Important
Trending

ರಸ್ತೆ ಇಲ್ಲ, ಮಾಹಿತಿ ಫಲಕವಿಲ್ಲ; ಅಪೂರ್ಣ ವೆಲ್‌ನೆಸ್ ಸೆಂಟರ್ ಕಾಮಗಾರಿಗೆ ಸಾರ್ವಜನಿಕರ ಆಕ್ಷೇಪ

ಅಂಕೋಲಾ : ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರ ವ್ಯಾಪ್ತಿಯ ಬಬ್ರುವಾಡ ಗ್ರಾಮ ಪಂಚಾಯತ್‌ನ ನದಿಭಾಗ ಮಜಿರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವೆಲ್‌ನೆಸ್ ಸೆಂಟರ್ ಕಾಮಗಾರಿ ಇದೀಗ ಹಲವು ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಕಾರಣವಾಗಿದೆ.

ಸುಮಾರು 7.5 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡವು ಕಳೆದ ಮಾರ್ಚ್ ತಿಂಗಳಲ್ಲೇ ಪೂರ್ಣಗೊಳ್ಳಬೇಕಾಗಿದ್ದರೂ, ಜೂನ್ ತಿಂಗಳು ಆರಂಭವಾದರೂ ಇನ್ನೂ ಬಾಗಿಲು ಹಾಗೂ ಕಿಟಕಿಗಳನ್ನು ಅಳವಡಿಸದೇ ಅಪೂರ್ಣ ಸ್ಥಿತಿಯಲ್ಲೇ ನಿಂತಿದೆ. ಆದಾಗ್ಯೂ, ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಆರ್‌ಇಡಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಆತಂಕಕಾರಿ ವಿಚಾರವೆಂದರೆ, ಕಟ್ಟಡ ನಿರ್ಮಿಸಿರುವ ಸ್ಥಳಕ್ಕೆ ಸಮರ್ಪಕ ರಸ್ತೆ ಅಥವಾ ಸಂಪರ್ಕ ವ್ಯವಸ್ಥೆಯೇ ಇಲ್ಲ. ಕಟ್ಟಡ ತಲುಪಲು ಇಕ್ಕಟ್ಟಾದ ಹಾಗೂ ಏರು-ಇಳಿಜಾರು ಪ್ರದೇಶದ ಮೂಲಕ ಸಾಗಬೇಕಾದ ಪರಿಸ್ಥಿತಿ ಇದೆ. ಕಟ್ಟಡದ ಪಕ್ಕದಲ್ಲೇ ಗುಡ್ಡವಿದ್ದು, ಮಳೆಗಾಲದಲ್ಲಿ ಭೂಕುಸಿತ ಅಥವಾ ಗುಡ್ಡ ಕುಸಿತದ ಅಪಾಯವೂ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಜನರ ಆರೋಗ್ಯ ಸೇವೆಗಾಗಿ ನಿರ್ಮಿಸಲಾಗುತ್ತಿರುವ ಕಟ್ಟಡವೇ ಮೂಲಭೂತ ಸೌಲಭ್ಯಗಳು ಮತ್ತು ಸುರಕ್ಷತಾ ವ್ಯವಸ್ಥೆಗಳ ಕೊರತೆಯಿಂದ ಪ್ರಶ್ನೆಗೆ ಗುರಿಯಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಿ ಕಾಮಗಾರಿಗಳಲ್ಲಿ ಕಾಮಗಾರಿ ವೆಚ್ಚ, ಗುತ್ತಿಗೆದಾರರ ಹೆಸರು, ಅನುಷ್ಠಾನ ಸಂಸ್ಥೆ ಹಾಗೂ ಕಾಮಗಾರಿ ಅವಧಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಒಳಗೊಂಡ ಮಾಹಿತಿ ಫಲಕವನ್ನು ಕಾಮಗಾರಿ ಆರಂಭದಲ್ಲೇ ಅಳವಡಿಸುವುದು ಕಡ್ಡಾಯ. ಆದರೆ ಈ ಕಾಮಗಾರಿ ಸ್ಥಳದಲ್ಲಿ ಯಾವುದೇ ಮಾಹಿತಿ ಫಲಕ ಅಳವಡಿಸದಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಕುರಿತು ಪಿಆರ್‌ಇಡಿ ವಿಭಾಗದ ಕಿರಿಯ ಅಭಿಯಂತರ ಸೂರಜ್ ಅವರನ್ನು ಸಂಪರ್ಕಿಸಿದಾಗ, ಕಾಮಗಾರಿ ಪೂರ್ಣಗೊಂಡ ನಂತರ ಮಾಹಿತಿ ಫಲಕ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಕಾಮಗಾರಿ ನಡೆಯುವ ಅವಧಿಯಲ್ಲೇ ಮಾಹಿತಿ ಫಲಕ ಅಳವಡಿಸಬೇಕಲ್ಲವೇ ಎಂಬ ಪ್ರಶ್ನೆಗೆ, ಫಲಕ ಅಳವಡಿಸಲು ಸ್ಥಳಾವಕಾಶವಿಲ್ಲ ಎಂಬ ಉತ್ತರ ನೀಡಿದ್ದಾರೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಉಮೇಶ್ ನಾಯ್ಕ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕಟ್ಟಡ ನಿರ್ಮಾಣವಾಗಿರುವ ಸ್ಥಳಕ್ಕೆ ಸರಿಯಾದ ರಸ್ತೆ ಇಲ್ಲ. ಇನ್ನೂ ಬಾಗಿಲು-ಕಿಟಕಿಗಳನ್ನೂ ಅಳವಡಿಸಿಲ್ಲ. ಗುಡ್ಡದ ಅಂಚಿನಲ್ಲಿರುವ ಕಾರಣ ಸುರಕ್ಷತಾ ಅಪಾಯವೂ ಇದೆ. ಸಾರ್ವಜನಿಕರ ಹಣವನ್ನು ಖರ್ಚು ಮಾಡುವ ಮೊದಲು ಸ್ಥಳದ ಸೂಕ್ತತೆ ಹಾಗೂ ಸುರಕ್ಷತೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಬೇಕಾಗಿತ್ತು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ , ವಿಲಾಸ ನಾಯಕ , ಅಂಕೋಲಾ

Back to top button