
ಭಟ್ಕಳ: ತಾಲೂಕಿನ ನಗರ ಪ್ರದೇಶದಲ್ಲಿರುವ ಮೂರಿನಕಟ್ಟೆ ಹಾನಿ ಪ್ರಕರಣವನ್ನು ಖಂಡಿಸಿ ರಾಜ್ಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿಯಲ್ಲಿ ಉಲ್ಲೇಖಿಸಿರುವಂತೆ, ಭಟ್ಕಳ ನಗರದ ಮುರಿನಕಟ್ಟೆಯು ಸ್ಥಳೀಯ ಸಂಪ್ರದಾಯದoತೆ ಹಿಂದೂಗಳು ಅನಾದಿಕಾಲದಿಂದಲೂ ಪೂಜಿಸಿಕೊಂಡು ಬಂದಿರುವ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಶಿರಸಿಯ ಮಾರಿಕಾಂಬಾ ದೇವಿಯ ದೇವಸ್ಥಾನಕ್ಕೆ ಸಾಗುವ ಹೊರೆಯನ್ನು ಇಡುವ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದ ಬಗ್ಗೆ ಸ್ಥಳೀಯ ಆಡಳಿತದ ದಾಖಲೆಗಳಲ್ಲಿಯೂ ಉಲ್ಲೇಖವಿದೆ ಎಂದು ತಿಳಿಸಲಾಗಿದೆ.
ಹಿಂದೆ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಮುರಿನಕಟ್ಟೆಯನ್ನು ಸುಮಾರು ಹತ್ತು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ಸ್ಥಳಾಂತರಿಸುವ ಉದ್ದೇಶದಿಂದ ರಸ್ತೆ ಬದಿಗೆ ಸರಿಸಲಾಗಿತ್ತು. ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ನಡುವೆ ಸ್ಥಳೀಯ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರ ನಿರಂತರ ಬೇಡಿಕೆಯ ಮೇರೆಗೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿ ಮುರಿನಕಟ್ಟೆ ನಿರ್ಮಾಣಕ್ಕೆ ಸ್ಥಳೀಯ ಆಡಳಿತದಿಂದ ಜಾಗ ಗುರುತಿಸಲಾಗಿತ್ತು.
ಮೇ 24 ರಂದು ತಾಲೂಕು ಆಡಳಿತ, ಜಿಲ್ಲಾಡಳಿತ, ಎನ್ಎಚ್ಎಐ ಹಾಗೂ ಐಆರ್ಬಿ ಅಧಿಕಾರಿಗಳು ಗುರುತಿಸಿದ ಸ್ಥಳದಲ್ಲಿ ಅವರ ಸುಪರ್ದಿಯಲ್ಲೇ ಮುರಿನಕಟ್ಟೆಯನ್ನು ನಿರ್ಮಿಸಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮರು ನಿರ್ಮಾಣಗೊಂಡ ಮುರಿನಕಟ್ಟೆಯು ಸರ್ಕಾರಿ ಜಾಗದಲ್ಲಿದ್ದು, ವಾಹನ ಸಂಚಾರಕ್ಕೆ ಅಥವಾ ಇತರ ಸಮುದಾಯದ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿರ್ಮಾಣವಾಗಿದ್ದರೂ, ಕಟ್ಟೆಯಿಂದ ದೂರದಲ್ಲಿರುವ ಖಾಸಗಿ ಜಾಗದ ಮಾಲೀಕರೊಬ್ಬರು ಅದನ್ನು ತೆರವುಗೊಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಜನರನ್ನು ಪ್ರಚೋದಿಸಲಾಗಿದೆ ಎಂಬ ಆರೋಪವನ್ನೂ ಮನವಿಯಲ್ಲಿ ಮಾಡಲಾಗಿದೆ.
ಅದೇ ದಿನ ಸಂಜೆ ಸಾವಿರಾರು ಜನರು ಸೇರಿ ಹೆದ್ದಾರಿ ತಡೆ ನಡೆಸಿದ್ದು, ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊAದಿಗೆ ವಾಗ್ವಾದ ನಡೆಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿಯೇ ಮರು ನಿರ್ಮಾಣಗೊಂಡ ಮುರಿನಕಟ್ಟೆಗೆ ಹಾನಿ ಮಾಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿ ದುಷ್ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, “ಸರ್ಕಾರ ಆದಷ್ಟು ಬೇಗ ಅದೇ ಸ್ಥಳದಲ್ಲಿ ಮುರಿನಕಟ್ಟೆಯನ್ನು ಮರು ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ನಾವೇ ಸ್ವತಃ ಕಟ್ಟೆ ನಿರ್ಮಾಣ ಮಾಡುತ್ತೇವೆ. ಪ್ರಸ್ತುತ ನಿರ್ಮಾಣವಾಗಿದ್ದ ಕಟ್ಟೆ ಕೆಂಪು ಕಲ್ಲಿನ ಕಟ್ಟೆಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾನೈಟ್ ಕಲ್ಲಿನಿಂದ ಸುಂದರ ಕಟ್ಟೆಯನ್ನು ನಿರ್ಮಿಸಿ ಎಲ್ಲ ಹಿಂದೂಗಳು ಭಕ್ತಿ ಭಾವದಿಂದ ನಮಿಸುವ ಕ್ಷೇತ್ರವನ್ನಾಗಿ ರೂಪಿಸುತ್ತೇವೆ” ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ. ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಬರಲಿದ್ದು, ಈ ಹಿಂದೆ ಮಂಗಳೂರಿನಲ್ಲಿ ನಡೆದ ಕುಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ತಮ್ಮ ‘ಬ್ರದರ್’ ಎಂದು ಹೇಳಿದ್ದರು” ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ


