ಶಿರೂರು ಬಳಿ ಗುಡ್ಡ ಕುಸಿತ ದುರಂತ : ಗಂಗಾವಳಿ ನದಿಯಲ್ಲಿ ನಿರ್ಮಾಣವಾಗಿದ್ದ ಕೃತಕ ಗುಡ್ಡ ತೆರವಿಗೆ ಸಾಂಕೇತಿಕವಾಗಿ ಚಾಲನೆ

ಅಂಕೋಲಾ: ಎರಡು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಸಮೀಪ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ದುರಂತದ ನೆನಪು ಇನ್ನೂ ಜನಮನದಿಂದ ಮಾಸಿಲ್ಲ. ಜುಲೈ 16ರಂದು ಸಂಭವಿಸಿದ್ದ ಆ ದುರಂತದಲ್ಲಿ ಅಪಾರ ಪ್ರಮಾಣದ ಬಂಡೆಗಲ್ಲು, ಮಣ್ಣು ಮತ್ತು ಮರಗಳು ಜರಿದು ಗಂಗಾವಳಿ ನದಿಗೆ ಬಿದ್ದ ಪರಿಣಾಮ ನದಿಯ ಮಧ್ಯೆ ಕೃತಕ ಗುಡ್ಡವೇ ನಿರ್ಮಾಣವಾದಂತಾಗಿತ್ತು. ಈ ದುರಂತದಲ್ಲಿ ಸುಮಾರು 11 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಅಪಾರ ಪ್ರಮಾಣದ ಆಸ್ತಿಪಾಸ್ತಿಗೂ ಹಾನಿಯಾಗಿತ್ತು.
ದುರಂತದ ಬಳಿಕ ನದಿಯಲ್ಲಿ ರಾಶಿಯಾಗಿ ಬಿದ್ದಿದ್ದ ಮಣ್ಣು ಮತ್ತು ಬಂಡೆಗಳು ಗಂಗಾವಳಿಯ ಸಹಜ ಹರಿವಿಗೆ ಅಡ್ಡಿಯಾಗಿದ್ದು, ಮಳೆಗಾಲದಲ್ಲಿ ನದಿ ಉಕ್ಕಿ ಹರಿದು ಸುತ್ತಮುತ್ತಲಿನ ಗ್ರಾಮಗಳು ಹಾಗೂ ಗಂಗಾವಳಿ ಸೇತುವೆ ಹಿಂಭಾಗದ ಪ್ರದೇಶಗಳಿಗೆ ನೆರೆ ನೀರು ನುಗ್ಗುವ ಆತಂಕ ಜನರನ್ನು ಕಾಡುತ್ತಲೇ ಇತ್ತು. ಮಣ್ಣು ತೆರವಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಕಡಿಮೆ ಮೊತ್ತ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಕಾರ್ಯ ಆರಂಭವಾಗದೇ ಉಳಿದಿತ್ತು. ಇದರಿಂದ ಮತ್ತೆ ಭಾರಿ ಮಳೆ ಬಂದರೆ ಏನಾಗಬಹುದು? ಎಂಬ ಪ್ರಶ್ನೆ ಸ್ಥಳೀಯರನ್ನು ನಿರಂತರವಾಗಿ ಕಾಡುತ್ತಿತ್ತು.
ಇಂತಹ ಸಂದರ್ಭದಲ್ಲಿ ಸ್ಥಳೀಯರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಂಡ ಶಾಸಕ ಸತೀಶ್ ಸೈಲ್ ಅವರು ಮಣ್ಣು ತೆರವು ಕಾರ್ಯಾಚರಣೆಗಾಗಿ ನಿರಂತರ ಪ್ರಯತ್ನ ನಡೆಸಿದರು. ವಿಷಯದ ಗಂಭೀರತೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದ ಅವರು, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಪರಿಸ್ಥಿತಿಯ ಸೂಕ್ಷ್ಮತೆ ವಿವರಿಸಿ ವಿಶೇಷ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ರಾಜ್ಯ ಸರ್ಕಾರದಿಂದ ರೂ 2.34 ಕೋಟಿ ವಿಶೇಷ ಅನುದಾನ ದೊರೆತಿದ್ದು, ಒಟ್ಟಾರೆ ರೂ 4.34 ಕೋಟಿ ವೆಚ್ಚದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಕೈಗೊಳ್ಳಲು ಕಾಲ ಕೂಡಿ ಬರುವ ಮೂಲಕ ಸದ್ಯಕ್ಕೆ ಆರ್ಥಿಕ ಅಡಚಣೆಯ ಕಾರಣ ನಿವಾರಣೆಯಾಗಿದೆ.
ಕಾರ್ಯಾಚರಣೆಗೆ ಸಾಂಕೇತಿಕ ಚಾಲನೆ
ಶಿರೂರಿನ ಶ್ರೀ ಬೊಮ್ಮಯ್ಯ ದೇವಸ್ಥಾನದ ಸಮೀಪ ನಡೆದ ಸರಳ ಕಾರ್ಯಕ್ರಮದಲ್ಲಿ ಮಣ್ಣು ತೆರವು ಕಾರ್ಯಾಚರಣೆಗೆ ಸಾಂಕೇತಿಕ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸ್ಥಳೀಯ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಗುತ್ತಿಗೆದಾರರ ಸಮ್ಮುಖದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸತೀಶ್ ಸೈಲ್, ಜನರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು, ಜನಸೇವೆಯೇ ನನ್ನ ಮುಖ್ಯ ಧ್ಯೇಯವಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಇಂದಿನ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಹಾಗೂ ಯೋಜನೆಗಳಿಗೆ ಸರ್ಕಾರದಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಾಮು ಗುನಗಿ, ತಹಶೀಲ್ದಾರ್ ಎನ್.ಎಫ್. ನರೋನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಾಂಡುರoಗ ಗೌಡ ಹಾಗೂ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ ಮಾತನಾಡಿ, ನಡೆದಂತೆ ನುಡಿದ ಶಾಸಕ ಸತೀಶ್ ಸೈಲ್ ಅವರ ಪ್ರಯತ್ನದಿಂದ ಗಂಗಾವಳಿ ನದಿಯಲ್ಲಿನ ಮಣ್ಣು ತೆರವು ಕಾರ್ಯಾಚರಣೆ ಆರಂಭವಾಗುತ್ತಿದೆ. ಇದರಿಂದ ಸುಮಾರು ಐದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವಿರಾರು ಜನರು ನೆರೆ ಭೀತಿಯಿಂದ ಮುಕ್ತಿ ಪಡೆದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಅಭಿಪ್ರಾಯಪಟ್ಟರು. ಬಂದರು ಇಲಾಖೆಯ ಹಿರಿಯ ಅಧಿಕಾರಿ ರಾಥೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಗುತ್ತಿಗೆದಾರ ಮಹೇಂದ್ರ ಡೊಂಗ್ರೆ ಹಾಗೂ ಅವರ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜೂನ್ 15ರಿಂದ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಈ ಹಿಂದಿನ ಕಾರ್ಯಾಚರಣೆಯಲ್ಲಿ ಕೊನೆಯ ಹಂತದಲ್ಲಿ ಗಮನಾರ್ಹ ಶೋಧ ಕಾರ್ಯ ನಡೆಸಿ ಕೇರಳದ ಅರ್ಜುನನ ಬೆಂಜ್ ಲಾರಿ ಸಹಿತ ಹಲವು ಮಹತ್ವಪೂರ್ಣ ಅವಶೇಷಗಳನ್ನು ಹೊರತೆಗೆದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದ ಸ್ಥಳೀಯ ಮೂಲದ ಮಹೇಂದ್ರ ಡೊಂಗ್ರೆ ಮಾಲಕತ್ವದ ಅಭಿನೇಶಿಯ ಓಶಿಯನ್ ಸರ್ವಿಸ್ ಈ ಬಾರಿ ಮತ್ತೆ ಮಣ್ಣು ತೆರವು ಕಾರ್ಯಾಚರಣೆಗೆ ಗುತ್ತಿಗೆ ಕಾರ್ಯ ನಡೆಸಲಿದೆ.
ಇದೇ ವೇಳೆ, ಎರಡು ವರ್ಷಗಳ ಹಿಂದೆ ನಡೆದ ದುರಂತಕ್ಕೆ ಸಂಬoಧಿಸಿದ ಕೆಲವು ಅವಶೇಷಗಳು ಅಥವಾ ಪ್ರಮುಖ ಸುಳಿವುಗಳು ಮಣ್ಣು ತೆರವು ಕಾರ್ಯಾಚರಣೆಯ ವೇಳೆ ಪತ್ತೆಯಾಗಬಹುದೇ ಎಂಬ ಕುತೂಹಲವೂ ಜನರಲ್ಲಿ ಮೂಡಿದೆ. ಕಾರ್ಯಾಚರಣೆ ಮುಂದುವರಿದoತೆ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, ಎರಡು ವರ್ಷಗಳಿಂದ ಗಂಗಾವಳಿಯ ದಡದ ಜನರನ್ನು ಕಾಡುತ್ತಿದ್ದ ನೆರೆ ಭೀತಿ ಮತ್ತು ದುರಂತದ ಕರಾಳ ನೆನಪುಗಳಿಗೆ ಈಗ ಪರಿಹಾರದ ಸ್ಪರ್ಶ ಸಿಗುವ ನಿರೀಕ್ಷೆ ಮೂಡಿಸಿದೆ. ಮಣ್ಣು ತೆರವು ಕಾರ್ಯಾಚರಣೆ ಗಂಗಾವಳಿ ನದಿ ತೀರದ ಜನರಿಗೆ ಹೊಸ ಭರವಸೆಯ ಬೆಳಕಾಗಿ ಪರಿಣಮಿಸಿದಂತಿದೆ.ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ಮೃತರಾದವರ ಹೆಸರಲ್ಲಿ ಘಟನಾ ಸ್ಥಳದ ಹತ್ತಿರ ಸ್ಮಾರಕ ನಿರ್ಮಿಸುವುದಾಗಿ ಶಾಸಕರು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ










