ಶಿರಸಿ: ಕರ್ನಾಟಕದ ತಿರುಪತಿ ಎಂದು ಪ್ರಸಿದ್ಧಿ ಪಡೆದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಸಿದ್ಧವಾದ ಶ್ರೀ ಕ್ಷೇತ್ರ ವೆಂಕಟರಮಣ ದೇವಸ್ಥಾನ ಮಂಜಗುಣಿಯಲ್ಲಿ ಜನವರಿ 28 ರಂದು ರಥೋತ್ಸವ ನಡೆಯಲಿದೆ. ಹೌದು, ಮಂಜುಗುಣಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಊರು. ಶಿರಸಿಯಿಂದ 26 ಕಿಲೋಮೀಟರ್ ದೂರದಲ್ಲಿರುವ ಇಲ್ಲಿನ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ ಪ್ರಸಿದ್ಧವಾಗಿದೆ. ಇದನ್ನು ಕರ್ನಾಟಕದ ತಿರುಪತಿ ಎಂದೂ ಕರೆಯುತ್ತಾರೆ. ರಥೋತ್ಸವ ಹಿನ್ನಲೆಯಲ್ಲಿ ಜನವರಿ 22 ರಿಂದಲೇ ಧಾರ್ಮಿಕ ವಿಧಿ- ವಿಧಾನಗಳು ಆರಂಭವಾಗಿದೆ.
ಸುಂದರ ಕಲ್ಲಿನ ಕೆತ್ತನೆಗಳೊಂದಿಗೆ, ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋಶಾಲೆ, ಅಶ್ವಶಾಲೆ, ಮಾರುತಿ ದೇವಸ್ಥಾನ ಮತ್ತು ಶ್ರೀ ಚಕ್ರತೀರ್ಥ ಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ.
ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲುಕಿನಲ್ಲಿದ್ದು ಇದು ಕಾರವಾದದಿಂದ 93 ಕಿಮೀ ದೂರದಲ್ಲಿದೆ. ಬೆಂಗಳೂರಿನಿ0ದ ಇಲ್ಲಿಗೆ 431 ಕಿಮೀ. ದೂರದಲ್ಲಿದ್ದು ಈ ಸ್ಥಳಕ್ಕೆ ಬರಲು ನೀವು ಮೊದಲು ಶಿರಸಿಗೆ ಬರಬೇಕಾಗುತ್ತದೆ. ತದನಂತರ ಶಿರಸಿಯಿಂದ ಮಂಜುಗುಣಿಗೆ ಹೊರಡಲು ಹಲವಾರು ಖಾಸಗಿ ವಾಹನಗಳು ಲಭ್ಯವಿದ್ದು ಸರಕಾರಿ ಬಸ್ಸುಗಳ ವ್ಯವಸ್ಥೆಯೂ ಇದೆ. ಇದು ಶಿರಸಿಯಿಂದ 27 ಕಿಮೀ ದೂರದಲ್ಲಿದ್ದು ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ. ಅಷ್ಟೇ ಅಲ್ಲ ನೀವು ಮಂಗಳೂರಿನಿ0ದ ಈ ಕ್ಷೇತ್ರಕ್ಕೆ ಬರುವುದಾದಲ್ಲಿ ಮೊದಲಿಗೆ ಕುಮಟ ಬಂದು ಅಲ್ಲಿಂದ ಈ ಕ್ಷೇತ್ರಕ್ಕೆ ಬರಲು ಬಸ್ಸುಗಳು ಲಭ್ಯವಿದೆ.
ವಿಸ್ಮಯ ನ್ಯೂಸ್, ಶಿರಸಿ