Follow Us On

WhatsApp Group
Big News
Trending

Nagara Panchami: ಈತ ಕಲ್ಲನಾಗರ ಪೂಜಿಸಲ್ಲ! ಹಾವನ್ನ ಅರಸಿ ಕಾಡಿಗೆ ಹೋಗ್ತಾನೆ.! ನಿಜ ನಾಗರಕ್ಕೆ ಹಾಲೆರೆದು ಪೂಜೆ

ಇವರು ತುಂಬಾ ವಿಭಿನ್ನ. ಕಲ್ಲು ನಾಗರನ್ನು ಪೂಜಿಸುವುದಿಲ್ಲ. ಬದಲಿಗೆ ನಾಗರಪಂಚಮಿಯoದು ಕಾಡಿಗೆ ಹೋಗಿ ಜೀವಂತ ನಾಗರ ಹುಡುಕಿ ಪೂಜೆ ಸಲ್ಲಿಸುತ್ತಾರೆ. .! ನಿಜ ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸುವುದು ಇವರ ವಿಶೇಷತೆ.

ಶಿರಸಿ: ಕಲ್ಲನಾಗರ ಕಂಡರೆ ಹಾಲೆರೆವರಯ್ಯ… ನಿಜ ನಾಗರ ಕಂಡರೆ ಭಯ ಪಡುವರಯ್ಯ ಎನ್ನುವ ಶರಣರ ನುಡಿ ಇಲ್ಲಿ ಸುಳ್ಳಾಗಿದೆ. ನಾಗ ಪಂಚಮಿ ಹಿನ್ನೆಲೆಯಲ್ಲಿ ಉರಗ ಪ್ರೇಮಿಯೊಬ್ಬರು ದಿಟ ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸಿದ್ದಾರೆ. ಭುಸುಗುಟ್ಟುವ ನಾಗರ ಹಾವಿನ ಆರ್ಭಟದ ನಡುವೆ ಯಾವುದೇ ಭಯವಿಲ್ಲದ ಭಕ್ತಿಯ ವಾತಾವರಣದಲ್ಲಿ ನಾಗ ಪೂಜೆ ನೆರವೇರಿದೆ.

ಉರಗ ಲೋಕದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಿರಸಿಯ ಸುರೇಶ ಹುಲೇಕಲ್ ಕುಟುಂಬದ ಸದಸ್ಯರು ಪ್ರತೀ ವರ್ಷದಂತೆ ಈ ಬಾರಿ ಕೂಡ ನಿಜ ನಾಗರಕ್ಕೆ ಹಾಲೆರೆದು ಪಂಚಮಿ ಪೂಜೆ ಆಚರಿಸಿದರು. ಕಳೆದ ಮೂವತೈದು ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ತೋರುತ್ತ ಬಂದಿರುವುದು ಸುರೇಶ ಹುಲೇಕಲ್ ಕುಟುಂಬ ಪ್ರತಿ ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಿದೆ.

ಕುಟುಂಬದ ಹಿರಿಯ ಹಾವಿನ ಸುರೇಶಣ್ಣ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ, ಪ್ರಕಾಶ ಹಾಗೂ ಪ್ರಣವ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ. ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಇತರರು ಕಲ್ಲು ನಾಗರಗಳಿಗೆ ಹಾಲೆರೆದಂತೆ ಹಾಲೆರೆದು ಪೂಜೆ ಮಾಡುವ ಪದ್ದತಿ ಅನುಸರಿಸುತ್ತಿದ್ದಾರೆ. ಮನೆಯ ಸದಸ್ಯರೆಲ್ಲ ಸೇರಿ ಹೂವು, ಅಕ್ಷತೆ ಹಾಕಿ ಆರತಿ ಬೆಳಗಿ ನಾಗಪಂಚಮಿ ಆಚರಿಸುತ್ತಾರೆ.

ಹುಲೇಕಲ್ ಕುಟುಂಬದ ಪ್ರಶಾಂತ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಾವುಗಳನ್ನು ಹಾಗೂ ಅಪಾಯದಲ್ಲಿರುವ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬರುವ ಕಾಯಕ ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಿ, ಯಾವುದೇ ಸಂದರ್ಭದಲ್ಲಿ ದೂರವಾಣಿ ಕರೆ ಬಂದರೂ ತಕ್ಷಣ ದೌಡಾಯಿಸಿ ಎಂತಹ ಘಟಸರ್ಪವನ್ನಾದರೂ ಸರಾಗವಾಗಿ ಚೀಲದಲ್ಲಿ ತುಂಬಿ ಕಾಡಿಗೆ ಮರಳಿಸುತ್ತಾರೆ.

ಅರಣ್ಯ ಇಲಾಖೆಯವರೂ ಹೆಚ್ಚಾಗಿ ಹಾವಿನ ರಕ್ಷಣೆ ಸನ್ನಿವೇಶ ಎದುರಾದರೆ ನೆನಪಿಸಿಕೊಳ್ಳುವುದು ಪ್ರಶಾಂತ ಅವರನ್ನೇ. ಇಷ್ಟು ವರ್ಷ ಮನೆಯ ಆವರಣದಲ್ಲಿ ನಡೆಯುತ್ತಿದ್ದ ಪೂಜೆ ಈ ಬಾರಿ ಹಾವಿನ ಆವಾಸಕ್ಕೆ ತೆರಳಿದೆ. ಬೆಟ್ಟದಲ್ಲಿನ ಹಾವಿಗೆ ಅಲ್ಲಿಯೇ ಹೋಗಿ ಪೂಜಿಸಿದ್ದಾರೆ. ಪ್ರಕೃತಿಯ ಮಕ್ಕಳಿಗೆ ಪ್ರಕೃತಿ ಮಧ್ಯವೇ ಪೂಜೆ ನಡೆಸಿದ್ದು ಈ ಬಾರಿಯ ಹುಲೇಕಲ್ ಕುಟುಂಬದ ನಾಗ ವಿಶೇಷವಾಗಿದೆ.

ಜೀವಂತ ನಾಗರ ಪೂಜೆಯ ಉದ್ದೇಶ ಹಾವಿನ ಬಗ್ಗೆ ಪ್ರೀತಿಯನ್ನು ಮೂಡಿಸುವದಾಗಿದೆ. ಹಾವುಗಳು ಪರಿಸರದ ಸಮತೋಲನ ಕಾಯುವ ಜೀವಿಗಳಾಗಿವೆ. ಇಲಿಗಳನ್ನು ನಿಯಂತ್ರಿಸುವಲ್ಲಿ ಹಾವಿನ ಪಾತ್ರ ದೊಡ್ಡದು. ಹಾಗಾಗಿ ಹಾವಿನ ಬಗ್ಗೆ ದ್ವೇಶ ಬೇಡ. ಹಾವನ್ನು ಕೊಲ್ಲವ ಬದಲು ಅದನ್ನು ಓಡಿಸುವ ಪ್ರಯತ್ನ ಮಾಡಿದರೆ ಉತ್ತಮ.

ಜನರಲ್ಲಿ ಹಾವಿನ ಜಾತಿಯ ಬಗ್ಗೆ ಇರುವ ಭಯ ಹೋಗಲಾಡಿಸಲು ನಾಗರ ಪಂಚಮಿ ದಿನ ವಿಶೇಷವಾಗಿ ಜೀವಂತ ನಾಗರದ ಪೂಜೆ ಮಾಡಲಾಗುತ್ತದೆ. ಪೂಜೆ ಮುಗಿದ ಬಳಿಕ ಹಾವನ್ನು ಪಕ್ಕದ ಕಾಡಿಗೆ ಬಿಡುತ್ತೇವೆ ಎಂದು ಪ್ರಶಾಂತ್ ಹೇಳುತ್ತಾರೆ. ಕಲ್ಲ ಹಾವಿನ ಬದಲು ನಿಜದ ಹಾವಿಗೆ ಪೂಜೆ ಮಾಡುವ ಅನುಭವ ವಿಶಿಷ್ಟವಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button