ಜಿಲ್ಲೆಯ ಮೊದಲ ಹೆಲಿಕಾಪ್ಟರ್ ಪೈಲಟ್ ಪ್ರಕಾಶ್ ನಾರ್ವೇಕರ್ ಅಸ್ತಂಗತ : ಆಪರೇಶನ್ ಬ್ಲೂಸ್ಟಾರ್ ನಲ್ಲಿ ಪಾಲ್ಗೊಂಡ ಗರಿಮೆ : ಮಿಸೈಲ್ ತಜ್ಞ ಎಂಬ ಹಿರಿಮೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಮೊದಲ ಹೆಲಿಕಾಪ್ಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಪ್ರಕಾಶ್ ಮಂಗೇಶ್ ನಾರ್ವೇಕರ್ ಅವರು ಅನಾರೋಗ್ಯದಿಂದ ಬೆಳಗಾವಿಯಲ್ಲಿ ನಿಧನರಾದರು.
ಅಂಕೋಲಾ ತಾಲೂಕಿನ ಲಕ್ಷ್ಮೇಶ್ವರ ಮೂಲದ ಪ್ರತಿಷ್ಠಿತ ನಾರ್ವೇಕರ್ ಕುಟುಂಬದವರಾದ ಅವರು 1967ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡು ಹೆಲಿಕಾಪ್ಟರ್ ಪೈಲಟ್ ಆಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ವಿಂಗ್ ಕಮಾಂಡರ್ ಹುದ್ದೆಯಲ್ಲಿ 1994ರಲ್ಲಿ ನಿವೃತ್ತರಾಗಿದ್ದರು. ದೇಶದ ಮಿಸೈಲ್ ತಜ್ಞರಲ್ಲಿ ಒಬ್ಬರೆನಿಸಿದ್ದ ಹಿರಿಮೆ ಹೊಂದಿದ್ದ ಇವರು ಆಪರೇಶನ್ ಬ್ಲೂ ಸ್ಟಾರ್ ನಲ್ಲೂ ಪಾಲ್ಲೊಂಡ ಗರಿಮೆಯೊಂದಿಗೆ ದೇಶದ ಕೀರ್ತಿ ಎತ್ತಿ ಹಿಡಿದಿದ್ದರು, ಶಿಸ್ತು, ಕರ್ತವ್ಯನಿಷ್ಠೆ ಹಾಗೂ ದೇಶಭಕ್ತಿಯ ಪ್ರತೀಕವಾಗಿದ್ದ ಅವರು ಭಾರತೀಯ ವಾಯುಪಡೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.
ವಂದಿಗೆ ಸಮೀಪದ ತಮ್ಮ ನಿವಾಸದಲ್ಲಿ ವಾಸವಾಗಿದ್ದ ಅವರು ನಿವೃತ್ತಿಯ ನಂತರ ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದು, ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಮಾರ್ಗದರ್ಶಕರಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರಲ್ಲದೇ, ಇತರೆ ಹತ್ತಾರು ಸಮಾಜಗಳ ,ಕ್ರೀಡೆ, ಧಾರ್ಮಿಕ ಮತ್ತಿತರ ಕಾರ್ಯಗಳಿಗೆ ತನ್ನ ಕೈಲಾದ ಸೇವೆ ಸಹಕಾರ ನೀಡುತ್ತಿದ್ದರು. ಉನ್ನತ ಹುದ್ದೆ ಅಲಂಕರಿಸಿದ್ದರೂ ಸರಳತೆ, ಸಜ್ಜನಿಕೆ ಮತ್ತು ವಿನಯಶೀಲ ವ್ಯಕ್ತಿತ್ವದಿಂದ ಜನಮನ ಗೆದ್ದಿದ್ದರು.
ಅವರು ಲಕ್ಷ್ಮೇಶ್ವರದ ಉದ್ಯಮಿ ಕಿರಣ್ ನಾರ್ವೇಕರ್ ಅವರ ಹಿರಿಯ ಸಹೋದರರಾಗಿದ್ದು, ಅವರ ನಿಧನಕ್ಕೆ ಅಂಕೋಲಾ ಗೋಮಾಂತಕ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಮಾಜಿ ಸಚಿವ ಆನಂದ ಅಸ್ನೋಟೀಕರ, ಡಾ. ಕೃಷ್ಣ ಪ್ರಭು, ಆರ್.ಟಿ. ಮಿರಾಶಿ ಸೇರಿದಂತೆ ಜಿಲ್ಲೆಯ ಹಲವು ಗಣ್ಯರು, ಸಾರ್ವಜನಿಕ ಪ್ರಮುಖರು ಹಾಗೂ ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕತೆ, ಸಮಯಪಾಲನೆ, ಶಿಸ್ತು ಮತ್ತು ಸಮಾಜಮುಖಿ ಚಿಂತನೆಯ ಮೂಲಕ ತಮ್ಮ ನಗುಮುಖದ ಎತ್ತರದ ವ್ಯಕ್ತಿತ್ವ ಹೊಂದಿ, ಯುವ ಜನತೆಗೆ ಪ್ರೇರಣೆಯಾಗಿದ್ದ ಪ್ರಕಾಶ್ ನಾರ್ವೇಕರ್ ಅವರ ಆದರ್ಶಮಯ ಬದುಕು ಹಾಗೂ ದೇಶಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಲಕ್ಷ್ಮೇಶ್ವರ ಗ್ರಾಮಸ್ಥರು ಮತ್ತಿತರರು ಅಭಿಮಾನ ಪೂರ್ವಕವಾಗಿ ಗೌರವ ನುಡಿ ನಮನ ಸಲ್ಲಿಸಿದ್ದಾರೆ.
ಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ





