
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿದ್ದ’ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎನ್ನಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಸುಮಾರು 11 ಕೋಟಿ ರುಪಾಯಿ ವೆಚ್ಚದಲ್ಲಿ ಈ ಅತ್ಯಾಧುನಿಕ ಯಂತ್ರವನ್ನು ಖರೀದಿಸಿ ಕ್ರಿಮ್ಸ್ ಗೆ ಒದಗಿಸಿದ್ದು ಈ ಯಂತ್ರ ಸುರಕ್ಷಿತವಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಯನ್ನು ತಲುಪಿದೆ. ಈ ಬೃಹತ್ ಯಂತ್ರವನ್ನು ವಿಶೇಷ ಪ್ಲಾಟ್ ಫಾಮ್ ನಿರ್ಮಿಸಿ ಕಟ್ಟಡದ ಗೋಡೆಯ ಭಾಗವನ್ನು ತೆರವುಗೊಳಿಸಿ ಸುರಕ್ಷಿತವಾಗಿ ಒಳಗೆ ಕೊಂಡೊಯ್ಯಲಾಗಿದೆ. ಈ ತಿಂಗಳ ಕೊನೆಯ ಅವಧಿಯಲ್ಲಿ ಈ ಯಂತ್ರವು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದ್ದು, ತಂತ್ರಜ್ಞರ ನೇಮಕಾತಿ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ .
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಐ ಸೌಲಭ್ಯ ಇಲ್ಲದೇ ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಯಂತ್ರದ ಅಳವಡಿಕೆಯಿಂದ ಸಕಾಲದಲ್ಲಿ ನಿಖರ ಚಿಕಿತ್ಸೆ ದೊರಕಲಿದೆ. ಅಪಘಾತಗಳು, ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವ ಹಾಗೂ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ತುರ್ತಾಗಿ ಎಂಆರ್‌ಐ ಮಾಡಬೇಕಾಗುತ್ತದೆ. ಇನ್ಮುಂದೆ ಕಾರವಾರದಲ್ಲೇ ಇದು ಲಭ್ಯವಿರುವುದರಿಂದ ರೋಗಿಯ ಪ್ರಾಣ ಉಳಿಸಲು ಸಹಕಾರಿಯಾಗಲಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾö್ಯನಿಂಗ್ ಗೆ ಸಾವಿರಾರುರೂಪಾಯಿಗಳು ವೆಚ್ಚವಾಗುತ್ತದೆ. ಆದರೆ ಕ್ರಿಮ್ಸ್ ನಲ್ಲಿ ಅತೀ ಕಡಿಮೆ ದರ ಇಲ್ಲವೇ ಉಚಿತವಾಗಿ ದೊರೆಯುವುದರಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಎಂಆರ್‌ಐ ಸ್ಕಾö್ಯನಿಂಗ್ ಗೆ ಹೊರಜಿಲ್ಲೆಗಳಿಗೆ ತೆರಳುವ ಪರಿಸ್ಥಿತಿ ಇರುವುದರಿಂದ ಹಣದ ಜೊತೆಗೆ ಸಮಯದ ಉಲಿತಾಯವೂ ಆಗಲಿದೆ ಎನ್ನಲಾಗಿದೆ.
ಬ್ಯುರೋ ರಿಪೋರ್ಟ್ ವಿಸ್ಮಯ ನ್ಯೂಸ್










