Uttara Kannada
Trending

ಅಂಕೋಲಾದಲ್ಲಿ ಒಂದೇ ದಿನ 117 ಮಂದಿಯ ಗಂಟಲುದ್ರವಪರೀಕ್ಷೆಗೆ

ಸುಳ್ಳುವದಂತಿ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳು

ಅಂಕೋಲಾ : ಗಂಗಾವಳಿ ನದಿ ತೀರದ ಅಗ್ರಗೋಣ ಗ್ರಾಮದಂಚಿನ ಶೇಡಿಕಟ್ಟಾ ಮಜರೆಯ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡ ಸೋಂಕಿನ ಕುರಿತು ಹಲವು ಅಂತೆ-ಕಂತೆಗಳ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಜನತೆಯ ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅಂಕೋಲಾಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟನೆ ನೀಡಿ, ಸುಳ್ಳು ವದಂತಿಗಳನ್ನು ನಂಬಬಾರದೆಂದು ತಿಳಿಹೇಳಿದರು.
ಶೇಡಿಕಟ್ಟಾ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿಯೇ ಇಲ್ಲಾ, ಆತ ಟಿ.ಬಿ ಪೇಶ್‍ಂಟ್ ಎಂದು ಕೆಲವರು ಆಡಿಕೊಂಡರೆ, ಇನ್ನು ಕೆಲವರು ಆತನು ಕಾರವಾರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನುವ ಮಟ್ಟಿಗೆ ಸುಳ್ಳು ಸುದ್ದಿಯನ್ನು ಹರಿದುಬಿಟ್ಟಿದ್ದರಿಂದ ಜನತೆ ಭಯ-ಭೀತರಾಗುವಂತೆ ಮಾಡಿತ್ತು.

ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ :ಮಂಗಳೂರು ಬಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಬೋಟ್‍ನಲ್ಲಿ ಕಾರ್ಮಿಕನಾಗಿದ್ದ ಶೇಡಿಕಟ್ಟಾದ ಈತ ಕಳೆದ ಕೆಲದಿನಗಳ ಹಿಂದೆ ತನ್ನ ಸಂಬಳ ತರಲು ಮನೆಯಿಂದ ಮಂಗಳೂರಿಗೆ ಹೋಗಿಬಂದಿದ್ದು, ಆ ಪ್ರದೇಶವು ಈಗಾಗಲೇ ಹಲವು ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ಕಂಟೈನ್‍ಮೆಂಟ್ ಝೋನ್ ಆಗಿ ಗುರುತಿಸಿಕೊಂಡಿತ್ತು. ಹಾಗಾಗಿ ಈ ವ್ಯಕ್ತಿಗೆ ಅಲ್ಲಿಂದಲೇ ಸೋಂಕು ತಗಲಿರಬಹುದೇ ಎನ್ನುವ ಮಾತು ಕೇಳಿಬರುತ್ತಿರುವ ನಡುವೆಯೇ ಆತನು ತನ್ನ ಪ್ರಯಾಣ ಮತ್ತು ಪ್ರಾಥಮಿಕ ಸಂಪರ್ಕಿತರ ವಿವರ ನೀಡಲು ಹಿಂದೇಟು ಹಾಕುತ್ತಿರುವುದು ಸಂಬಂದಿಸಿದ ಇಲಾಖೆಗಳಿಗೆ ಪ್ರಕರಣದ ಪತ್ತೆಗೆ ತೊಡಕಾಗಿದೆ. ಆತ ಹೇಳಿದ ಪ್ರಯಾಣದ ದಿನ ಮತ್ತು ಮೊಬೈಲ್ ಟವರ್ ಲೊಕೇಶನನಲ್ಲಿ ವ್ಯತ್ಯಾಸ ಕಂಡುಬಂದಿದೆ ಎನ್ನಲಾಗಿದೆ. ಮಂಗಳೂರಿನಿಂದ ಬಂದ ಈತ ಒಂದು ವಾರಗಳ ಕಾಲ ಊರಿನ ಸುತ್ತಮುತ್ತ ಓಡಾಡಿಕೊಂಡಿರುವುದು, ಈ ನಡುವೆ ಕೊಂಚ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡು ಚಿಕಿತ್ಸೆಗಾಗಿ ಗೋಕರ್ಣ,ಕುಮಟಾದ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಬಂದಿರುವುದು ಮತ್ತು ರೋಗ ಲಕ್ಷಣಗಳು ತೀವ್ರವಾದ ನಂತರ ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಾದ ವೇಳೆ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಯಿತು ಎನ್ನಲಾಗಿದೆ. ರಿಪಿಟ್ ಸೆಂಪಲ್‍ನಲ್ಲಿಯೂ ಪಾಸಿಟಿವ್ ಲಕ್ಷಣ ಕಂಡುಬಂದಿದ್ದು ಹಾಗಾಗಿಯೇ ಆತನನ್ನು ಕಾರವಾರದ ವೈಧ್ಯಕೀಯ ವಿಜ್ಞಾನ ಸಂಸ್ಥೆಯ ಕೋವೀಡ್-19 ವಾರ್ಡಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.

ಮಗಳಿಂದಲೂ ಹೆಚ್ಚಿದ ಆತಂಕ : ಶೇಡಿಕಟ್ಟಾ ವ್ಯಕ್ತಿಗೆ ಮಂಗಳೂರಿನ ಪಯಣದ ಅವಧಿಯಲ್ಲಿ ಸೋಂಕು ತಗುಲಿರುವ ಸಾಧ್ಯತೆ ಒಂದೆಡೆಯಾದರೆ, ಬೇರೆ ರಾಜ್ಯದಲ್ಲಿ ಸಿಗಡಿ ಪ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು ಮನೆಗೆ ವಾಪಸ್ಸಾದ ಮಗಳ ಕುರಿತು ಸಂಶಯ ಮನೆಮಾಡಿದೆ. ವಿವಾಹ ನಿಶ್ಚಯವಾಗಿದ್ದ ಮಗಳು ತನ್ನ ಗೆಳತಿಯರ ಜೊತೆ ಬಟ್ಟೆ ಖರೀದಿಸಲು ಕುಮಟಾದ ಪ್ರಸಿದ್ದ ಜವಳಿ ಖರೀದಿಸಲು ಬಸ್ಸ್, ಆಟೋರಿಕ್ಷಾ ಮೂಲಕ ಹೋಗಿಬಂದಿರುವುದು ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ತಂದೆ ಮತ್ತು ಮಗಳ ಟ್ರಾವೆಲ್ ಹಿಸ್ಟರಿ ನೋಡಿದರೆ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು ಆರೋಗ್ಯ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಜೂನ್ 26ರಂದು ಸೋಂಕಿತ ವ್ಯಕ್ತಿಯ ಕುಟುಂಬ ಸದಸ್ಯರು ಅಕ್ಕ-ಪಕ್ಕದ ಜನರು ಸೇರಿದಂತೆ ಆಸ್ಪತ್ರೆ ವೈದ್ಯರು-ಸಿಬ್ಬಂದಿಗಳನೇಕರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು,

ಸಮುದಾಯದಲ್ಲಿ ಸೋಂಕು ಹರಡಿರಬಹುದೇ ಎಂಬುದನ್ನು ಪತ್ತೆ ಹಚ್ಚಲು ರೆಂಡಮ್ ಟೆಸ್ಟ್ ಗಾಗಿಯೂ ಕೆಲವರ ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿದ್ದು ಅಂಕೋಲಾ ಒಂದರಿಂದಲೇ 117 ಜನರ ಸ್ವ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಇದೆ.

ಒಟ್ಟಾರೆಯಾಗಿ ರೋಗಿ ಮತ್ತು ರೋಗಲಕ್ಷಣಗಳು ಎನೇ ಇದ್ದರೂ ಚಿಕಿತ್ಸೆ ನೀಡಿದ ವೈದ್ಯರು, ಆಸ್ಪತ್ರೆಗೆ ಬಂದುಹೋದ ಇತರರು, ಪ್ರಯಾಣಿಕ ವಾಹನದವರು, ಹೊಟೆಲ್, ಬಟ್ಟೆ ಅಂಗಡಿ ಮತ್ತಿತ್ತರರ ನೆಮ್ಮದಿಗೆ ತೊಂದರೆಯಾಗಿದೆ.
-ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button