ಭಟ್ಕಳ : ಕರ್ನಾಟಕ ಸರ್ಕಾರವು ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕೆಲವು ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್ ಆಚರಣೆಯನ್ನು ಶ್ರೀಭುವನೇಶ್ವರಿ ಕನ್ನಡ ಸಂಘ ಆಸರಕೇರಿ
ವಿರೋಧಿಸುತ್ತಿದೆ ಎಂದು ಸಂಘದ ಅಧ್ಯಕ್ಷ ರಮೇಶ ನಾಯ್ಕ ಹೇಳಿದ್ದಾರೆ .
ಇಂತಹ ರಾಜಕೀಯ ಪ್ರೇರಿತ ಬಂದ್ ಗಳಿಗೆ ನಮ್ಮ ಸಂಘ ಯಾವತ್ತೂ ಬೆಂಬಲ ನೀಡುವುದಿಲ್ಲ .ನಮ್ಮ ಸಂಘವು ಕಳೆದ 24 ವರ್ಷಗಳಿಂದ ಕರ್ನಾಟಕ ರಾಜ್ಯದ ಕನ್ನಡ ನಾಡು-ನುಡಿ-ಗಡಿ ರಕ್ಷಣೆಗಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟಕ್ಕೆ ಬೆಂಬಲ ಸೂಚಿಸುತ್ತ ಬರುತ್ತಿದೆ .ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ರಾಜಕೀಯ ಹಿತಾಸಕ್ತಿಗಾಗಿ ಕೆಲವು ಸಂಘಟನೆಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹಾಗೂ ಸರ್ಕಾರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತಡೆ ಉಂಟು ಮಾಡಲು ಇಂತಹ ಬಂದ್ ಗಳನ್ನು ಪ್ರೇರೇಪಿಸುತ್ತಿದೆ .
ಪ್ರಸ್ತುತ ದೇಶದಲ್ಲಿ ಕೋವಿಡ್ ನಿಂದಾಗಿ ದೇಶ ಲಾಕ್ ಡೌನ್ ಸ್ಥಿತಿಯಲ್ಲಿದ್ದ ಕಾರಣ ಜನ ಜೀವನ ಈಗಾಗಲೇ ಅಸ್ತವ್ಯಸ್ತಗೊಂಡಿದೆ .ಕನ್ನಡಿಗರು ವಿಶಾಲ ಹೃದಯದವರು ಸರ್ವಧರ್ಮಗಳನ್ನು ಗೌರವಿಸುವವರು .ಆ ದಿಸೆಯಲ್ಲಿ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮರಾಠಾ ಸಮುದಾಯದವರ ಅಭಿವೃದ್ಧಿಗೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ.ಇದಕ್ಕೆ ನಮ್ಮ ಸ್ವಾಗತವಿದೆ .
ಭಾಷೆಗೂ ಮರಾಠ ಸಮುದಾಯದ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ .ನಮ್ಮ ರಾಜ್ಯದ ನಾಡು-ನುಡಿ-ಗಡಿ ರಕ್ಷಣೆಗೆ ನಮ್ಮ ಸಂಘವು ಸದಾ ಸಿದ್ಧವಾಗಿರುತ್ತದೆ ಇಂತಹ ರಾಜಕೀಯ ಪ್ರೇರಿತ ಬಂದ್ ಗಳಿಗೆ ಸದಾ ನಮ್ಮ ವಿರೋಧವಿರುತ್ತದೆ ಎಂದು ಹೇಳಿದ್ದಾರೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ