Big News
Trending

ಉತ್ತರಕನ್ನಡದಲ್ಲಿ ಆತಂಕ ಮೂಡಿಸಿದ ಕ್ಯಾನ್ಸರ್ : ಹೆಚ್ಚುತ್ತಲೇ ಇದೆ ಮಹಾಮಾರಿ: ನಿಗೂಢವಾಗಿದೆ ಕಾರಣ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು ಎನ್ನುವ ಕೂಗು ಜೋರಾಗಿ ಕೇಳುತ್ತಲೇ ಇದೆ. ಇದರ ನಡುವೆ ಮಾರಕ ಕ್ಯಾನ್ಸರ್ ರೋಗ ಜಿಲ್ಲೆಯಲ್ಲಿ ಸದ್ದಿಲ್ಲದೇ ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕಳೆದ ಜನವರಿಯಿಂದ ಈ ವರೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಯೊಂದರಲ್ಲಿಯೇ ಸುಮಾರು 225ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು ಪ್ರತಿ ತಿಂಗಳು ಕ್ಯಾನ್ಸರ್ ತುತ್ತಾಗುವವರ ಸಂಖ್ಯೆ ಏರುತ್ತಲೇ ಇದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಕ್ಯಾನ್ಸರ್ ಮಾರಕ ಖಾಯಿಲೇ ಎಂದೇ ಹೇಳಲಾಗುತ್ತದೆ. ಒಮ್ಮೆ ಕ್ಯಾನ್ಸರ್ ಗೆ ತುತ್ತಾದರೆ ಯಾವುದೇ ರೋಗಿ ಸ್ವಲ್ಪ ನಿರ್ಲಕ್ಷ ತೋರಿದರು ಸಾವು ಸಂಭವಿಸುವುದೇ ಹೆಚ್ಚು. ಇಂತಹ ಮಾರಕ ಖಾಯಿಲೆ ಸದ್ಯ ಜಿಲ್ಲೆಯಲ್ಲಿ ಪ್ರತಿ ತಿಂಗಳು ಏರುತ್ತಲೇ ಇದ್ದು ಇದಕ್ಕೆ ಕಾರಣ ಏನು ಅನ್ನುವುದು ಮಾತ್ರ ಕುತೂಹಲವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆಂದು ಬಂದು ಪರೀಕ್ಷೆಗೊಳಪಟ್ಟು ಕ್ಯಾನ್ಸರ್ ಎಂದು ಧೃಡಪಟ್ಟವರ ಸಂಖ್ಯೆಯಿoದ ಕಳೆದ ಜನವರಿಯಿಂದ ಈ ವರೆಗೆ 225ಕ್ಕೂ ಅಧಿಕ ಪ್ರಕರಣಗಳಾಗಿದೆ.

ಕಳೆದ ಜನವರಿಯಲ್ಲಿ 24 ಪ್ರಕರಣ ಪತ್ತೆಯಾದರೆ, ಫೆಭ್ರವರಿಯಲ್ಲಿ 48, ಮಾರ್ಚ್ ನಲ್ಲಿ 17, ಏಪ್ರಿಲ್ ನಲ್ಲಿ 17, ಮೇ ನಲ್ಲಿ 25, ಜೂನ್ ನಲ್ಲಿ25, ಜುಲೈ ನಲ್ಲಿ 18, ಆಗಸ್ಟ್ ನಲ್ಲಿ 20, ಸೆಪ್ಟೆಂಬರ್ ನಲ್ಲಿ 25, ಅಕ್ಟೋಬರ್ ನಲ್ಲಿ 11 ಹಾಗೂ ನವೆಂಬರ್ ನಲ್ಲಿ 17 ಪ್ರಕರಣ ಪತ್ತೆಯಾಗಿದೆ. ಇನ್ನು ಅತಿ ಹೆಚ್ಚೆಂದರೆ ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದೆ. ಕಳೆದ ಜನವರಿಯಿಂದ ಸುಮಾರು 55 ಪ್ರಕರಣ ಬ್ರೆಸ್ಟ್ ಕ್ಯಾನ್ಸರ್ ಎಂದು ಧೃಡಪಟ್ಟಿದ್ದು ಇದರೊಟ್ಟಿಗೆ ತಂಬಾಕು ಸೇವನೆ, ಇನ್ನಿತರ ಕಾರಣದಿಂದ ಕೆಲವರಿಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಕ್ಯಾನ್ಸರ್ ಸಂಖ್ಯೆ ಕಳೆದ ನಾಲ್ಕೈದು ವರ್ಷದಲ್ಲಿ ನೋಡಿದರೆ ಪ್ರತಿ ವರ್ಷ ಏರುತ್ತಲೇ ಇದ್ದು ಇದಕ್ಕೆ ಕಾರಣ ಏನೆಂಬುದು ಮಾತ್ರ ನಿಗೂಢವಾಗಿದೆ. ಇನ್ನು ಯಲ್ಲಾಪುರ, ಶಿರಸಿ, ಸಿದ್ದಾಪುರ, ಅಂಕೋಲಾದ ಅಚವೆ, ಅಗಸೂರು ಭಾಗದಲ್ಲಿ ಹಾಗೂ ಕಾರವಾರ ತಾಲೂಕಿನ ಕದ್ರಾ ಸುತ್ತಮುತ್ತಲಿನ ಭಾಗದಲ್ಲಿ ಕ್ಯಾನ್ಸರ್ ಸಂಖ್ಯೆ ಪತ್ತೆಯಾಗಿದ್ದು ಕಾರಣ ಏನೆಂಬುವ ಹುಡುಕಾಟದಲ್ಲಿದ್ದಾರೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.

ಸದ್ಯ ಇನ್ನೂ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಎರಡು ವರ್ಷಗಳ ನಂತರವೇ ಈ ಚಿಕಿತ್ಸೆ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಕ್ಯಾನ್ಸರ್ ಪತ್ತೆಯಾದವರು ಬೇರೆ ಜಿಲ್ಲೆಗಳಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದ್ದು ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವುದನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞರ ನೇಮಕ ಹಾಗೂ ಚಿಕಿತ್ಸೆಗೆ ವ್ಯವಸ್ಥೆಯನ್ನ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಈ ಹಿಂದೆ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಕ್ಯಾನ್ಸರ್ ಹರಡಲಿದೆ ಎನ್ನುವ ಸುದ್ದಿ ಹರಡಿತ್ತು. ಈ ಬಗ್ಗೆ ಮುಂಬೈನ ಟಾಟಾ ಕ್ಯಾನ್ಸರ್ ಇನ್ ಸ್ಟ್ಯೂಟ್ ನಿಂದ ಹಲವು ಗ್ರಾಮದಲ್ಲಿ ಜನರ ತಪಾಸಣೆಯನ್ನ ಸಹ ಮಾಡಲಾಗಿತ್ತು. ಆದರೆ ಈ ಬಗ್ಗೆ ಯಾವ ವರದಿಯೂ ಈ ವರೆಗೆ ಹೊರಬಿದ್ದಿಲ್ಲ. ಒಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಉತ್ತರ ಕನ್ನಡದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಇನ್ನಷ್ಟು ಆತಂಕವನ್ನ ಸೃಷ್ಟಿ ಮಾಡಿದ್ದು ಸರ್ಕಾರ ಶೀಘ್ರದಲ್ಲಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನ ಪ್ರಾರಂಭಿಸಿ ಜನರ ನೆರವಿಗೆ ಬರಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button