=== console.log('header!'); // Easy to add and display post grid on your website with or without categoryies filter. Also work with Gutenberg shortcode block. === console.log('header!'); // Easy to add and display post grid on your website with or without categoryies filter. Also work with Gutenberg shortcode block.
Focus News
Trending

ಕಪ್ಪುಬಣ್ಣಕ್ಕೆ ತಿರುಗಿದ ನೀರು: ಮನೆತುಂಬಾ ಪೆಟ್ರೋಲ್, ಡಿಸೇಲ್ ವಾಸನೆ

ಹೊನ್ನಾವರ : ಇಲ್ಲಿನ ಬಾವಿಯನ್ನು ಒಮ್ಮೆ ನೋಡಿ… ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಈ ಬಾಟಲಿಯಲ್ಲಿರುವ ನೀರನ್ನು ನೋಡಿ… ಸಾಮಾನ್ಯವಾಗಿ ಪಾರದರ್ಶಕವಾಗಿರಬೇಕಾದ ನೀರು ವಿಚಿತ್ರ ಬಣ್ಣ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಈ ನೀರಿನಿಂದ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ತೀವ್ರ ವಾಸನೆ ಬರುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಕುಡಿಯಲು ಮಾತ್ರವಲ್ಲ, ದಿನನಿತ್ಯದ ಬಳಕೆಗೂ ಈ ನೀರು ಯೋಗ್ಯವಿಲ್ಲ ಎಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಆತಂಕಕಾರಿ ಘಟನೆ ಹೊನ್ನಾವರ ತಾಲೂಕಿನ ಕೆಳಗಿನಪಾಳ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಸುಮಾರು ಏಳು ಮನೆಗಳ ಬಾವಿ ನೀರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಸನೆ ಬರುತ್ತಿದ್ದು, ನೀರಿನ ಬಣ್ಣವೂ ಬದಲಾಗಿದೆ. ಸ್ಥಳೀಯರ ಪ್ರಕಾರ, ತಹಶೀಲ್ದಾರ್ ಕಚೇರಿ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಕಳೆದ ಕೆಲವು ದಿನಗಳಿಂದ ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದು, ಅದಾದ ಬಳಿಕವೇ ಈ ಸಮಸ್ಯೆ ಆರಂಭವಾಗಿದೆ. ಬಾವಿಗಳ ನೀರು ಬಳಕೆಗೆ ಯೋಗ್ಯವಿಲ್ಲದಂತಾಗಿದ್ದು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

“ನಮ್ಮ ಕುಟುಂಬ ಈ ಬಾವಿಯ ನೀರನ್ನೇ ಅವಲಂಬಿಸಿದೆ. ಆದರೆ ಕಳೆದ 25 ದಿನಗಳಿಂದ ನೀರಿನ ಬಣ್ಣ ಬದಲಾಗಿದ್ದು, ಕುಡಿಯಲು ಸಾಧ್ಯವಾಗುತ್ತಿಲ್ಲ” ಎಂದು ಸ್ಥಳೀಯರು ನೋವು ಹಂಚಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಜೀವಜಲ ನೀಡುತ್ತಿದ್ದ ಬಾವಿಯೇ ಈಗ ಆತಂಕದ ಕಾರಣವಾಗಿದೆ. ನೀರಿನ ಗುಣಮಟ್ಟ ಹದಗೆಟ್ಟಿರುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ: ಹರೀಶ ಶೇಟ್, ಸ್ಥಳೀಯರು

ಮನೆಯ ಬಾವಿಗೆ ಪೆಟ್ರೋಲ್ ಅಥವಾ ಡೀಸೆಲ್ ಮಿಶ್ರಣವಾಗಿರುವ ಶಂಕೆ ವ್ಯಕ್ತಪಡಿಸಿರುವ ಸ್ಥಳೀಯರು, ಈ ನೀರು ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ. ಸಮಸ್ಯೆ ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಸ್ಥಳೀಯರ ಮತ್ತೊಂದು ಆರೋಪ ಏನೆಂದರೆ, ಈ ಸಮಸ್ಯೆ ಬಗ್ಗೆ ಈಗಾಗಲೇ ಸಂಬoಧಪಟ್ಟವರ ಗಮನಕ್ಕೆ ತರಲಾಗಿತ್ತು. ಆದರೆ ಹಲವು ದಿನಗಳು ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಕುಡಿಯುವ ನೀರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯೂ ಇಲ್ಲದಿರುವುದು ಸ್ಥಳೀಯರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದು ಕಡೆ ಬಾವಿ ನೀರು ಬಳಕೆಗೆ ಅಯೋಗ್ಯವಾಗಿದೆ ಎಂಬ ಆತಂಕ, ಮತ್ತೊಂದೆಡೆ ಕುಡಿಯುವ ನೀರಿನ ಕೊರತೆ. ಈ ಎರಡರ ನಡುವೆ ಸಿಲುಕಿರುವ ಕುಟುಂಬಗಳು ತಕ್ಷಣದ ಪರಿಹಾರಕ್ಕಾಗಿ ಆಗ್ರಹಿಸುತ್ತಿವೆ. ಈ ನೀರಿನ ಮಾದರಿಯನ್ನು ಪರೀಕ್ಷಿಸಿ, ಸಮಸ್ಯೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂತ್ರಸ್ತ ಕುಟುಂಬಗಳಿಗೆ ತುರ್ತಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button