತರಕನ್ನಡ ಜಿಲ್ಲೆಯಿಂದ ಉತ್ತರಭಾರತದ ಪ್ರವಾಸ ಕೈಗೊಂಡಿದ್ದ ಐವರು ಯುವಕರು ಹಿಮಾಚಲ ಪ್ರದೇಶದಲ್ಲಿ ಎದುರಾದ ಪ್ರವಾಹದಿಂದ ಅದೃಷ್ಟವಸಾತ್ ಪಾರಾಗಿ ತವರಿಗೆ ಮರಳಿದ್ದಾರೆ.
ಕಾರವಾರದ ಪ್ರಕಾಶ ನಾಯ್ಕ, ದರ್ಶನ ಭುಜಲೆ, ವೃಷಭ ಕಾಮತ್, ಅಲಿಸಾಬ್ ಕುಕ್ಕಳ್ಳಿ ಹಾಗೂ ಕುಮಟಾದ ಅಲ್ಮಾಬ್ರೂಕ್ ಗಣಿ ಸೇರಿ ಒಟ್ಟು ಐದು ಜನ ಮೂರು ರಾಯಲ್ ಎನ್‌ಫೀಲ್ಡ್ ನಲ್ಲಿ ಜೂನ್ 7 ರಂದು ಉತ್ತರಭಾರತದ ಕಡೆ ಪ್ರಯಾಣ ಬೆಳಸಿದ್ದರು. ಆದರೆ ಇದೇ ಸಮಯಕ್ಕೆ ಉತ್ತರ ಭಾರತದಲ್ಲಿ ಭಾರಿ ಮಳೆಗೆ ಪ್ರವಾಹ ಸೃಷ್ಟಿಯಾಗಿತ್ತು. ಹಿಮಾಚಲ ಪ್ರದೇಶದ ಕುಲು ಸಮೀಪ ಕಸೋಲ್ ಎಂಬಲ್ಲಿ ರಾತ್ರಿ ತಂಗಿದ್ದ ಐವರು ಬೆಳಿಗ್ಗೆ ಬೇಗನೆ ಎದ್ದು ಮಳೆಯಲ್ಲಿ ಮುಂದಿನ ಪ್ರಯಾಣ ನಡಿಸಿದ್ದರು. ಆದರೆ ಬಳಿಕ ಬಂದ ಸುದ್ದಿ ನೋಡಿ ತಂಡದ ಸದಸ್ಯರ ಎದೆ ಝಲ್ ಎನ್ನುವಂತಾಗಿತ್ತು. ಕಸೋಲ್ ಎಮನಬಲ್ಲಿ ತಾವು ಉಳಿದುಕೊಂಡಿದ್ದ ಹೊಟೆಲ್ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಅಲ್ಲದೆ ಶ್ರೀನಗರ ಸಮೀಪವೂ ನಾವು ಸೇತುವೆಯೊಂದನ್ನು ದಾಟಿದ ಕೆಲ ಹೊತ್ತಿನ ಬಳಿಕ ಸೇತುವೆ ಪ್ರವಾಹದಿಂದ ಉಕ್ಕಿ ಹರಿಯತಿಡಗಿತ್ತು.
ಆದರೆ ನಮ್ಮ ಕುಟುಂಬಸ್ಥರ ಪ್ರಾರ್ಥನೆಯಿಂದಲೋ ಏನೋ ಅದೃಷ್ಟವಸಾತ್ ಯಾವುದೇ ತೊಂದರೆ ಇಲ್ಲದೆ ವಾಪಸ್ಸಾಗಿದ್ದೇವೆ ಎನ್ನುತ್ತಾರೆ ಪ್ರವಾಸಿ ತಂಡದವರು. ಇನ್ನು ಪ್ರತಿ ದಿನ 600 ಕಿಮೀ ದೂರ ಕ್ರಮಿಸುವ ಗುರಿಯೊಂದಿಗೆ ಹೊರಟ್ಟಿದ್ದ ನಾವು ಜೈಪುರ ಬಳಿ ಹೆದ್ದಾರಿ ಪಕ್ಕವೇ ಟೆಂಟ್ ಹಾಕಿ ರಾತ್ರಿ ತಂಗಿದ್ದೇವು. ಆದರೆ ಬೆಳಗ್ಗೆ 4 ಗಂಟೆಗೆ ಭಾರಿ ಮಳೆಯಿಂದ ಟೆಂಟ್ ಹಾರಿ ಹೋಗಿತ್ತು. ಆದರೆ ಪುಣೆ, ಇಂದೋರ್ ಅಜ್ಮೇರ್, ಜೈಪುರ, ಆಗ್ರಾ, ದೆಹಲಿ, ಪಠಾಣಕೋಟ್, ಅಮೃತಸರ, ಜಮ್ಮು, ಶ್ರೀನಗರ, ಕಾರ್ಗಿಲ್, ಲೇಹ್, ಲದಾಕ್, ಸರ್ಚು, ಮಲಾಲಿ, ಶಿಲ್ಮಾ ಚಂಡೀಘಢ ಹೀಗೆ ದೇಶದ ಪ್ರಮುಖ ಊರುಗಳನ್ನು ಸುತ್ತಿ ಸುರಕ್ಷಿತವಾಗಿ ಮರಳಿದ್ದೇವೆ. ಅಮೃತಸರದಲ್ಲಿ ವಾಘಾ ಬಾರ್ಡರ್, ಕಾರ್ಗಿಲ್‌ನ ಹುತಾತ್ಮರ ಸ್ಮಾರಕಗಳು ಮರೆಯಲಾರದ ಅನುಭವ. ದೇಶದ ಪ್ರತಿಯೊಬ್ಬರೂ ನೋಡಬೇಕಾದ ಸ್ಥಳಗಳವು ಎನ್ನುತ್ತಾರೆ ಪ್ರಕಾಶ ನಾಯ್ಕ.
ಇನ್ನು ವಾಹನ ತೆರಳುವ ವಿಶ್ವದ ಅತಿ ಎತ್ತರದ ಪ್ರದೇಶ ಉಮ್‌ಲಿಂಗ್ ಲಾ ಸಮುದ್ರ ಮಟ್ಟದಿಂದ 19024 ಅಡಿ ಇರುವ ಈ ಪ್ರದೇಶದಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನ ಇರುತ್ತದೆ.
ಅಲ್ಲಿಂದ ಅತೀ ಸಮೀಪದಲ್ಲಿ ಚೀನಾ ಗಡಿಯಿದೆ. ವರ್ಷದ ಎಲ್ಲ ಸಮಯದಲ್ಲಿ ಅಲ್ಲಿಗೆ ತೆರಳಲು ಅವಕಾಶ ಸಿಗುವುದಿಲ್ಲ. ನಮ್ಮ ಅದೃಷ್ಟಕ್ಕೆ ಅಲ್ಲಿಗೆ ತೆರಳಲು ಅವಕಾಶ ಸಿಕ್ಕಿತು. ನಡುವೆ ಕೊಂಚ ಆಮ್ಲಜನಕದ ಸಮಸ್ಯೆಯಾಯಿತು. ಆದರೆ, ಅದನ್ನೆಲ್ಲ ಮೀರಿ ನಾವು ಅಲ್ಲಿಗೆ ಹೋಗಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಬಂದೆವು ಎನ್ನುತ್ತಾರೆ ಬೈಕ್ ರೈಡರ್‌ಗಳು. ಒಟ್ಟಾರೆ ಪ್ರವಾಸಿ ತಾಣಗಳನ್ನು ಸುತ್ತಲು ಪ್ರವಾಸ ಕೈಗೊಂಡಿದ್ದ ಬೈಕ್ ರೈಡರ್ ಗಳು ಉತ್ತರ ಭಾರತದಲ್ಲಿ ಎದುರಾದ ಪ್ರವಾಹದಿಂದ ಅದೃಷ್ಟವಸಾತ್ ಪಾರಾಗಿದ್ದು ಮರಳಿ ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ