Uttara Kannada
Trending

ಭಟ್ಕಳದಲ್ಲಿ ಹಂತಹಂತವಾಗಿ ಲಾಕ್‍ಡೌನ್ ಸಡಿಲಿಕೆ

ಸಾಂಸ್ಥಿಕ ಕ್ವಾರಂಟೈನಲ್ಲಿ 14 ದಿನ ಪೂರೈಸಿದ ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಹಳಿಯಾಳದಲ್ಲಿ ಕೆಲವರ ಗಂಟಲ ದ್ರವದ ಮಾದರಿಯ ವರದಿ ಬರದೇ ಬಿಡುಗಡೆಮಾಡಿರುವುದಕ್ಕೆ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಾದ ಡಾ. ಹರೀಶಕುಮಾರ ಕೆ. ಅವರು ಸ್ಪಷ್ಟನೆ ನೀಡಿದ್ದು, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರುವ ಎಲ್ಲರ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಬೇಕು ಎಂಬ ನಿಯಮವಿಲ್ಲ. ಆದರೆ, ನಾವು ಜನರ ಸಮಾಧಾನಕ್ಕಾಗಿ ಎಲ್ಲರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೇವೆ. ಮಂಗಳೂರು ಪ್ರಯೋಗಾಲಯದಲ್ಲಿ ಒಮ್ಮೆಲೇ ಒತ್ತಡ ಹೆಚ್ಚಿದ್ದರಿಂದ ಕೆಲವರ ವರದಿಗಳು ಬರುವುದು ಒಂದೆರಡು ದಿನ ವಿಳಂಬವಾಗಿದೆ. ಜಿಲ್ಲೆಯಿಂದ ಕಳಿಸಿದ 1.675 ಜನರ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ. ಸದ್ಯ ಕಾರವಾರದಲ್ಲಿ ದಿನಕ್ಕೆ 100 ಮಾದರಿಗಳ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಆರ್.ಟಿ.ಪಿ.ಸಿ.ಆರ್ ಎಂಬ ಅತ್ಯಾಧುನಿಕ ಯಂತ್ರದ ಕಾರ್ಯನಿರ್ವಹಣೆ ಪ್ರಾರಂಭವಾಗಲಿದ್ದು, ನಂತರ ದಿನಕ್ಕೆ 400ಕ್ಕೂ ಅಧಿಕ ಮಾದರಿಗಳ ಪರೀಕ್ಷೆ ಇಲ್ಲಿಯೇ ಮಾಡಬಹುದು ಎಂದು ಅವರು ವಿವರಿಸಿದ್ದಾರೆ. ಸದ್ಯ ಕಾರವಾರದಲ್ಲಿ 217 ಜನ ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನಲ್ಲಿದ್ದಾರೆ. ಸೋಮವಾರ 116 ಜನರನ್ನು ಬಿಡುಗಡೆಮಾಡಲಾಗಿದೆ. 1,064 ಜನ ಹೋಂ ಕ್ವಾರಂಟೈನಲ್ಲಿದ್ದಾರೆ. ಭಟ್ಕಳದಲ್ಲಿ 121 ಜನ ಸಾಂಸ್ಥಿಕ, 410 ಜನ ಹೋಂ ಕ್ವಾರಂಟೈನ್, ಕುಮಟಾದಲ್ಲಿ 136 ಜನ ಸಾಂಸ್ಥಿಕ, 1723 ಜನ ಹೋಂ ಕ್ವಾರಂಟೈನ್, ಶಿರಸಿಯಲ್ಲಿ 175 ಜನ ಸಾಂಸ್ಥಿಕ, 1,537 ಜನ ಹೋಂ ಕ್ವಾರಂಟೈನಲ್ಲಿದ್ದಾರೆ. ಅಂಕೋಲಾದಲ್ಲಿ 82, ಯಲ್ಲಾಪುರದಲ್ಲಿ 57 ಜನ ಸಾಸ್ಥಿಕ ಕ್ವಾರಂಟೈನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಂಟೇನ್ಮೆಂಟ್ ವಲಯ ಎಂದು ಸಂಪೂರ್ಣ ಸೀಲ್‍ಡೌನ್ ಆಗಿರುವ ಭಟ್ಕಳದಲ್ಲಿ ಮತ್ತೆ ಹೊಸ ಕರೋನಾ ಪ್ರಕರಣಗಳು ಬಾರದೇ ಇದ್ದಲ್ಲಿ ಹಂತ, ಹಂತವಾಗಿ ನಿಯಮಗಳನ್ನು ಸಡಿಲಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಭಟ್ಕಳದಲ್ಲಿ ಹೊಸ ಪ್ರಕರಣಗಳು ಕಾಣಿಸಿಲ್ಲ, ಸದ್ಯ ಕರೋನಾ ಸೋಂಕಿತರಾಗಿ ಆಸ್ಪತ್ರೆ ಸೇರಿದ ವ್ಯಕ್ತಿಗಳೆಲ್ಲರೂ ಮಾಸಾಂತ್ಯಂದ ಒಳಗೆ ಬಿಡುಗಡೆಯಾಗಲಿದ್ದಾರೆ. ಇದರಿಂದ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬ್ಯೂರೊ ರಿಪೋರ್ಟ್, ವಿಸ್ಮಯ ನ್ಯೂಸ್.

Back to top button