Follow Us On

WhatsApp Group
Important
Trending

ರೆಡಿಮೇಡ್ ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ: ಚವತಿ ಸೀಸನ್ ಸೇಲ್ ಗೆ ತಂದಿದ್ದ ಹೊಸ ಸ್ಟಾಕ್ ಸಹ ಬೆಂಕಿಗಾಹುತಿ

ಎರಡೂ ತಾಸಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ

ಅಂಕೋಲಾ: ಪಟ್ಟಣದ ಅಂಬಾರಕೊಡ್ಲ ರಸ್ತೆ ತಿರುವಿನ ಬಳಿ  ರೆಡಿಮೇಡ್ ಬಟ್ಟೆ ಅಂಗಡಿಯೊಂದರಲ್ಲಿ ರಾತ್ರಿ ಕಾಣಿಸಿಕೊಂಡ ,ಆಕಸ್ಮಿಕ ಬೆಂಕಿಯಿಂದ, ಅಂಗಡಿಯ ಪೀಠೋಪಕರಣ,ಮೇಲ್ಚಾವಣಿ ಮತ್ತು ಅಂಗಡಿಯಲ್ಲಿದ್ದ ಬಟ್ಟೆ ಮತ್ತಿತರ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂ ಹಾನಿ ಸಂಭವಿಸಿದೆ.    ಹೊನ್ನೇಕೇರಿ ಮೂಲದ ಯುವಕನೋರ್ವ ಸ್ಪ ಉದ್ಯೋಗ ಮಾಡಬೇಕೆಂಬ ಸದಿಚ್ಛೆಯಿಂದ ಪಟ್ಟಣದಲ್ಲಿ ಈ ಅಂಗಡಿಯನ್ನು ಬಾಡಿಗೆಗೆ ಪಡೆದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ರೊಯ್ ಫ್ಯಾಶನ್ ಎನ್ನುವ ಹೆಸರಿನ ರೆಡಿಮೇಡ್ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ.

ಬರಲಿರುವ ಗಣೇಶ ಚೌತಿ ಮತ್ತಿತರ ಹಬ್ಬಗಳ ಸೀಸನ್‌ನಲ್ಲಿ  ಹೆಚ್ಚಿನ ವ್ಯಾಪಾರ ಆಗಬಹುದೆಂಬ ನಿರೀಕ್ಷೆಯಲ್ಲಿ ,  ಮತ್ತಷ್ಟು ಬಂಡವಾಳ ತೊಡಗಿಸಿ, ಹೊಸ ಹೊಸ ಬಟ್ಟೆಗಳನ್ನು ತರಿಸಿ ಶೇಖರಿಸಿಟ್ಟಿದ್ದ ಎನ್ನಲಾಗಿದ್ದು, ಆತನ ದುರದೃಷ್ಟವೇನೋ ಎಂಬಂತೆ, ರಾತ್ರಿ ಅಂಗಡಿ ಬಂದ ಇರುವ ವೇಳೆ ಅದೇಗೋ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಅದನ್ನು ಗಮನಿಸಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ.

ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿಯೇ,ಬೆಂಕಿ  ಜೋರಾಗಿ ಎಲ್ಲೆಡೆ ಹೊತ್ತಿ ಉರಿದಿದ್ದು, ಅಂಗಡಿಯ ಪೀಠೋಪಕರಣ,ರೆಡಿಮೇಡ್ ಬಟ್ಟೆ  ಮತ್ತಿತರ ಸಾಮಗ್ರಿಗಳು ಸುಟ್ಟು ಕರಕಲಾಗಿದೆ, ಹಳೆಯ ಕಟ್ಟಡ, ಇಕ್ಕಟ್ಟಾದ ಜಾಗ ಮತ್ತಿತರ ಕಾರಣಗಳಿಂದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು.ಆದರೂ ಅತೀವ ಪ್ರಯಾಸ ಪಟ್ಟು ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಎರಡು ತಾಸಿಗೂ ಹೆಚ್ಚು ಕಾಲ ಸತತ ಕಾರ್ಯಾಚರಣೆ ಕೈಗೊಂಡರು ಮತ್ತು ಅಕ್ಕ ಪಕ್ಕದ ಬೇಕರಿ, ಝೆರಾಕ್ಸ ಅಂಗಡಿ, ಮೊಬೈಲ್ ಸರ್ವಿಸ್ ಸೆಂಟರ್,ತರಕಾರಿ ಮತ್ತಿತರ ಅಂಗಡಿ ಹಾಗೂ ಇತರೆ ಕಟ್ಟಡಗಳಿಗೆ ಬೆಂಕಿಯ ಜ್ಞಾಲೆ ಹರಡದಂತೆ ನೀರು ಸಿಂಪಡಿಸಿ ಸಂಭವನೀಯ  ಹೆಚ್ಚಿನ ಅಪಾಯ ತಪ್ಪಿಸಿದರು.

ಬೆಂಕಿಯಿಂದ ರೆಡಿಮೆಡ್ ಶಾಪ್ ನ  ಮೇಲ್ಚಾವಣಿಯ ಕಟ್ಟಿಗೆ, ಹಂಚು ಕೆಳಗೆ ಬೀಳುವ ಅಪಾಯದ ಸಾಧ್ಯತೆ ಇದ್ದರೂ ಸಹ ಇಕ್ಕಟ್ಟಾದ ಸ್ಥಳದಲ್ಲಿ ಒಳನುಗ್ಗಿದ ಸಿಬ್ಬಂದಿಗಳು,ಅಂಗಡಿಯ ಒಳಗಡೆ  ಬೆಂಕಿ ತಗುಲಿ ಇನ್ನಷ್ಟು ಉರಿಯುವ ಸಾಧ್ಯತೆ ಇದ್ದ ಬಟ್ಟೆ ಬರೆ ಮತ್ತಿತರ ಸಾಮಗ್ರಿಗಳನ್ನು ಹೊರಗೆಳೆದು ,ಬೆಂಕಿಯ ಪ್ರಮಾಣ ಹೆಚ್ಚದಂತೆ ನೋಡಿಕೊಂಡರು. ಸ್ಥಳೀಯ 3-4 ಯುವಕರು ಮತ್ತಿತರರು ಸಹಕರಿಸಿದರು.

ಪಿಎಸ್ಐ ಉದ್ದಪ್ಪ ಧರಪ್ಪನವರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಸ್ಕಾಂ ಸಿಬ್ಬಂದಿಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ಅಂಗಡಿಯ ಬಟ್ಟೆ ಬರೆ, ಪೀಠೋಪಕರಣ ಮತ್ತಿತರ ಸಾಮಗ್ರಿಗಳ ಜೊತೆ ಸಿಲಿಂಗ್ ಫ್ಯಾನ್ , ಸ್ವಿಚ್ ಬೋರ್ಡ್, ಮೀಟರ್ ಬೋರ್ಡ್ ಸಹ ಸುಟ್ಟು ಹೋದಂತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣಗಳೇನಿರಬಹುದು ಮತ್ತು ಹಾನಿಯ ಒಟ್ಟೂ ಅಂದಾಜು ಮೌಲ್ಯವೇನು ಎಂಬ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ರೆಡಿಮೇಡ್ ಅಂಗಡಿಗೆ ಹೊಂದಿಕೊಂಡು ಇರುವ ಒಂದು ಮೊಬೈಲ್  ಶಾಪ್ ಗೂ ಅಲ್ಪ ಪ್ರಮಾಣದ ಹಾನಿಯಾಗಿರುವ ಸಾಧ್ಯತೆ ಇದ್ದು, ಮೊಬೈಲ್ ಸರ್ವೀಸ್ ಸೆಂಟರಿನಲ್ಲಿದ್ದ ಮೊಬೈಲ್ ಬಿಡಿಭಾಗ ಮತ್ತಿತರ ಸಾಮಾಗ್ರಿಯನ್ನು ಸುರಕ್ಷಿತವಾಗಿ ತೆಗೆದು ಬೇರೆಡೆ ಇಡಲು ರಾಜಕುಮಾರ  ಇಳಿಗೇರ  ಹೊನ್ನಿಕೇರಿ, ರತನ್ ನಾಯ್ಕ, ಕನಸಿಗದ್ದೆ, ಅಭಿ ನಾಯ್ಕ ಸೇರಿದಂತೆ ಹಾನಿಗೀಡಾದ ಶಾಪಗಳ ಮಾಲಕರ ಆಪ್ತರು, ಹಿತೈಷಿಗಳು ಮತ್ತು ಗೆಳೆಯರು ನೆರವಾದರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಕೆಲ ಸಾರ್ವಜನಿಕರು ಸಹಕರಿಸಿದರು.

ಕೆಲ ತಾಂತ್ರಿಕ ಕಾರಣಗಳಿಂದ ಕೇವಲ ಒಂದೇ ವಾಹನವಿದ್ದರೂ ಸಹ  ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅತೀವ ಶ್ರಮಪಟ್ಟು ಬೆಂಕಿ ಇತರಡೆ ಹರಡದಂತೆ , ಕಾರ್ಯಾಚರಣೆ ಕೈಗೊಂಡಿರುವುದಕ್ಕೆ ಕೆಲ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದರು. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button