
ಸಿದ್ದಾಪುರ: ಚೆಕ್ ಸ್ವೀಕರಿಸುವ ವೇಳೆ ಪುತ್ರನ ನೆನಪು ಕಾಡಿ, ಆ ತಾಯಿ ಕಣ್ಣೀರಾದಳು.. ಒಂದು ಕಡೆ ಮಗನನ್ನು ಕಳೆದುಕೊಂಡ ನೋವು, ಮತ್ತೊಂದು ಕಡೆ ಮಗನ ನೆನಪುಗಳ ನಡುವೆ ಪರಿಹಾರದ ಚೆಕ್ ಕೈಗೆತ್ತಿಕೊಂಡ ತಾಯಿಯ ಆ ದೃಶ್ಯ ಅಲ್ಲಿದ್ದವರ ಮನಸ್ಸನ್ನು ಮರುಗಿಸಿತು.
ಹೌದು, ಪರಿಹಾರದ ಚೆಕ್ ಸ್ವೀಕರಿಸುವ ವೇಳೆ ಸಿದ್ದಾಪುರ ಕಾನಸೂರು ವಸತಿ ಶಾಲೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಗೋಕುಲ್ ಗೌಡ ಅವರ ತಾಯಿ ಜಯಶ್ರೀ ಗೌಡ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯ ಎಲ್ಲರ ಮನ ಕಲಕಿತು. ತಾಲೂಕಿನ ಕಾನಸೂರು ವಸತಿ ಶಾಲೆಯಲ್ಲಿ ನಡೆದ ಮೃತಪಟ್ಟ ವಿದ್ಯಾರ್ಥಿ ಗೋಕುಲ್ ಗೌಡ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಲಾಯಿತು.
ಉತ್ತರ ಕನ್ನಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ್ ವೈ.ಕೆ. ಅವರು ಸಿದ್ದಾಪುರ ತಹಸೀಲ್ದಾರ್ ಕಚೇರಿಯಲ್ಲಿ ಗೋಕುಲ್ ಅವರ ತಾಯಿ ಜಯಶ್ರೀ ಗೌಡ ಅವರಿಗೆ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರಭಾರಿ ತಹಸೀಲ್ದಾರ್ ರಮೇಶ ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಬಂಡೇರ್, ಕೇಶವಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ, ದಿವಾಕರ ಸಂಪಖoಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಗೋಕುಲ್‌ನ ಕನಸುಗಳು, ಭವಿಷ್ಯದ ಆಸೆಗಳು ಈಗ ನೆನಪುಗಳಾಗಿ ಉಳಿದಿವೆ. ಮಗನನ್ನು ಕಳೆದುಕೊಂಡ ಕುಟುಂಬದ ದುಃಖದ ನಡುವೆ, ನ್ಯಾಯಕ್ಕಾಗಿ ಅವರ ಹೋರಾಟ ಮಾತ್ರ ಇನ್ನೂ ಮುಂದುವರಿದಿದೆ.
ವಿಸ್ಮಯ ನ್ಯೂಸ್, ಸಿದ್ದಾಪುರ










