ನದಿಭಾಗ ತೀರದಲ್ಲಿ ಕೋಡಿ ತೆರವು: ಸಾಂಪ್ರದಾಯಿಕ ಕಾರ್ಯದಲ್ಲಿ ನಿರತರಾದ ಗ್ರಾಮಸ್ಥರು

ಅಂಕೋಲಾ: ತಾಲೂಕಿನ ಬಬ್ರುವಾಡ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ನದಿಬಾಗ ಎಂಬ ಸುಂದರ ಪುಟ್ಟ ಗ್ರಾಮವಿದೆ. ಮಳೆಗಾಲ ಆರಂಭವಾದೊಡನೆ ಸಮುದ್ರ ಸಂಗಮ ಪ್ರದೇಶದಲ್ಲಿ ಕೋಡಿ ಕಡಿಯುವ ವಿಶಿಷ್ಟ ಪದ್ಧತಿ ಇಲ್ಲಿ ಬಹು ಕಾಲದಿಂದ ನಡೆದುಕೊಂಡು ಬಂದಿದೆ. ಇದಾದ ನಂತರವೇ ಸುತ್ತಮುತ್ತಲಿನ ಹೆಚ್ಚಿನ ಪ್ರದೇಶಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡಬೇಕಾದ ಅನಿವಾರ್ಯತೆ ಇದೆ.

ಒಂದೆಡೆ ಸಮುದ್ರ ಇನ್ನೊಂದೆಡೆ ಹಳ್ಳದ ತೊರೆ ಇದ್ದು ಇವೆರಡರ ಮಧ್ಯೆ ಬೇಸಿಗೆಯಲ್ಲಿ ನಾನಾ ಕಾರಣಗಳಿಂದ ನೈಸರ್ಗಿಕ ಮರಳು ದಿಬ್ಬ ಸೃಷ್ಟಿಯಾಗುತ್ತದೆ. ಮರಳು ದಿಬ್ಬ ಸೃಷ್ಟಿಯಿಂದ ಸಮುದ್ರ ಮತ್ತು ಹಳ್ಳದ ತೊರೆ ಒಂದಕ್ಕೊoದು ಸಂಪರ್ಕ ಕಡಿದುಕೊಳ್ಳುತ್ತವೆ. ಮಳೆಗಾಲ ಆರಂಭವಾದೊಡೊನೆ ಸಮುದ್ರ ಹಿನ್ನೀರಿನ ಪ್ರದೇಶವಾದ ಪೂಜಗೇರಿ ಹಳ್ಳಕ್ಕೆಅಕ್ಕಪಕ್ಕದ ಬೆಟ್ಟಗುಡ್ಡಗಳು ಹಾಗೂ,ಬಯಲು ಪ್ರದೇಶಗಳಿಂದ ನೀರು ಹರಿದು ಬಂದು ಸೇರಿಕೊಳ್ಳುತ್ತದೆ. ಎಲ್ಲೆಡೆಯಿಂದ ಹರಿದು ಬರುವ ಹೆಚ್ಚಿನ ಪ್ರಮಾಣದ ನೀರು ಹಳ್ಳದಲ್ಲಿ ಶೇಖರಗೊಂಡು ಹಳ್ಳ ತುಂಬಿ ಹರಿವಂತೆ ಆಗುತ್ತದೆ. ಸಮುದ್ರ ಸೇರಬೇಕಿದ್ದ ಹಳ್ಳದ ನೀರು ಮಧ್ಯೆ ಉಂಟಾದ ಮರಳು ದಿಬ್ಬದ ಸಮಸ್ಯೆಯಿಂದ ಸಮುದ್ರ ಸೇರಲಾರದೇ ಅಕ್ಕಪಕ್ಕದ ಜನವಸತಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನುಗ್ಗಲಾರಂಭಿಸುತ್ತದೆ.

ಈ ವೇಳೆಯಲ್ಲಿ ಬಬ್ರುವಾಡ,ಬೆಳಂಬರ,ಶೆಟಗೇರಿ,ಹಾಗೂ ವಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗದ್ದೆ ಪ್ರದೇಶಗಳು, ಪುರಸಭೆ ವ್ಯಾಪ್ತಿಯ ಕೆಲ ಪ್ರದೇಶ ಜಲಾವೃತವಾಗಿ ಕೃಷಿಕಾರ್ಯಕ್ಕೆ ಹಿನ್ನಡೆಯಾಗುತ್ತದೆ. ನಾನಾ ಕಾರಣಗಳಿಂದ ಹಳ್ಳದ ಅಂಚಿನ ಹೊಲ ಮನೆಗಳಿಗೆ ನುಗ್ಗುವ ನೀರು ಹಲವು ಅವಾಂತರಗಳನ್ನು ಸೃಷ್ಟಿಸುತ್ತದೆ. ಹಳ್ಳ ಮತ್ತು ಸಮುದ್ರ ಸಂಗಮ ಪ್ರದೇಶದಲ್ಲಿ ಮರಳು ದಿಬ್ಬವನ್ನು ಕೊರೆದು ನೀರು ಹರಿದು ಹೋಗಲು ಅನುವು ಮಾಡುವ ಮೂಲಕ ಹಳ್ಳದ ನೀರು ಸಮುದ್ರ ಸೇರುವ ನೈಸರ್ಗಿಕ ಪ್ರಕ್ರಿಯೆಗೆ ಚಾಲನೆ ನೀಡಲೇ ಬೇಕಾಗುತ್ತದೆ.. ಸ್ಥಳೀಯ ಭಾಷೆಯಲ್ಲಿ ಇದನ್ನು ಕೋಡಿ ಕಡೆಯುವುದು ಎಂದು ಹೇಳಲಾಗುತ್ತಿದ್ದು ,ನದಿ ಭಾಗದ ಸ್ಥಳೀಯರೇ ವಿಶೇಷ ಪರಿಶ್ರಮ ವಹಿಸಿ ಈ ಕಾರ್ಯವನ್ನು ಮುಂದುವರಿಸಿಕೊoಡು ಬಂದಿದ್ದಾರೆ.

ಈ ಹಿಂದೆ ಕೋಡಿ ಕಡಿಯುವುದೆಂದರೆ ಅತ್ಯಂತ ಅಪಾಯಕಾರಿ ಕೆಲಸವಾಗಿತ್ತು ಎಂದು ಸ್ಮರಿಸಿಕೊಳ್ಳುವ ಕೆಲ ಹಿರಿಯರು,ನೀರಿನ ರಭಸಕ್ಕೆ ಕೋಡಿ ಕಡಿಯುವರು, ಕೊಚ್ಚಿಹೋಗುವ ಅಪಾಯದ ಸಾಧ್ಯತೆ ಬಗ್ಗೆಯೂ ಹೇಳುತ್ತಾರೆ. ಕೋಡಿ ಕಡೆಯುವುದರಿಂದ ಹತ್ತಾರು ಹಳ್ಳಿಗಳಿಗೆ ನೀರು ನುಗ್ಗುವ ಅಪಾಯ ತಪ್ಪಿಸಿದಂತಾಗುತ್ತದೆ.

ಈ ಕಾರ್ಯವನ್ನು ಸ್ವಯಂಪ್ರೇರಿತವಾಗಿ ಮಾಡುವ ಸ್ಥಳೀಯ ಕೆಲಸಗಾರರ ಶ್ರಮ ಹಾಗೂ ಸೇವೆಗೆ ಸ್ಥಳೀಯ ಆಡಳಿತದಿಂದಲೂ ನಿರೀಕ್ಷಿತ ಅನುದಾನ ಇಲ್ಲವೇ ಗೌರವ ಸರಿಯಾಗಿ ದೊರೆಯುತ್ತಿಲ್ಲ. ಅಲ್ಲದೇ ಸ್ಥಳೀಯ ಗ್ರಾಪಂ ನ ಅಲ್ಪ ಅನುದಾನ ಹೊರತುಪಡಿಸಿ, ಇತರೇ ಪಂಚಾಯತದವರು ಬಿಡಿಗಾಸನ್ನು ನೀಡದಿರುವುದು, ಸಂಬoಧಿತ ಅಧಿಕಾರ ವರ್ಗ ಪ್ರತಿ ವರ್ಷದ ಇಲ್ಲಿನ ಸಮಸ್ಯೆ ಅರಿದಿದ್ದರೂ ಸರಿಯಾಗಿ ಸ್ಪಂದಿಸದಿರುವುದಕ್ಕೆ ಸ್ಥಳೀಯ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ವರ್ಷ ಕೊಡಿ ಕಡಿಯಲು ಬೆರಳೆಣಿಕೆ ಜನರಷ್ಟೇ ಭಾಗವಹಿಸಿದ್ದು ಹೆಚ್ಚಿನವರು ನಿರಾಸಕ್ತಿ ತಾಳಿದ್ದರು ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version