ಕೊರೊನಾ ಸಂಕಷ್ಟ ಕಾಲದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶಾಸಕಿ ರೂಪಾಲಿ ನಾಯ್ಕ
ಅಚವೆ, ಸುಂಕಸಾಳ, ಹಿಲ್ಲೂರಿನ ಗ್ರಾಮೀಣ ಭಾಗದ ಶಿಕ್ಷಣ ರತ್ನಗಳು
ಅಂಕೋಲಾ : ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ 3 ವಿದ್ಯಾರ್ಥಿಗಳಿಗೆ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಗುರುವಾರ ಲ್ಯಾಪ್ಟಾಪ್ ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪಕ್ಕದ ಸಭಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಉತ್ತಮ ಸಾಧನೆ ಮಾಡಿದ್ದು, ಕರೊನಾ ಸಂಕಷ್ಟ ಕಾಲದಲ್ಲಿ ಧೃತಿಗೆಡದ ವಿದ್ಯಾರ್ಥಿಗಳು, ತಮ್ಮ ಪಾಲಕರ, ಶಿಕ್ಷಕರ, ತಾಲೂಕಿನ ಹಾಗೂ ಜಿಲ್ಲೆಯ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಹೇಳಿ, ಶಿಕ್ಷಣ ಸಚಿವ ಸುರೇಶ ಕುಮಾರ ಪರೀಕ್ಷಾ ಕಾಲದಲ್ಲಿ ಕೋವಿಡ್ ಮಾರ್ಗ ಸೂಚಿಗೆ ಒತ್ತು ನೀಡಿದ್ದನ್ನು ಸ್ಮರಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದ ರ್ಯಾಂಕ್ಗಳಿಸಿದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಗಳಾದ ಶಂಕರ ಗೌಡ ಅಚವೆ, ಅನಂತಕುಮಾರ ಭಟ್ ಸುಂಕಸಾಳ, ಪೂಜಾ ಭಟ್ ಹಿಲ್ಲೂರು ಇವರಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಲ್ಲಿ ಅಂಕೋಲಾ ತಾಲೂಕಿನ ಅಚವೆಯ ಅನನ್ಯ ಗಾಂವಕರ, ಆದಿತ್ಯ ಭಟ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್ ಗಳಿಸಿ ಆಯ್ಕೆಯಾಗುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಇವರಿಗೆ ಸರ್ಕಾರದಿಂದ ಲ್ಯಾಪ್ ಟಾಪ್ ವಿತರಿಸಲಾಗಿದೆ.
ತಾಪಂ.ಅಧ್ಯಕ್ಷೆ ಸುಜಾತಾ ಗಾಂವಕರ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಉಪಸ್ಥಿತರಿದ್ದ ಈ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಮತ್ತು ಬಿಇಒ ಶ್ಯಾಮಲಾ ನಾಯಕ ವೇದಿಕೆ ಹಂಚಿಕೊಳ್ಳುವದರೊಂದಿಗೆ ಮಹಿಳಾ ಮಣಿಗಳ ಪ್ರಾಬಲ್ಯ ಕಂಡುಬಂತು. ವಿದ್ಯಾರ್ಥಿನೀಯರು ಪ್ರಾರ್ಥಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ ಸರ್ವರನ್ನು ಸ್ವಾಗತಿಸಿ, ಎಸ್,ಎಸ್,ಎಲ್,ಸಿ ಪರೀಕ್ಷೆ ಶುಶೂತ್ರವಾಗಿ ನಡೆಯಲು ಮತ್ತು ವಿದ್ಯಾರ್ಥಿಗಳ ಸಾಧನೆಗೆ ಸಹಕರಿಸಿದವರನ್ನು ಸ್ಮರಿಸಿದರು. ಬಿಆರ್ಪಿ ಭಾಸ್ಕರ ನಾಯಕ ನಿರ್ವಹಿಸಿದರು, ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ವಂದಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ