ಅಂಕೋಲಾ : ವ್ಯಕ್ತಿಯೋರ್ವ ಮರಕ್ಕೆ ನೈಲಾನ್ ಹಗ್ಗ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸುಂಕಸಾಳ ಗ್ರಾಪಂ ವ್ಯಾಪ್ತಿಯ ಹೆಬ್ಬುಳ ಅರಣ್ಯ ಪ್ರದೇಶದಲ್ಲಿ ವರದಿಯಾಗಿದೆ. ರಸ್ತೆಯಂಚಿನ ಅರಣ್ಯ ಪ್ರದೇಶದಲ್ಲಿ ಶವ ತೂಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದ್ದಾರೆ. ಅವರ್ಸಾ ದಂಡೇ ಭಾಗ ಮೂಲದ ಹಾಲಿ ಹೆಬ್ಬುಳದಲ್ಲಿಯೇ ಹೆಚ್ಚಾಗಿ ವಾಸಿಸುತ್ತಿದ್ದ ಅಮಿತ ಕಮಲಾಕರ ತಳೇಕರ (35) ಮೃತ ದುರ್ದೇವಿಯಾಗಿದ್ದಾನೆ.
ಪಿ. ಎಸ್ ಐ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ, ಕಾನೂನು ಕ್ರಮ ಮುಂದುವರೆಸಿದ್ದಾರೆ.ಕಡಿದಾದ ಏರು- ಇಳಿಜಾರಿನ ಅರಣ್ಯ ಪ್ರದೇಶದಲ್ಲಿ ಸಾಗಿ, ಕೌಲು ಮರದಲ್ಲಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ, ರಸ್ತೆ ಬಳಿ ತರಲು ಪೊಲೀಸ್ ಸಿಬ್ಬಂದಿಗಳು ಮತ್ತು ಸ್ಥಳೀಯರು ಹರಸಾಹಸ ಪಡುವಂತಾಯಿತು. ಅಮಿತ ತಳೇಕರ ಮೃತಪಟ್ಟು 1-2 ದಿನಗಳೇ ಕಳೆದು ಹೋಗಿರುವ ಸಾಧ್ಯತೆ ಇದ್ದು, ಶವದ ದುರ್ವಾಸನೆಯಿಂದ ಕಾರ್ಯಾಚರಣೆಗೆ ಮತ್ತಷ್ಟು ತೊಡಕಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತ್ ನ ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಊರ ನಾಗರಿಕರು ಮೃತನ ಕುಟುಂಬಸ್ಥರಿದ್ದರು.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ್ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ್ ಸಹಕರಿಸಿದರು.
ಅರಣ್ಯ ಇಲಾಖೆಯ ಹಳೆಯ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದ ಅಮಿತ ತಳೇಕರ,ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾದಂತಿದೆ ಎಂಬ ಮಾತು ನಾರ್ವಜನಿಕ ವಲಯದಿಂದ ಕೇಳಿ ಬಂದಂತಿದ್ದು, ಆತ ಮೃತಪಟ್ಟ ಘಟನೆ ಕುರಿತಂತೆ ಪೊಲೀಸರಿಂದ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ