ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಾತ್ವಿಕ ಒಪ್ಪಿಗೆ: ಆರೋಗ್ಯ ಸಚಿವ ಸುಧಾಕರ್ ನೇತೃತ್ವದ ಮಹತ್ವದ ಸಭೆಯಲ್ಲಿ ನಿರ್ಧಾರ
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದೇನು ನೋಡಿ?
ಕಾರವಾರ: ಉತ್ತರಕನ್ನಡ ಜಿಲ್ಲೆಯ ಜನರ ಒತ್ತಡಕ್ಕೆ ಸರ್ಕಾರ ಕೊನೆಗೂ ಮಣಿದಿದ್ದು, ಬಹುದಿನದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಜಿಲ್ಲೆಯ ಹೃದಯಭಾಗದಲ್ಲಿ ಮಾಡಲು ಆರೋಗ್ಯಸಚಿವರು, ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರ ಮನೆಯಲ್ಲಿ ಇಂದು ಈ ಕುರಿತು ಮಹತ್ವದ ಸಭೆ ನಡೆದಿದ್ದು, ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಈ ಮಾಹಿತಿ ನೀಡಿದರು.
ಅಧಿವೇಶನದ ನಂತರ ಸಿಎಂ ಉತ್ತರಕನ್ನಡ ಜಿಲ್ಲಾ ಪ್ರವಾಸ ಮಾಡಲಿದ್ದು, ಈ ವೇಳೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಜಾಗವನ್ನು ಪರಿಶೀಲನೆ ಮಾಡಲಿದ್ದಾರೆ ಎಂದರು. ಅಲ್ಲದೆ, ಕಾರವಾರದ ಮೆಡಿಕಲ್ ಕಾಲೇಜ ಉನ್ನತ ದರ್ಜೆಗೆ ಏರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಣ ಸಚಿವ ಡಾ.ಸುಧಾಕರ ಸಮ್ಮತಿಸಿದ್ದಾರೆ.
ಇಲ್ಲಿ ಎಂಆರ್ಐ ಯಂತ್ರ ಸೇರಿದಂತೆ ಎಲ್ಲ ಸೌಲಭ್ಯ, ಕ್ಯಾನ್ಸರ್ ವಿಭಾಗ, ನ್ಯೂರೋ ವಿಭಾಗ ಮತ್ತಿತರ ತುರ್ತು ಚಿಕಿತ್ಸೆಗೆ ವ್ಯವಸ್ಥೆ, ಅಗತ್ಯ ತಜ್ಞ ವೈದ್ಯರು, ಅಗತ್ಯ ಉಪಕರಣ ಒದಗಿಸುವುದಾಗಿ ಭರವಸೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅಧಿಕಾರಿಗಳ ತಂಡದೊoದಿಗೆ ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿ ಘೋಷಣೆ ಮಾಡಲಿದ್ದಾರೆ ಎಂದು ಸ್ಪಷ್ಪಪಡಿಸಿದ್ದಾರೆ,
ಖಾಸಗಿಯವರ ಸಹಭಾಗಿತ್ವದಲ್ಲಿ ನಿರ್ಮಾಣ ?
ಈಗಾಗಲೇ ಕುಮಟಾದಲ್ಲಿ ಸ್ಥಳವನ್ನು ನಿಗದಿ ಮಾಡಲಾಗಿದ್ದು, ತಾವುಗಳು ನೀಡಿದ ಸಲಹೆಯಂತೆ ಖಾಸಗಿಯವರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು. ಅಧಿವೇಶನ ಮುಗಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,