Focus News
Trending

ಧರ್ಮಕ್ಕಿಂತ ಸಂಬಂಧಗಳನ್ನು ಬೆಸೆಯುವ ಭಾಷೆಯೇ ದೊಡ್ಡದು: ಶಾಂತಾರಾಮ ನಾಯಕ

ಅಂಕೋಲಾ : ಕನ್ನಡ ನಾಡಿನಲ್ಲಿ ಯಾವುದೇ ಧರ್ಮಕ್ಕಿಂತ ಮಾನವೀಯ ಸಂಬಂಧಗಳನ್ನು ಬೆಸೆಯುವ ಭಾಷೆಯೇ ದೊಡ್ಡದು ಎಂದು ಹಿರಿಯ ಸಾಹಿತಿ ಹಾಗೂ ನಿಕಟಪೂರ್ವ ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಶಾಂತಾರಾಮ ನಾಯಕ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಉ.ಕ. ಜಿಲ್ಲಾ ಘಟಕ ಮತ್ತು ಅಂಕೋಲಾ ತಾಲೂಕು ಘಟಕ ಇವರ ಸಹಯೋಗದಲ್ಲಿ ಜೈ ಹಿಂದ್ ಹೈಸ್ಕೂಲ್ ಸಭಾಭವನದಲ್ಲಿ ಆಯೋಜಿಸಿದ್ದ 2022-23 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 100 ಅಂಕ‌ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ವಿಶೇಷತೆ ಇದೆ. ಇಂತಹ ಕನ್ನಡ ಭಾಷೆಯನ್ನು ಬೆಳೆಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಶ್ಲಾಘನೀಯ. ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಇದೆ. ಕಸಾಪ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನ್ನಡಕ್ಕಾಗಿ ವಿಶೇಷ ವಿನೂತನ ಕಾರ್ಯಕ್ರಮಗಳು ನಡೆಯುತ್ತಿರುವದು ಶ್ಲಾಘನೀಯ. ಅಂಕೋಲಾ ತಾಲೂಕು ಘಟಕದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದೂ ಕೂಡ ಅಭಿನಂದನೀಯ ಎಂದರು.

ಪ್ರಶಸ್ತಿ ಪತ್ರ ಪ್ರದಾನ ಮಾಡಿದ ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಮಾತನಾಡಿ ಯಾವುದೇ ವಿಷಯಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆಯಬಹುದು ಆದರೆ ಭಾಷಾ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಪಡೆಯುವದು ಕಷ್ಟ ಯಾಕೆಂದರೆ ಭಾಷೆಯ ಬಗ್ಗೆ ವಿಶಾಲ ಜ್ಞಾನವನ್ನು ಹೊಂದಬೇಕಾಗುತ್ತದೆ. ಇದೇ ವೇಳೆ ವಿದ್ಯಾರ್ಥಿಗಳು ಯಾವುದೇ ಶಿಕ್ಷಣವನ್ನು ಪಡೆದರೂ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಿ ಎಂದು ಕಿವಿಮಾತನ್ನು ಹೇಳಿದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಮಾತನಾಡಿ ಪಠ್ಯಪುಸ್ತಕದ ಜೊತೆಗೇ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು. ಶಾರೀರಿಕವಾಗಿ ಮತ್ತು ಸಾಂಸ್ಕ್ರತಿಕವಾಗಿಯೂ ಮಕ್ಕಳು ಬೆಳೆಯಲು ಅವಕಾಶ ಕಲ್ಪಿಸಬೇಕು, ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಮರ್ತುಜಾ ಆನೆಹೊಸೂರ ಮಾತನಾಡಿ ಪ್ರತಿಭೆ ಯಾರ ಸೊತ್ತಲ್ಲ ಸಾಧಿಸುವ ಛಲ ಇರಬೇಕು ಎಂದರು. ಜಿಲ್ಲಾ ಘಟಕದ ಅಧ್ಯಕ್ಷರು ಈಗಾಗಲೇ ಹಿರಿಕಿರಿಯ ಸಾಹಿತಿಗಳಿಗಾಗಿ ಅಕ್ಷರೋತ್ಸವ, ಯುವ ಸಾಹಿತಿಗಳಿಗಾಗಿ ಆಕಾಶವಾಣಿ ಕಾರ್ಯಕ್ರಮ, ಅನುದಿನ ಅನುಸ್ಪಂದನ, ದಿನಕರ ದೇಸಾಯಿಯವರ ಜನ್ಮದಿನದ ಮಾಸಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಮಾಡಿ ಪ್ರಶಂಸನೀಯವಾಗಿದ್ದಾರೆ. ನಿಕಟಪೂರ್ವ ತಾಲೂಕಾ ಸಮ್ಮೇಳನಾಧ್ಯಕ್ಷೆ ಹೊನ್ನಮ್ಮ ನಾಯಕ ಮಾತನಾಡಿ ಯಶಸ್ಸಿನ ಹಿಂದೆ ಬಹಳ ದೊಡ್ಡ ಪರಿಶ್ರಮ ಇರುತ್ತದೆ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಾಲೆಯ, ಶಿಕ್ಷಕರ ಮತ್ತು ಪೋಷಕರ ಪರಿಶ್ರಮ ಹೆಚ್ಚಿನದಾಗಿರುತ್ತದೆ. ಮಕ್ಕಳಲ್ಲಿ ಪರಿಶ್ರಮದ ಜೊತೆಗೆ ಆಸಕ್ತಿಯೂ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ ಎನ್ ವಾಸರೆ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಇದು ಕನ್ನಡದ ಜನ ಸಾಮಾನ್ಯರ ಪರಿಷತ್ ಆಗಿ ಇರಬೇಕು ಕೇವಲ ಸಾಹಿತಿಗಳಿಗೆ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರಬಾರದು. ಇಂಗ್ಲೀಷ ಪ್ರಧಾನ ಅಲ್ಲ ಇಂದು ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ‌ನ್ನು ಕೂಡ ಕನ್ನಡದಲ್ಲೆ ಬರೆಯುವ ಅವಕಾಶ ಇದೆ. ಇಂಗ್ಲೀಷ ಭಾಷೆಯೂ ಬೇಕು, ಆದರೆ ಕನ್ನಡದ ಮೇಲೆ ಸವಾರಿ ಮಾಡುವ ಇಂಗ್ಲೀಷ ಬೇಡ. ಪತ್ರಿಕೆ, ಪುಸ್ತಕ ಓದುವ ಹವ್ಯಾಸವನ್ನೂ ಬೆಳೆಸಿಕೊಳ್ಳಿ ಎಂದರು.

ವೇದಿಕೆಯಲ್ಲಿ ಜೈಹಿಂದ್ ಹೈಸ್ಕೂಲ್ ಮುಖ್ಯಾಧ್ಯಾಪಕ ಪ್ರಭಾಕರ ಬಂಟ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ಎನ್ ನಾಯಕ, ಮಾದ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಆರ್ ನಾಯಕ ಉಪಸ್ಥಿತರಿದ್ದು ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ಕಾರ್ಯದರ್ಶಿ ಜಿ ಆರ್ ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಸುಜೀತ ನಾಯ್ಕ ವಂದಿಸಿದರು. ರಫೀಕ ಶೇಖ, ಪ್ರಕಾಶ ಕುಂಜಿ ಸಹಕರಿಸಿದರು. ಈ ಸಂದರ್ಭದಲ್ಲಿ ಕಸಾಪ ಸದಸ್ಯರಾದ ವಿಠ್ಠಲ ಗಾಂವಕರ, ಎಂ ಬಿ ಆಗೇರ, ಡಾ.ಅರ್ಚನಾ ನಾಯ್ಕ ಪ್ರಶಸ್ತಿ ಪುರಸ್ಕ್ರತ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಇದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button