
ಹೊನ್ನಾವರ: ತ್ರೈಮಾಸಿಕ ಕೆಡಿಪಿ ಸಭೆಯು ಹೊನ್ನಾವರದ ತಾಲೂಕ ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವರು ನಮ್ಮದು ಲಕ್ಷ ಅನುದಾನ ತರುವ ಪದ್ಧತಿಯಿಲ್ಲ. ಏನಿದ್ದರೂ ಕೋಟಿ ಲೆಕ್ಕದಲ್ಲಿ ಅನುದಾನ ತರುವುದು, ನಾನು ಗುದ್ದಲಿ ಪೂಜೆ ಮಾಡುವುದಿಲ್ಲ. ಈ ಹಿಂದೆ ಎರಡು ಮೂರು ಲಕ್ಷಕ್ಕೂ ಗುದ್ದಲಿ ಪೂಜೆ ನಡೆಯುತ್ತಿತ್ತು. ನಮ್ಮದು ಅನುದಾನ ತರುವುದು ಅಭಿವೃದ್ಧಿ ಮಾಡುವುದು ಇಷ್ಟೇ ಕೆಲಸ, ಎಂದು ಹೇಳಿದರು.
ಆರೋಗ್ಯ ಅಧಿಕಾರಿ ಡಾ. ವೈಶಾಲಿ ನಾಯ್ಕ ಮಾಹಿತಿ ನೀಡಿ ಮೂರು ಹೊಸ ಕಟ್ಟಡ ನಿರ್ಮಾಣ ಆಗಿದೆ. ಅದರ ಉದ್ಘಾಟನೆ ಆಗಬೇಕು ಎಂದರು. ಅದಕ್ಕೆ ಸಚಿವರು ಉತ್ತರಿಸಿ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆ ಆದ ಮೇಲೆ ಪ್ರಾರಂಭಮಾಡಿ, ಮಂಕಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಆಗಬೇಕು. ಐದು ವೈದ್ಯರನ್ನು ಕೇಳಲಾಗಿತ್ತು. ಮೂವರು ವೈದ್ಯರನ್ನು ನೀಡಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ನೋಡಿಕೊಳ್ಳಿ ಎಂದರು.
ಆಡಳಿತ ವೈದ್ಯಧಿಕಾರಿ ಡಾ. ರಾಜೇಶ್ ಕಿಣಿ ಮಾತನಾಡಿ ಮೂವರು ವೈದ್ಯರ ಅಗತ್ಯ ಇದೆ. ಪ್ರಮುಖವಾಗಿ ಸರ್ಜನ್ ವೈದ್ಯರ ತೀರಾ ಅಗತ್ಯ ಇದೆ. ಪೊಲೀಸ್ ಸಿಬ್ಬಂದಿ ನೇಮಕ ಆಗಬೇಕು ಎಂದರು. ಸಚಿವರು ನಾವು ಯಾವುದೇ ವೈದ್ಯರನ್ನು ತೆಗೆದಿಲ್ಲ. ಕೆಲವು ಕಡೆ ಅವರಾಗೆ ಹೋಗಿದ್ದಾರೆ. ಹೊಸ ವೈದ್ಯರು ಬರುತ್ತಿಲ್ಲ. ಪ್ರಯತ್ನ ನಡೆಯುತ್ತಿದೆ ಎಂದರು.
ಶಿಕ್ಷಣ ಇಲಾಖೆಗೆ ಸಂಬoಧ ಪಟ್ಟಂತೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದಕ್ಕೆ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು. ಬಿ ಇ ಓ ಜಯಶ್ರೀ ನಾಯ್ಕ ಮಾತನಾಡಿ ಕಳೆದ ಅವಧಿಕ್ಕಿಂತ ಎಸ್ ಎಸ್ ಎಲ್ ಸಿ ಯಲ್ಲಿ ಫಲಿತಾಂಶ ಹೆಚ್ಚಳವಾಗಿದೆ. 32 ಶಾಲೆಗೆ ದೊಡ್ಡ ಮಟ್ಟದ ದುರಸ್ಥಿ ಆಗಬೇಕಿದೆ ಎಂದರು.
ಮೀನುಗಾರರಿಗೆ 100 ಲೈಫ್ ಜಾಕೆಟ್ ವಿತರಣೆ
ಮೀನುಗಾರಿಕೆ ಇಲಾಖೆ ಚರ್ಚೆಯಲ್ಲಿ ಇಲಾಖೆ ಅಧಿಕಾರಿ ಚೇತನಕುಮಾರ ಮಾತನಾಡಿ ಮೀನುಗಾರರಿಗೆ 100 ಲೈಫ್ ಜಾಕೆಟ್ ವಿತರಣೆ ಮಾಡಲಾಗಿದೆ. ಪಲಾನುಭವಿಗಳಿಗೆ ಬೇಕಾದ ಸೌಲಭ್ಯ ವಿತರಣೆ ಮಾಡಲಾಗಿದೆ ಎಂದರು. ಸಚಿವರು ಮಾತನಾಡಿ ಮೀನುಗಾರರಿಗೆ ತೆರಳುವ ಪ್ರತಿ ಒಬ್ಬರು ಲೈಫ್ ಜಾಕೆಟ್ ಹಾಕಬೇಕು ಎಂದರು. ಇತ್ತೀಚಿಗೆ ಅಪ್ಸರಕೊಂಡ ಸಮುದ್ರ ತೀರದಲ್ಲಿ ಸಿಡಿಲು ಬಡಿದು ಮೃತ ಪಟ್ಟ ವಿನಾಯಕ ಖಾರ್ವಿ ಕುಟುಂಬಕ್ಕೆ ಮೀನುಗಾರಿಕೆ ಇಲಾಖೆಯಿಂದ 10 ಲಕ್ಷ ರೂ. ಪರಿಹಾರ ಚೆಕ್ ಮತ್ತು ಮೀನುಗಾರರು ಮೀನುಗಾರಿಕೆಗೆ ತೆರಳಿದಾಗ ಆಮೆ ಸಿಕ್ಕಿಬಿದ್ದಲ್ಲಿ ಅದರ ರಕ್ಷಣೆಗೆ ಬೇಕಾದ ಸಾಮಗ್ರಿಯನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.
ಇನ್ನೂ ಇತರೆ ಇಲಾಖೆಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ತಹಸೀಲ್ದಾರ ಪ್ರವೀಣ ಕರಾಂಡೆ, ತಾ.ಪಂ. ಆಡಳಿತ ಅಧಿಕಾರಿ ಎನ್. ಆರ್. ಹೆಗಡೆ, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಪುಟ್ಟೇಗೌಡ , ಗ್ಯಾರಂಟಿ ಯೋಜನೆಯ ಅಣ್ಣಪ್ಪ ನಾಯ್ಕ ಇದ್ದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ








