Info
Trending

ಕನ್ನಡ ಸಾಹಿತ್ಯ ದರ್ಶನದಲ್ಲಿ ಸನ್ಮಾನಗೊಂಡ ಮಂಜುನಾಥ ಬರ್ಗಿ

ಅಂಕೋಲಾ : ತಾಲ್ಲೂಕಿನ ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿ ಎರಡುವರೆ ಗಂಟೆಗಳ ಕಾಲ ಕನ್ನಡ ಸಾಹಿತ್ಯದ ಕುರಿತು ನಿರರ್ಗಳವಾಗಿ ಮನಮುಟ್ಟುವಂತೆ ಉಪನ್ಯಾಸಗೈದ ಹೆಸರಾಂತ ಯುವ ವಾಗ್ಮಿ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿಯವರಿಗೆ ಕನ್ನಡ ಶಾಲು ಹಾಗೂ ಮೈಸೂರು ಪೇಟವನ್ನು ತೊಡಿಸಿ ಹೃದಯಸ್ಪರ್ಷಿಯಾಗಿ ಸನ್ಮಾನಿಸಲಾಯಿತು. ಸನ್ಮಾನಗೈದ ಶ್ರೀರಾಮ ಸ್ಟಡಿ ಸರ್ಕಲ್‌ನ ನಿರ್ದೇಶಕ ಸೂರಜ್ ಅರವಿಂದ ಮಾತನ್ನಾಡಿ, ಮಂಜುನಾಥ ಬರ್ಗಿಯವರು ಕನ್ನಡ, ಸಂಸ್ಕೃತ, ಇತಿಹಾಸ, ಶಿಕ್ಷಣ ಹಾಗೂ ಪತ್ರಿಕೋದ್ಯಮ ಹೀಗೆ ಐದು ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿ, ಸಹಸ್ರಾರು ಉಪನ್ಯಾಸಗಳ ಮೂಲಕ, ಅಪರೂಪದ ಬೋಧನೆಯಿಂದ, ಸಮ್ಮೋಹಕ ಬರವಣಿಗೆಗಾಗಿ, ಯಕ್ಷಗಾನದ ಪ್ರಬುದ್ಧ ನಟರಾಗಿ, ಅಪ್ರತಿಮ ಸಂಘಟನೆ ಹಾಗೂ ಸೈದ್ಧಾಂತಿಕ ವ್ಯಕ್ತಿತ್ವದಿಂದ ನಾಡಿನ ಮಹೋನ್ನತ ವ್ಯಕ್ತಿತ್ವವಾಗಿ ಬೆಳಕುಗೊಂಡಿದ್ದು, ಅವರ ವಿದ್ವತ್ಪೂರ್ಣ ಹಾಗೂ ಕನ್ನಡಪರ ನಿಲುವಿಗೆ ಶರಣೆನ್ನಬೇಕೆಂದರು.

ಸ್ಪರ್ಧಾರ್ಥಿ – ಸೂರಜ್ ದೀಕ್ಷಿತ್ ಮಂಜುನಾಥ ಬರ್ಗಿ ಸರ್ ಯಾವುದೇ ಸಿದ್ಧಟಿಪ್ಪಣಿಯಿಲ್ಲದೇ ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡದ ವಿಷಯವನ್ನು ಎಲ್ಲಿಯೂ ನಿಲುಕೆಯಿಲ್ಲದೇ ಓತಪ್ರೇತವಾಗಿ ಲೀಲಾಜಾಲವಾಗಿ ಮಾತನ್ನಾಡುವಲ್ಲಿ ಅವರ ಸ್ಮರಣಶಕ್ತಿ, ಭಾಷಾಸಿದ್ಧಿ ಹಾಗೂ ನಿರೂಪಣಾ ಸಾಮರ್ಥ್ಯವು ಬೆರಗುಗೊಳಿಸುತ್ತಿದೆಯೆಂದರು. “ಕನ್ನಡ ಚಂದ್ರಮ”ದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿಯವರು ಮಾತನ್ನಾಡಿ, ಯಾವ ವಿಷಯದ ಕುರಿತಾದರೂ ಅಧಿಕಾರಯುತವಾಗಿ ಮಾತನ್ನಾಡುವ ಅಪರೂಪದ ವಿದ್ವಾಂಸರು ಮಂಜುನಾಥ ಬರ್ಗಿಯವರೆಂದರು. ಸನ್ಮಾನ ಪೂರ್ವದಲ್ಲಿ “ಕನ್ನಡ ಸಾಹಿತ್ಯ ದರ್ಶನ”ದ ಕುರಿತು ಉಪನ್ಯಾಸವನ್ನು ನೀಡಿದ ಮಂಜುನಾಥ ಬರ್ಗಿಯವರು, ಕವಿರಾಜಮಾರ್ಗಪೂರ್ವದಲ್ಲಿನ ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತಾದಿಗಳನ್ನೊಳಗೊಂಡು, ಪಂಪ, ಪೊನ್ನ, ರನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ದಿನಕರರ ಸಾಹಿತ್ಯದ ಪ್ರಧಾನ ರಸಘಟ್ಟಗಳನ್ನು ಯಾವುದೇ ಸಿದ್ಧಟಿಪ್ಪಣಿಯಿಲ್ಲದೇ ಸೊಗಸಾಗಿ ವಿವರಿಸಿದರು. ಶರಣ-ದಾಸ ಸಾಹಿತ್ಯದ ಕುರಿತಂತೂ ನೀಡಿದ ವಿವರಣೆಯು ಸಮ್ಮೋಹಕವಾಗಿತ್ತು. ಸ್ಪರ್ಧಾರ್ಥಿಗಳಾದ ಸುಕನ್ಯಾ, ಪ್ರೇಮಾ, ನಜ್ಮಾ, ಮಂಜುನಾಥ ನಾಯ್ಕ, ಭರತ ನಾಯ್ಕ, ಶರಣ್, ದರ್ಶನ್ ನಾಯ್ಕ ಮತ್ತಿತರರು ಉಪನ್ಯಾಸದ ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿದರು.

Back to top button