Humanity Story: ಜಾತ್ರೆಯಲ್ಲಿ ಕಾಣೆಯಾಗಿದ್ದ ಮಗ ಮರಳಿ ತಾಯಿ ಮಡಿಲಿಗೆ: ಮಗನನ್ನು ಕಂಡು ಆನಂದಭಾಷ್ಪ ಸುರಿಸಿದ ಕುಟುಂಬಸ್ಥರು: ಆ ಸಂತಸದ ಕ್ಷಣ ಹೇಗಿತ್ತು ನೋಡಿ?
ಗ್ರಾಮದೇವಿ ಜಾತ್ರೆಯಲ್ಲಿ ಕುಟುಂಬದಿಂದ ಬೇರೆಯಾಗಿದ್ದ ವ್ಯಕ್ತಿ ವಿಳಾಸ ಪತ್ತೆ ಮಾಡಿದ್ದು ಹೇಗೆ ?
ಅಂಕೋಲಾ: ಮನೆ ಮಂದಿಯೊಂದಿಗೆ ಗ್ರಾಮ ದೇವಿ ಜಾತ್ರೆಗೆ ಬಂದಿದ್ದ ವ್ಯಕ್ತಿ ಕಾಣೆಯಾಗಿ ಕೆಲ ತಿಂಗಳೇ ಗತಿಸಿತ್ತು. ದಾರಿ ತಪ್ಪಿ ಬಂದ ಮನೆ ಮಗನನ್ನು ತಾಲೂಕಿನ ಹಟ್ಟಿಕೇರಿ ಟೋಲ್ ಮತ್ತು ಎನ್ ಎಚ್ ಎ ಐ ಸಿಬ್ಬಂದಿಗಳು ಆಹಾರ ನೀಡಿ, ಉಪಚರಿಸಿ ಮರಳಿ ತಾಯಿ ಮಡಿಲಿಗೆ ಸೇರಿಸುವ ಮೂಲಕ ಮಾನವೀಯತೆಗೆ ಮಾದರಿಯಾಗಿದ್ದಾರೆ.
ಕೆಳೆದ ಕೆಲ ದಿನಗಳ ಹಿಂದೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಹೆದ್ದಾರಿ ಟೋಲ್ ಗೇಟ್ ಬಳಿ ಅಪರಿಚಿತ ವ್ಯಕ್ತಿಯೋರ್ವ ಬಂದು ಅಲ್ಲೇ ಅಕ್ಕದಲ್ಲಿ ಅಲೆದಾಡುತ್ತಿದ್ದ. ಅವನ ಚಲನ ವಲನ ಗಮನಿಸಿದ ಸ್ಥಳೀಯ ಟೋಲ್ ಸಿಬ್ಬಂದಿಗಳು ಮತ್ತಿತರರು ಆತ ಸಾಮಾನ್ಯ ಬಿಕ್ಷುಕ ಇಲ್ಲವೇ ಅರೆಹುಚ್ಚನಿರಬಹುದು ಎಂದು ಸುಮ್ಮನಿರದೇ, ಅವನ ದೈನೇಸಿ ಸ್ಥಿತಿ ಕಂಡು ಮರುಗಿ, ಊಟ – ಉಪಹಾರ ನೀಡಿದ್ದರು. ಆತ ಯಾರಿರಬಹುದು ? ಎಂದು ಮಾಹಿತಿ ಕಲೆ ಹಾಕಲು ಕೆಲವರು ಮುಂದಾದರಾದರೂ ಮಿತ ಭಾಷಿಯಾದ ಅಪರಿಚಿತ ಸರಿಯಾಗಿ ಪ್ರತಿಕ್ರಿಯಿಸದಿರುವುದರಿಂದ ಆತನ ವಿಳಾಸ ಪತ್ತೆ ಕಾರ್ಯ ಸುಲಭ ಸಾಧ್ಯವಾಗಿರಲಿಲ್ಲ.
ಈ ವೇಳೆ ಎನ್ ಎಚ್ ಎ ಐ ಸುರಕ್ಷಾ ಸಿಬ್ಬಂದಿಗಳಾದ ನವೀನ ಪಡ್ತಿ, ವಿನಾಯಕ ಕುಂಬಾರ ಇವರು ಆ ವ್ಯಕ್ತಿಯ ಪ್ರೀತಿ ವಿಶ್ವಾಸ ಗಳಿಸಿ , ಆತನ ಕೈಯಲ್ಲಿ ಪೆನ್ನು ಹಾಳೆ ನೀಡಿ , ಆತನ ವಿಳಾಸ ಬರೆಯಿಸಿ ಕೊಳ್ಳುವ ಯತ್ನ ಮಾಡಿದ್ದಾರೆ. ಈ ವೇಳೆ ಪೂರ್ತಿ ವಿಳಾಸ ತಿಳಿಯದಿದ್ದರೂ, ಆತನ ಹೆಸರು, ಊರಿನ ವಿಳಾಸ ದೊರೆತಿದೆ. ಅದೇ ಆಧಾರದ ಮೇಲೆ ಬೆಳಗಾವಿ – ಬೈಲಹೊಂಗಲ ಭಾಗದ ಮಾಜಿ ಜನಪ್ರತಿನಿಧಿಯೋರ್ವರ ಆಪ್ತ ಸಹಾಯಕವನ್ನು ಸಂಪರ್ಕಿಸಿ, ವಿಳಾಸ ಪತ್ತೆಗೆ ಸಹಕರಿಸುವಂತೆ ಕೋರಿಕೊಂಡಿದ್ದರು. ಅವರ ಮೂಲಕ ಮನೆಯವರ ಸಂಪರ್ಕ ವಿಳಾಸ ಸಿಕ್ಕಿದೆ.
ನಂತರ ಪರಸ್ಪರರು ಪೊಟೋ ವಿನಿಮಯ ಮಾಡಿಕೊಂಡು, ವ್ಯಕ್ತಿ ಗುರುತು ಖಚಿತಪಡಿಸಿಕೊಂಡಿದ್ದಾರೆ. ನಂತರ ಕುಟುಂಬಸ್ಥರು ಖಾಸಗೀ ವಾಹನದಲ್ಲಿ ದೂರದ ಪ್ರಯಾಣ ನಡೆಸಿ ತಮ್ಮ ಕುಟುಂಬಸ್ಥನನ್ನು ಕರೆದು ಕೊಂಡು ಹೋಗಲು ಅಂಕೋಲಾಕ್ಕೆ ಬಂದಿದ್ದಾರೆ. ಟೋಲ್ ಬಳಿ ಬಂದಿಳಿದ ಕುಟುಂಬಸ್ಥರು , ಸ್ಥಳೀಯರ ಉಪಚಾರದಲ್ಲಿದ್ದ ತಮ್ಮ ಮನೆ ಮಗನನ್ನು ಕಂಡು ಆನಂದ ಭಾಷ್ಪ ಸುರಿಸಿ ಗದ್ವಿತರಾಗಿ, ಆತನಿಗೆ ಪ್ರೀತಿಯ ಸ್ಪರ್ಶ ನೀಡಿದ್ದಾರೆ. ಆ ವ್ಯಕ್ತಿ ಸಹ ತನ್ನ ತಾಯಿ ಹಾಗೂ ಚಿಕ್ಕಮ್ಮ ಸೇರಿದಂತೆ ಇತರರನ್ನು ಗುರುತಿಸಿದ್ದಾನೆ,
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ಕಿತ್ತೂರ ವ್ಯಾಪ್ತಿಯ ಬಸರಕೋಡ ಗ್ರಾಮದ ರವಿ ಅರ್ಜುನ ಆರೇರ ಎಂಬಾತ ಕಳೆದ ಕೆಲ ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡ ಬಳಿಕ , ಸಂಪ್ರದಾಯದಂತೆ ಮದುವೆಯಾಗಿ ಸುಖ ಸಂಸಾರದ ಕನಸು ಕಂಡಿದ್ದನಲ್ಲದೇ ಕಷ್ಟ ಪಟ್ಟು ದುಡಿದು ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದ. ಆದರೆ ನೂತನ ದಾಂಪತ್ಯ ಜೀವನದ ವರ್ಷಗಳೆಯುವುದರೊಳಗಾಗಿ ಸಾಂಸಾರಿಕ ಏರು ಪೇರಿನಿಂದಾಗಿ ಹೆಂಡತಿ ಮನೆ ಬಿಟ್ಟು ಹೋಗಿದ್ದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಆತನ ಬುದ್ಧಿ ಸ್ವಲ್ಪ ಮಂದವಾದಂತಿತ್ತು,
ಈ ನಡುವೆ ಕಳೆದ ಎಪ್ರಿಲ್ ವೇಳೆಗೆ ತನ್ನ ತಾಯಿ ಮತ್ತಿತರರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅರ್ಲ ಮಾಡದ ಗ್ರಾಮ ದೇವಿ ಜಾತ್ರೆಗೆ ಬಂದಿದ್ದವ ಅದೇಗೋ ಅಲ್ಲಿ ಮನೆಯವರಿಂದ ಬೇರೆಯಾಗಿದ್ದಾನೆ . ಆ ಬಳಿಕ ಆತನಿಗಾಗಿ ಕುಟುಂಬಸ್ಥರು ಹಲವೆಡೆ ಹುಡುಕಾಟ ನಡೆಸುತ್ತಲೇ ಇದ್ದರು. ಈ ನಡುವೆ ಅಂಕೋಲದಲ್ಲಿ ಆತನ ಇರುವಿಕೆ ತಿಳಿದು ಬಂದಿದೆ ಎಂದು ಫೋನ್ ಕರೆ ಬಂದಾಗ ಕುಟುಂಬಸ್ಥರ ಮನದಲ್ಲಿ ಸಂತಸ ಮೂಡುವಂತಾಗಿತ್ತು. ಇಲ್ಲಿ ಬಂದು ಆತನನ್ನು ನೇರವಾಗಿ ನೋಡಿದಾಗ ಖುಷಿ ಹೆಚ್ಚುವಂತಾಯಿತು.
ಕಳೆದ ಕೆಲ ದಿನಗಳಿಂದ ಆತನಿಗೆ ಆಗಾಗ ಸ್ನಾನ ಮಾಡಿಸಲು ವಿಶೇಷ ಕಾಳಜಿ ವಹಿಸಿದ ಪಾಂಡುರಂಗ ನಾಯ್ಕ,,ಪ್ರತಿದಿನ ಊಟ ಉಪಹಾರ ನೀಡಿದ ಅಂಕೋಲಾದ ಶಿವಾ ನಾಯ್ಕ, ನಿತಿನ್ ನಾಯ್ಕ ದರ್ಶನ್ ನಾಯ್ಕ ,ರಾಜೇಶ ನಾಯ್ಕ ಚಂದ್ರಹಾಸ ಬಂಡಾರಿ, ವಿನೋರ ನಾಯ್ಕ, ಮಂಜು ಗಾಂವಕರ, ಸೇರಿದಂತೆ ಸ್ಥಳೀಯರ ಮತ್ತು ಇತರೆ ಪ್ರಯಾಣಿಕರ ಮಾನವೀಯ ಗುಣದಿಂದ ನಮ್ಮ ಮನೆ ಮಗ ಮತ್ತೆ ದೂರದ ಹಾದಿಯಲ್ಲಿ ಸಾಗದೇ ಇಲ್ಲೇ ಉಳಿಯುವಂತಾಗಿ ನಮ್ಮ ಕೈಗೆ ಸಿಗುವಂತಾಗಿದೆ.ಹಾಗಾಗಿ ಈ ಮಹತ್ಕಾರ್ಯದ ಹಿಂದಿರುವ ಎಲ್ಲರಿಗೂ ಕುಟುಂಬದ ಪರವಾಗಿ ಧನ್ಯತೆ ಸಮರ್ಪಿಸುವುದಾಗಿ ತಿಳಿಸಿದರು.
ಆ ವ್ಯಕ್ತಿಯ ಕರುಣಾಜನಕ ಕಥೆ ಕೇಳಿ ಕೊನೆಗೂ ಅವನನ್ನು ತಾಯಿಯ ಮಡಿಲಿಗೆ ಸೇರಿಸಿದ ಸಾರ್ಥಕತೆ ಟೋಲ್ ಮತ್ತು ಎನ್ ಎಚ್ ಎ ಐ ಸಿಬ್ಬಂದಿಗಳಲ್ಲಿ ಕಂಡುಬಂತು. ಸುದ್ದಿ ತಿಳಿದ ಅಂಕೋಲಾ ಸಿಪಿಐ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ, ಆ ವ್ಯಕ್ತಿಯ ಆರೋಗ್ಯ ವಿಚಾರಿಸಿ,ಕುಟುಂಬಸ್ಥರಿಗೆ ಆತನನ್ನು ಹಸ್ತಾಂತರಿಸಿದರು.ಕಳೆದ ಕೆಲವು ದಿನಗಳಿಂದ ತನಗೆ ಊಟ ಉಪಹಾರ ನೀಡಿದ ಸ್ಥಳೀಯರಿಗೆ ರವಿ ಆರೇರ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ ಪರಿ, ಆತನನ್ನು ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟ ಅಂಕೋಲಾ ಟೋಲ್ ಸಿಬ್ಬಂದಿಗಳ ನಡುವಿನ ಬಾಂಧವ್ಯ ಮಾನವೀಯತೆ ಮತ್ತು ಉಪಕಾರ ಸ್ಮರಣೆಯ ಸಾಕ್ಷಿ ಚಿತ್ರದಂತೆ ಕಂಡುಬಂತು.
ನಾನಾ ಕಾರಣಗಳಿಂದ ನೊಂದ ಕುಟುಂಬದಲ್ಲಿ, ತಮ್ಮ ಮಾನವೀಯ ಸೇವೆಯ ಮೂಲಕ ಕೊಂಚವಾದರೂ ನೆಮ್ಮದಿ ಮತ್ತು ಸಂತಸ ಮೂಡಿಸಿ ತಾಯಿ ಮತ್ತು ಮಗನನ್ನು ಕೂಡಿಸಿದ, ನವೀನ ಪಡ್ತಿ, ಮತ್ತು ಟೋಲ್ ಸಿಬ್ಬಂದಿಗಳು ಹಾಗೂ ಪ್ರತ್ಯಕ್ಷ -ಅಪರೋಕ್ಷ ಸೇತು – ಬಂಧವಾದ ಸರ್ವರ ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ