ಅಂಕೋಲಾ : ತಾಲೂಕಿನ ಹೊನ್ನೆಬೈಲ್ – ಮುಂಜಗುಣಿ ವ್ಯಾಪ್ತಿಯ ಸಮುದ್ರ ಮತ್ತು ಗುಡ್ಡದಂಚಿನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಎತ್ತುಗಲ್ಲು ಬಳಿ ಗಾಳ ಹಾಕಿ ಮೀನು ಹಿಡಿಯಲು ಹೋದ ಬೆಳಂಬಾರ ಗ್ರಾ.ಪಂ ಮಾಜಿ ಅಧ್ಯಕ್ಷ ಮಾದೇವ ಗೌಡ ಸಮುದ್ರ ತೀರದಲ್ಲಿ ಶೇಖರಗೊಂಡ ಕಟ್ಟಿಗೆ ಮತ್ತು ಕಸ ತ್ಯಾಜ್ಯಗಳ ನಡುವೆ ಕೊಳೆತು ಬಿದ್ದಿದ್ದ ಅಪರಿಚಿತ ಶವವೊಂದನ್ನು ಗಮನಿಸಿ ತನ್ನ ಗೆಳೆಯ ಹೊನ್ನೆಬೈಲ್ ಮಾದೇವ ಗೌಡ ಮೂಲಕ ಪೋಲೀಸರರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪಿ.ಎಸ್. ಐ ಉದ್ದಪ್ಪ ಎ. ಧರೆಪ್ಪ ನವರ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದರು.
ಕಳೆದ ಕೆಲ ದಿನಗಳ ಹಿಂದೆ ಅದಾವುದೋ ಕಾರಣದಿಂದ ಮೃತಪಟ್ಟಿರುವ ಈ ವ್ಯಕ್ತಿಯ ದೇಹ ಗುರುತಿಸಲಾಗದಷ್ಟು ಕೊಳೆತು ನಾರುತ್ತಿತ್ತಲ್ಲದೇ, ದೇಹದ ಅಲ್ಲಲ್ಲಿ ಮಾಂಸವಿಲ್ಲದೇ ಮೂಳೆಯ ಮೇಲಿನ ಹೊದಿಕೆಯಂತೆ ಕಂಡು ಬರುತ್ತಿತ್ತು. ಪೋಲೀಸರು ಸ್ಥಳ ಮಹಜರು ನಡೆಸಿದರಾದರೂ, ಕಲ್ಲು ಬಂಡೆ, ಗುಡ್ಡದ ಕಡಿದಾದ ದುರ್ಗಮ ಪ್ರದೇಶದಲ್ಲಿ ಮೃತದೇಹವನ್ನು ಹೊತ್ತು ಸಾಗಿಸುವುದು ಅತೀವ ಕಷ್ಟ ಹಾಗೂ ತ್ರಾಸದಾಯಕವಾಗಿತ್ತು. ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಲು ಇಲ್ಲವೇ ಶೈತ್ಯಾಗಾರದಲ್ಲಿ ಇಡುವ ಪೂರ್ವ ಪೊಲೀಸರು ಅತೀವ ಪ್ರಯಾಸ ಪಟ್ಟು ಶವ ಹೊತ್ತು ಸಾಗಿಸಬೇಕಾಯಿತು..
ಪಿ ಎಸ್ ಐ ಉದ್ದಪ್ಪ ಸಿಬ್ಬಂದಿಗಳಿಗೆ ಕೇವಲ ಮಾರ್ಗದರ್ಶನವಷ್ಟೇ ಮಾಡದೇ ತಾವೂ ಸಹ ಸಿಬ್ಬಂದಿಗಳೊಂದಿಗೆ ಸ್ವತಃ ಕೈ ಜೋಡಿಸಿ ಮೃತದೇಹವನ್ನು ಮೇಲೆತ್ತಿ, ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ, ಸಾಗಿಸಲು ಅನುಕೂಲವಾಗುವಂತೆ ಬಿದಿರಿನ ಕೋಲಿಗೆ ಮೃತದೇಹ ಕಟ್ಟಿದರಲ್ಲದೇ, ಕಲ್ಲು – ಬಂಡೆ, ಗುಡ್ಡ ಹಾಗೂ ಕಂದಕ ಪ್ರದೇಶದ ಗಿಡಗಂಟಿಗಳ ನಡುವಿನ ದುರ್ಗಮ ಹಾದಿಯಲಿ , ಬಹುದೂರದ ವರೆಗೆ ಸಾಗಿಸಿ ರಕ್ಷಕ ವಾಹನ ನಿಂತಿದ್ದ ಸ್ಥಳಕ್ಕೆ ಸಾಗಿಸಿದರು.
ಪೋಲೀಸ್ ಸಿಬ್ಬಂದಿಗಳಾದ ಸತೀಶ ಅಂಬಿಗ, ಜಗದೀಶ ನಾಯ್ಕ, ನಂದನ ಶೆಟ್ಟಿ, ದೇವಾನಂದ ಜೊತೆ ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಮಾದೇವ ಸುಬ್ಬು ಗುನಗ, ಪ್ರಮುಖರಾದ ಬೊಮ್ಮಾ ಗೌಡ, ಲೋಹಿತ ಗೌಡ, ಅರಣ್ಯ ಇಲಾಖೆ ಸಿಬ್ಬಂದಿ ನೀಲಾಧರ ಗೌಡ ಮತ್ತಿತರರು ಸಹಕರಿಸಿದರು. ಅತ್ಯಂತ ಕಡಿದಾದ ದಾರಿಯಲ್ಲಿ ಸಾಗಿ ಅತೀವ ಪ್ರಯಾಸ ಪಟ್ಟು ಎರಡು ಮೂರು ಕಿಲೋಮೀಟರ ಗೂ ಹೆಚ್ಚಿನ ದೂರವನ್ನು ಕಾಲುನಡಿಗೆಯಲ್ಲಿ ಸಾಗಿ, ಅಲ್ಲಿಂದ ಮತ್ತೆ ತಾವೇ ಮುಂದಾಗಿ ಮೃತ ದೇಹವನ್ನು ಹೊತ್ತು ತರುವ ಮೂಲಕ ಪಿ ಎಸ್ ಐ ಉದ್ದಪ್ಪ ಸರ್ ಮತ್ತು ಇಲಾಖೆ ಸಿಬ್ಬಂದಿಗಳು ಮಾದರೀ ಕರ್ತವ್ಯ ನಿರ್ವಹಿಸಿದ್ದು ಇದು ಅಂಕೋಲಾ ಠಾಣೆಯ ಘನತೆ ಹೆಚ್ಚಿಸಿದೆ ಎಂದು ಸಾರ್ವಜನಿಕರ ಪರವಾಗಿ ಪ್ರಮುಖರಾದ ಬೆಳಂಬಾರದ ಆನಂದು ಗೌಡ ಪೊಲೀಸ್ ಇಲಾಖೆಯ ಕಾರ್ಯ ವೈಖರಿ ಕುರಿತು ಮೆಚ್ಚುಗೆಯ ಮಾತನ್ನಾಡಿದರು.
ನಂತರ ಹೊನ್ನೆಬೈಲ್ ಮುಖ್ಯ ರಸ್ತೆಯ ಮೂಲಕ ಅಂಕೋಲಾ ಮಾರ್ಗವಾಗಿ ಜಿಲ್ಲಾ ಆಸ್ಪತ್ರೆ ಶವಗಾರಕ್ಕೆ ಮೃತ ದೇಹ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯ್ ಕುಮಾರ ವೈ ನಾಯ್ಕ ಸಹಕರಿಸಿದರು.ಮೃತ ವ್ಯಕ್ತಿಯ ಎಡಗೈನಲ್ಲಿ ರಕ್ಷಾ ಬಂಧನ ದಂತ ಬಣ್ಣದ ದಾರವೊಂದಿದ್ದು, ಮೃತ ವ್ಯಕ್ತಿ ಯಾರು ? ಎಲ್ಲಿಯವ ? ಯಾವಾಗ ಮತ್ತು ಯಾವ ಕಾರಣದಿಂದ ಎಲ್ಲಿ ಸತ್ತಿರಬಹುದು ಎಂಬ ಕುರಿತಂತೆ ಪೊಲೀಸ ತನಿಖೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ಮೃತ ವ್ಯಕ್ತಿಯ ಗುರುತು ಪರಿಚಯ ಇದ್ದವರು, ಇಲ್ಲವೇ ವಾರಸುದಾರರಿದ್ದರೆ ಸಂಬಂಧಿಸಿದವರು ತಮ್ಮ ಹತ್ತಿರದ ಪೋಲೀಸ್ ಠಾಣೆಯ ಮೂಲಕ ಇಲ್ಲವೇ ನೇರವಾಗಿ ಅಂಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ