
ಹೊನ್ನಾವರ: ಪಟ್ಟಣದ ಬಜಾರ್ ರಸ್ತೆಯ ಸರ್ಕಾರಿ ಶಾಲೆ ಸಮೀಪ ಹಲವು ವರ್ಷಗಳಿಂದ ಸಾರ್ವಜನಿಕರು ಮನಬಂದoತೆ ಕಸ ಸುರಿಯುತ್ತಿದ್ದ ಸ್ಥಳಕ್ಕೆ ಹೊನ್ನಾವರ ಪಟ್ಟಣ ಪಂಚಾಯತ್ ಕೊನೆಗೂ ಶಾಶ್ವತ ಪರಿಹಾರ ಕಂಡುಕೊoಡಿದೆ. ಕಸದ ರಾಶಿಯಿಂದ ತುಂಬಿದ್ದ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ವಿವಿಧ ಗಿಡಗಳನ್ನು ನೆಟ್ಟು ಹಸಿರು ತಾಣವನ್ನಾಗಿ ರೂಪಿಸಲಾಗಿದೆ.
ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ
ಈ ಸ್ಥಳದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಕಸ ಸುರಿಯುತ್ತಿದ್ದ ಪರಿಣಾಮ, ಪೌರಕಾರ್ಮಿಕರು ಸ್ವಚ್ಛಗೊಳಿಸಿದ ಕೆಲವೇ ಗಂಟೆಗಳಲ್ಲಿ ಮತ್ತೆ ಕಸ ಸಂಗ್ರಹವಾಗುತ್ತಿತ್ತು. ಪಕ್ಕದಲ್ಲೇ ಸರ್ಕಾರಿ ಶಾಲೆ ಇದ್ದರೂ ನಿರ್ಲಕ್ಷ್ಯವಾಗಿ ಕಸ ಎಸೆಯಲಾಗುತ್ತಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿತ್ತು. ಪಟ್ಟಣ ಪಂಚಾಯತ್ ವತಿಯಿಂದ ಪ್ರತಿದಿನ ಮನೆಮನೆಗೆ ಕಸ ಸಂಗ್ರಹ ವಾಹನ ಸಂಚರಿಸುತ್ತಿದ್ದರೂ, ಕೆಲವರು ವಾಹನಕ್ಕೆ ಕಸ ನೀಡದೆ ಇದೇ ಸ್ಥಳದಲ್ಲಿ ಸುರಿಯುತ್ತಿದ್ದರು. ಈ ಬಗ್ಗೆ ಹಲವಾರು ಬಾರಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಏಸು ಬೆಂಗಳೂರು ಅವರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಪಟ್ಟಣ ಪಂಚಾಯತ್ ಪ್ರಭಾರಿ ಕಿರಿಯ ಆರೋಗ್ಯ ನಿರೀಕ್ಷಕಿ, ಕಮ್ಯೂನಿಟಿ ಮೊಬಿಲೈಸರ್, ವಿವಿಧ ಸಂಘ-ಸಂಸ್ಥೆಗಳು ಹಾಗೂ ಪೌರಕಾರ್ಮಿಕರ ಸಹಕಾರದೊಂದಿಗೆ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು.
ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೋಡೆಗಳಿಗೆ ಬಣ್ಣ ಹಚ್ಚಿ ಘನತ್ಯಾಜ್ಯ ನಿರ್ವಹಣೆ ಕುರಿತು ಆಕರ್ಷಕ ಚಿತ್ರಗಳನ್ನು ಬಿಡಿಸಲಾಯಿತು. ಅಲ್ಲದೆ, ಮುಂದಿನ ದಿನಗಳಲ್ಲಿ ಯಾರೂ ಕಸ ಸುರಿಯದಂತೆ ವಿವಿಧ ಸಸಿಗಳನ್ನು ನೆಟ್ಟು, ಸುತ್ತಲೂ ರಕ್ಷಣಾತ್ಮಕ ಬೇಲಿ ಅಳವಡಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣ ಪಂಚಾಯತ್ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳು ಜಂಟಿಯಾಗಿ ಕೈಗೊಂಡಿರುವ ಈ ಪರಿಸರ ಸ್ನೇಹಿ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಸದ ತಾಣವನ್ನು ಹಸಿರು ತಾಣವನ್ನಾಗಿ ಪರಿವರ್ತಿಸಿದ ಪಟ್ಟಣ ಪಂಚಾಯತ್ನ ಕಾರ್ಯವೈಖರಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ವಿಸ್ಮಯ ನ್ಯೂಸ್ , ವಿವೇಕ್ ಶೇಟ್ , ಹೊನ್ನಾವರ










