
ಅಂಕೋಲಾ: ತಾಲೂಕಿನ ಶಿರಗುಂಜಿಯಲ್ಲಿರುವ ಶಾಂತಿಕಾಪರಮೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳ ವಾರ್ಷಿಕ ಬಂಡಿಹಬ್ಬವು ಭಕ್ತಿ ಭಾವ ಮತ್ತು ಸಂಪ್ರದಾಯದ ಸೊಬಗಿನ ನಡುವೆ ವಿಜೃಂಭಣೆಯಿoದ ನೆರವೇರಿತು. ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಜನಪದ ಆಚರಣೆಗಳೊಂದಿಗೆ ನಡೆದ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.
ಹಬ್ಬಕ್ಕೆ ಒಂದು ಹೊತ್ತು ಹಾಗೂ ಸಾಸಿ ಹಾಕುವ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಗಿದ್ದು, ನಂತರ ಪ್ರತಿದಿನ ಆಡುಕಟ್ಟೆ, ಹಗರಣ ಸೇರಿದಂತೆ ವಿವಿಧ ಆಚರಣೆಗಳು ಜರುಗಿದವು. ದೇವರ ಕಳಸಗಳು ಪ್ರತಿದಿನ ವಿಶೇಷ ಪೂಜೆ ಸ್ವೀಕರಿಸಿ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರ ಗಮನ ಸೆಳೆದವು.
ದೇವರು ಕರೆಯುವ ದಿನ ರಾತ್ರಿ ನಡೆದ ದೇವರ ಕಳಸಗಳ ಭವ್ಯ ಮೆರವಣಿಗೆ ಹಾಗೂ ರಕ್ಕಸ ದೇವರುಗಳಿಗೆ ಹರಕೆ ಸಮರ್ಪಿಸುವ ಕಾರ್ಯಕ್ರಮ ಅತ್ಯಂತ ರೋಚಕವಾಗಿ ನಡೆಯಿತು. ಬಂಡಿಹಬ್ಬದ ಮುಖ್ಯ ದಿನ ತಾರಿಜಟಕ ಮತ್ತು ಪರಿವಾರ ದೇವರುಗಳಿಗೆ ಕ್ಷೇತ್ರಬಲಿ ಸಲ್ಲಿಸಿದ ಬಳಿಕ ಸಂಜೆ ಬಂಡಿಹಬ್ಬ ಆಚರಿಸಲಾಯಿತು.
ಮರುದಿನ ಹೊಲೆಟ್ರ ಮತ್ತು ಬಲಿಹುತ್ತು ದೇವರಿಗೆ ಕ್ಷೇತ್ರಬಲಿ ನೆರವೇರಿಸಲಾಯಿತು. ವಿಶೇಷವಾಗಿ ಬಂಡಿ ಎಳೆಯುವ ಸಂಪ್ರದಾಯಿಕ ವಿಧಾನ ಭಕ್ತರ ಆಕರ್ಷಣೆಯ ಕೇಂದ್ರಬಿoದುವಾಗಿ ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ದೇವರ ಕಳಸ ಮೆರವಣಿಗೆಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳು ನೆರವೇರಲೆಂದು ಪ್ರಾರ್ಥಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

