Focus News
Trending

ಪಾನ್ ಮಸಾಲ ಹೆಸರಿನ ದೊಡ್ಡ ಚೀಲದಲ್ಲಿ ಮಾಂಸ? ಬಸ್ಸಿನಲ್ಲಿ ಸಾಗಾಟಕ್ಕೆ ಅವಕಾಶ ನೀಡಿದವರಾರು ? 

ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು  ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ

ಅಂಕೋಲಾ: ಪಾನ್ ಮಸಾಲ ಹೆಸರಿನ ದೊಡ್ಡ ಬ್ಯಾಗೊಂದರಲ್ಲಿ  ಮಾಂಸದ ಪೊಟ್ಟಣಗಳನ್ನು ಮುಚ್ಚಿಟ್ಟು ಅಕ್ರಮವಾಗಿ ಬಸ್ ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತಪಾಸಣೆ ನಡೆಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ.    ಶಿರಸಿ – ಕಾರವಾರ ಬಸ್ಸಿನಲ್ಲಿ  ವ್ಯಕ್ತಿಯೋರ್ವರು ದೊಡ್ಡ ಕೈ ಚೀಲದಲ್ಲಿ ಮಾಂಸ ತುಂಬಿ ಸಾಗಿಸುತ್ತಿದ್ದ ವೇಳೆ ಅದಾರೋ  ದನದ ಮಾಂಸವಿರಬಹುದೆಂಬ  ಅನುಮಾನದಿಂದ ದಾರಿಮಧ್ಯೆ ಅಂಕೋಲಾ ಬಸ್ ನಿಲ್ದಾಣದ ಕಂಟ್ರೋಲ್ ರೂಂಗೆ ಸುದ್ದಿ ಮುಟ್ಟಿಸಿ, ಅಲ್ಲಿಂದ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಿತ್ತು ಎನ್ನಲಾಗಿದೆ.

ಈ ಸುದ್ದಿ ಪಟ್ಟಣದ ಕೆಲವೆಡೆ ಹರಡಿ ಹಿಂದೂ ಸಂಘಟನೆಯ ಕೆಲ ಪ್ರಮುಖರು ಬಸ್ ಸ್ಟ್ಯಾಂಡ್ ನತ್ತ ದೌಡಾಯಿಸಿದ್ದರು. ಇದಕ್ಕೂ ಮೊದಲೇ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಲ್ಲಿ ಮಾಂಸ ತಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು  ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ  ನಡೆಸಿದ್ದು, ಈ ವೇಳೆ ಆ ವ್ಯಕ್ತಿಯು ತಾನು ತಂದಿರುವುದು ಮಾಂಸವೇ ಹೌದು . ಇದನ್ನು ಕಾರವಾರದ ಪ್ರತಿಷ್ಠಿತ ಹೋಟೆಲ್ ಒಂದಕ್ಕೆ ಸಾಗಿಸುತ್ತಿರುವುದು ನಿಜ . ಆದರೆ ಸಾರ್ವಜನಿಕರು ಅವಮಾನ ವ್ಯಕ್ತ ಪಡಿಸಿದಂತೆ ತಾನು ಒಯ್ಯುತ್ತಿರುವುದು ದನದ ಮಾಂಸವಲ್ಲ. ಚಿಕನ್ ಸುರಮಾ ಮಾಡಲು ಅನುಕೂಲವಾಗುವಂತೆ ಸ್ವಲ್ಪ ಮೆತ್ತಗಿನ ಮಾಂಸ ಒಯ್ಯಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದಾಗ , ಪೊಲೀಸರು ಬ್ಯಾಗನಲ್ಲಿರುವ ಮಾಸದ ಪೊಟ್ಟಣ್ಣಗಳನ್ನು ಮತ್ತೊ ಮ್ಮೆ ಪರಿಶೀಲಿಸಿ ಅದು ದನದ ಮಾಂಸವಲ್ಲ ಎಂದು ಖಚಿತ ಪಡಿಸಿಕೊಂಡು, ಆತನನ್ನು ಪುನಃ ಬಸ್ ಸ್ಟ್ಯಾಂಡಿಗೆ ತೆರಳಲು ಅವಕಾಶ ಮಾಡಿಕೊಟ್ಟ ನಂತರ ಮಾಂಸದ ಕುರಿತಾಗಿನ ಕೆಲ ಗೊಂದಲಗಳಿಗೆ ತಾತ್ಕಾಲಿಕ ತೆರೆ ಬಿತ್ತು ಎನ್ನಲಾಗಿದೆ.

ಮಾಂಸ ಯಾವುದೇ ಇದ್ದರೂ ಬಸ್ಸಿನಲ್ಲಿ ಮಾಂಸ ಸಾಗಾಟಕ್ಕೆ ಅನುಮತಿ ಇದೆಯೇ ? ಪ್ರಯಾಣಿಕನ ಕೈಲಿದ್ದ  ಬ್ಯಾಗ್ ನಲ್ಲಿ ಮಾಂಸವಿರುವುದು ಬಸ್ ನ ಚಾಲಕ – ನಿರ್ವಾಹಕರ ಗಮನಕ್ಕೆ ಮೊದಲು ಬಂದಿರಲಿಕ್ಕಿಲ್ಲ ವಾದರೂ, ನಿಲ್ದಾಣದ ಅಧಿಕಾರಿಗಳ ಮೂಲಕ ಪೋಲೀಸ್ ಠಾಣೆ ಮೆಟ್ಟಿಲೇರಿದ್ದ ಈ ವಿಷಯದ ಕುರಿತು ಕೊನೆ ಘಳಿಗೆಯಲ್ಲಾದರೂ ಸಾರಿಗೆ ಸಂಸ್ಥೆ ಪರವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ರಮ ಕೈಗೊಂಡರೇ ? ಅಥವಾ ಈ ವಿಷಯ ಅಷ್ಟೊಂದು ಲಘುವಾಗಿ ಪರಿಗಣಿಸುವಂತಿತ್ತೇ ?   ಇಲ್ಲವೇ ಬೇರೆ ರೀತಿಯ ಒತ್ತಡ ಇಲ್ಲವೇ ಆಮಿಷಕ್ಕೆ ಒಳಗಾಗಿ ಇಂಥಹ ಅಕ್ರಮ ಸಾಗಾಟಕ್ಕೆ ಇವರೂ ಕೈ ಜೋಡಿಸುತ್ತಾರೆಯೇ ಎಂಬ ಸಂಶಯದ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದ್ದು , ಸಂಬಂಧಿಸಿದವರೇ ಇದಕ್ಕೆ ಉತ್ತರಿಸಬೇಕಿದೆ.

ಸಾರಿಗೆ ವಿಭಾಗದ ಹಿರಿಯ ಅಧಿಕಾರಿಗಳೂ  ಈಗಲಾದರೂ ಎಚ್ಚೆತ್ತು ಸೂಕ್ತ ತನಿಖೆ ನಡೆಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ.  ಗ್ರಾಮೀಣ ಭಾಗದ ಬಡವರು ತಮ್ಮ ಮನೆಯ ಒಪ್ಪತ್ತಿನ ಊಟಕ್ಕಾಗಿ ಮೀನು- ಮಾಂಸ ಸಾಗಿಸುವಾಗ  ನಿರಾಕರಿಸುವ , ಬೆದರಿಸುವ, ದರ್ಪ ತೋರುವ  ಕೆಲ ಸಿಬ್ಬಂದಿಗಳು , ದೊಡ್ಡ ದೊಡ್ಡ ಹೊಟೇಲುಗಳಿಗೆ ಈ ರೀತಿ  ಮಾಂಸ ಸಾಗಾಟ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಳ್ಳುವುದು ಯಾಕೆ ? ಅಥವಾ ಒಳ ಒಪ್ಪಂದದಿಂದ ಮಾಂಸ  ಸಾಗಾಟಕ್ಕೆ ಅನುಮತಿ ನೀಡಿದ್ದಾರೆಯೇ  ? ಹಾಗೂಮ್ಮೆ ಹೌದು ಎಂದಾದರೆ ಬಡವರ ಕಣ್ಣಿಗೆ ಸುಣ್ಣ , ದೊಡ್ಡವರ ಕಣ್ಣಿಗೆ ಬೆಣ್ಣೆ ಎಂಬ ಇಬ್ಬಗೆ ನೀತಿ ತೋರಿಸಿದಂತೆ ಆಗುವುದಿಲ್ಲವೇ ? ಎಂಬಿತ್ಯಾದಿ ಪ್ರಶ್ನೆಗಳು ಕೇಳಿ ಬರುತ್ತಿದ್ದು ಸಂಭದಿತ  ಸಾರಿಗೆ ಸಂಸ್ಥೆ ಜವಾಬ್ದಾರಿ ಸ್ಥಾನದಲ್ಲಿರುವವರು ಉತ್ತರಿಸುವರೇ ಕಾದು ನೋಡಬೇಕಿದೆ  .   

ವಿಸ್ಮಯ ನ್ಯೂಸ್ ವಿಲಾಸ ನಾಯಕ

Back to top button