ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಜನರು ವ್ಯಾಕ್ಸಿನೇಷನ್ ಪಡೆದುಕೊಂಡಿದ್ದಾರೆ: ಈ ಕುರಿತ ವಿವರ ಇಲ್ಲಿದೆ?
ಕಾರವಾರ: ರಾಜ್ಯದಾದ್ಯಂತ ಕೋವಿಡ್ ಲಸಿಕೆ ಭರಪೂರ ಪೂರೈಕೆಯಾಗುತ್ತಿರುವ ಕಾರಣ ಉತ್ತರಕನ್ನಡ ಜಿಲ್ಲೆಯಾದ್ಯಂತ ವ್ಯಾಕ್ಸಿನೇಷನ್ ವೇಗ ಪಡೆದುಕೊಂಡಿದೆ. 10 ಲಕ್ಷದಷ್ಟು ಮಂದಿಯಲ್ಲಿ ಈಗಾಗಲೇ 7 ಲಕ್ಷ ಜನರು ಲಸಿಕೆಯನ್ನು ಪಡೆದುಕೊಂಡಿದ್ದು, ಶೇ. 71 ರಷ್ಟು ಪ್ರಗತಿಯಾಗಿದೆ. ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಇದೇ ರೀತಿ ಲಸಿಕೆಯು ಲಭ್ಯವಾದರೆ ಈ ವಾರದಲ್ಲಿಯೇ ಶೇ. 100ರಷ್ಟು ಮೊದಲ ಡೋಸ್ ಕೋವಿಡ್ ಲಸಿಕೆ ನೀಡಿದಂತಾಗುತ್ತದೆ ಎಂದು ತಿಳಿಸಿದೆ.
ಕೋವಿಡ್ ಮೂರನೇ ಅಲೆಯ ನಡುವೆಯೂ ಕೂಡಾ ಎಲ್ಲರಿಗೂ ಲಸಿಕೆಯನ್ನು ನೀಡುವುದೇ ಸರ್ಕಾರದ ಗುರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕೋವಿಡ್ ಲಸಿಕೆಯ ಅಭಿಯಾನ ಶುರುವಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಲಭ್ಯವಾಗುತ್ತಿರುವ ಲಸಿಕೆಯಿಂದಾಗಿ ಎಲ್ಲೆಡೆ ಜನರು ಉತ್ಸಾಹದಿಂದಲೇ ಲಸಿಕೆ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.
ಇದುವರೆಗಿನ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಜನರಿಗೆ ಇನ್ನು ಮೊದಲ ಡೋಸ್ ಕೋವಿಡ್ ಲಸಿಕೆ ನೀಡುವುದು ಬಾಕಿ ಇದೆ. ಎರಡನೆಯ ಡೋಸ್ ಲಸಿಕೆಯನ್ನು ಈಗಾಗಲೇ ಸುಮಾರು ಎರಡು ಕಾಲು ಲಕ್ಷ ಜನ ಪಡೆದುಕೊಂಡಿದ್ದು, ಇದರಲ್ಲಿ ಶೇ. 31 ರಷ್ಟು ಪ್ರಗತಿಯಾಗಿದೆ.
ಬ್ಯುರೋ ರಿಪೋರ್ಟ್ ವಿಸ್ಮಯ ನ್ಯೂಸ್