Important
Trending

ಮೂರಿನಕಟ್ಟೆ ವಿಚಾರದಲ್ಲಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಬೇಡಿ: ಕಾಂಗ್ರೆಸ್ ಎಚ್ಚರಿಕೆ

ಭಟ್ಕಳ: ಮುರಿನಕಟ್ಟೆ ಕಟ್ಟೆ ಕೆಡವಿದ ಘಟನೆಗೆ ಸಂಬoಧಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡುತ್ತಿರುವ ಭಾರತೀಯ ಜನತಾ ಪಕ್ಷ ಧಾರ್ಮಿಕ ವಿಚಾರವನ್ನು ಮುಂದಿಟ್ಟುಕೊoಡು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ. ಪಟ್ಟಣದ ರಂಗಿನಕಟ್ಟೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಮಾಜಿ ಶಾಸಕ ಸುನೀಲ ನಾಯ್ಕ ಅವರ ಆರೋಪಗಳಿಗೆ ಉತ್ತರಿಸಿದರು.

ಮುರಿನಕಟ್ಟೆ ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದು, ಅದರ ಬಗ್ಗೆ ನಮಗೂ ಗೌರವವಿದೆ. ಕಟ್ಟೆ ಕೆಡವಿದ ಘಟನೆ ನಮಗೂ ನೋವು ತಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ಹೇಳಿದರು. ಸಚಿವ ಮಂಕಾಳ ವೈದ್ಯ ಅವರು ಮುರಿನಕಟ್ಟೆ ವಿರೋಧಿ ಅಲ್ಲ. ಈ ಕುರಿತು ಬಿಜೆಪಿ ಜನರಲ್ಲಿ ಸುಳ್ಳು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಆ ಜಾಗ ತೆರವುಗೊಂಡಿದ್ದು, ಬಿಜೆಪಿ ಆಡಳಿತಾವಧಿಯಲ್ಲೇ ಈ ವಿಚಾರವನ್ನು ಬಗೆಹರಿಸಬಹುದಾಗಿತ್ತು. ಆಗ ಮೌನವಾಗಿದ್ದವರು ಈಗ ಕಾಂಗ್ರೆಸ್ ಹಾಗೂ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುರಿನಕಟ್ಟೆ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಯಾವುದೇ ವಿರೋಧವಿಲ್ಲ. ಸರ್ಕಾರವೇ ಕಟ್ಟೆ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ಎಲ್ಲರ ಒಮ್ಮತದೊಂದಿಗೆ ನಿರ್ಮಾಣ ಮಾಡಬಹುದು. ಆದರೆ ಧಾರ್ಮಿಕ ವಿಚಾರವನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ನಡೆಯಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಮಾ ಮೋಗೇರ್, ಸುರೇಶ ನಾಯ್ಕ, ನಾರಾಯಣ ನಾಯ್ಕ, ರಾಜು ನಾಯ್ಕ, ಸುಧಾಕರ ನಾಯ್ಕ, ಜಯಶ್ರೀ ಮೋಗೆರ್, ಮಂಜುನಾಥ ನಾಯ್ಕ, ಭಾಸ್ಕರ ಮೋಗೆರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Back to top button