
ಕುಮಟಾ : ತಾಲೂಕು ಆಡಳಿತ ಸೌಧದ ಎದರು ತಾಲೂಕು ಅಂಗನವಾಡಿ ನೌಕಕರ ಸಂಘದ ತಾಲೂಕು ಅಧ್ಯಕ್ಷೆ ಸವಿತಾ ತನ್ಮಡಗಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಂಗನವಾಡಿ ಕೇಂದ್ರದಲ್ಲಿಯೇ ಎಲ್.ಕೆ.ಜಿ. ತರಗತಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ನೌಕಕರ ಸಂಘದ ತಾಲೂಕು ಅಧ್ಯಕ್ಷೆ ಸವಿತಾ ತನ್ಮಡಗಿ ಮಕ್ಕಳಿಗೆ ಬಾಲ್ಯದಲ್ಲಿ ಮನೆಯ ನಂತರ ಮೊದಲ ಶಾಲೆ ಅಂದರೆ ಅಂಗನವಾಡಿಯಾಗಿದೆ.
ಸರಕಾರದಿಂದ ಮಕ್ಕಳಿಗೆ ಬೇಕಾದ ಎಲ್ಲಾ ಆಟಿಕೆ ಸಾಮಾನು ಹಾಗೂ ಆಹಾರ ಸಾಮಾಗ್ರಿಗಳು ಅಲ್ಲಿ ಸಿಗುತ್ತವೆ. ಮಕ್ಕಳು ಕೂಡ ಬಹಳ ಖುಷಿಯಾಗಿ ಅಂಗನವಾಡಿಗೆ ಬಂದುಹೋಗುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳು ಆರಂಭವಾಗುತ್ತಿರುವುದರಿoದ ಆ ಭಾಗದ ಅಂಗವನಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿ ಅಂಗನವಾಡಿ ಕೇಂದ್ರ ಮುಚ್ಚುವ ಹಂತದಲ್ಲಿ ಇದೆ. ಉತ್ತಮವಾಗಿ ನಡೆಯುತ್ತಿರುವ ಅಂಗನವಾಡಿಗಳು ಮುಚ್ಚುವ ಅನಿವಾರ್ಯತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಇದರ ಬಗ್ಗೆ ಪರಿಶೀಲನೆ ನಡೆಸಿ ಅಂಗನವಾಡಿ ಕೇಂದ್ರದಲ್ಲಿಯೇ ಎಲ್.ಕೆ.ಜಿ. ತರಗತಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
46 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿ
ಈ ಸಂದರ್ಭದಲ್ಲಿ ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಸಿದ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ ಅವರು ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಮಾತನಾಡಿ ಸರ್ಕಾರದ ನಿಯಮದಂತೆ ನಮ್ಮ ತಾಲೂಕಿನಲ್ಲಿ 46 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ತರಗತಿಗಳು ಆರಂಭವಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವ ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ. ಅಂಗನವಾಡಿಯಲ್ಲಿಯೇ ಎಲ್.ಕೆ.ಜಿ. ತರಗತಿಗಳನ್ನು ಆರಂಭಿಸಬೇಕು ಎಂದು ಅಂನವಾಡಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ ಇದರ ಬಗ್ಗೆ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಿಕಟಪೂರ್ವ ಚುನಾಯಿತ ಗ್ರಾಮಪಂಚಾಯತ್ ಪ್ರತಿನಿಧಿಗಳ ಒಕ್ಕೂಟ, ಕರ್ನಾಟಕ ರಕ್ಷಣಾವೇದಿಕೆ ಸ್ವಾಭಿಮಾನಿ ಬಣ ಹಾಗೂ ಸಾಮಾಜಿಕ ಹೋರಾಟಗಾರರು ಮತ್ತು ಇತರ ಸಂಘಟನೆಗಳ ಪ್ರಮುಖರು ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಸೂಚಿಸಿ ಮಾತನಾಡಿದರು. ಸಾಮಾಜಿಕ ಹೋರಾಟಗಾರರಾದ ರಾಮನಾಥ ಶಾನಭಾಗ, ಕರ್ನಾಟಕ ರಕ್ಷಣಾವೇದಿಕೆ ಸ್ವಾಭಿಮಾನಿ ಬಣದ ರಾಜು ಮಾಸ್ತಿಹಳ್ಳ, ಎಸ್.ಟಿ. ನಾಯ್ಕ, ಗಣೇಶ ಅಂಬಿಗ ಮಿರ್ಜಾನ್, ಶಾಂತಾರಾಮ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರಾದ ರಾಜೇಶ್ವರಿ ನಾಂಯ್ಕ, ಸವಿತಾ ಅಂಬಿಗ, ನೇತ್ರಾ ನಾಯ್ಕ, ರಾಧಾ ಪಟಗಾರ್ ಸೇರಿದಂತೆ ಹಲವರು ಇದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ









