Focus News
Trending

ಜಪಾನ್ ಪ್ರವಾಸ ಮುಗಿಸಿದ ಬಂದ ಸರ್ಕಾರಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ

ಕುಮಟಾ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬ ಜಪಾನ್ ಸರ್ಕಾರದ ವಿಶೇಷ ಆಹ್ವಾನ ಮೇರೆಗೆ ಜಪಾನ್‌ಗೆ ಭೇಟಿ ನೀಡಿ ಬಂದಿರುವುದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ವಿಷಯವಾಗಿದೆ.

ಶಾಲಾ ದಿನಗಳಿಂದಲೇ ಪ್ರತಿಭಾವಂತರಾಗಿದ್ದ ಆಕಾಶ್, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅವರ ಪ್ರತಿಭೆಯನ್ನು ಗುರುತಿಸಿದ ಜಪಾನ್ ಸರ್ಕಾರ, ವಿಶ್ವದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸುವ ಪ್ರತಿಷ್ಠಿತ ಸಕುರಾ ಸೈನ್ಸ್ ಎಕ್ಸ್‌ಚೇಂಜ್ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿತ್ತು.

ಮೇ 23ರಿಂದ 30ರವರೆಗೆ ನಡೆದ ಈ ವಿಶೇಷ ಶೈಕ್ಷಣಿಕ ಪ್ರವಾಸದಲ್ಲಿ ಕರ್ನಾಟಕದಿಂದ ಕೇವಲ ನಾಲ್ವರು ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದರು. ಅವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಹಿನ್ನೆಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಆಕಾಶ್ ಹರಿಕಂತ್ರ ಕೂಡ ಒಬ್ಬರಾಗಿರುವುದು ವಿಶೇಷ.

ಜಪಾನ್ ಪ್ರವಾಸದ ವೇಳೆ ಆಕಾಶ್ ಅಲ್ಲಿನ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆಗಳಿಗೆ ಭೇಟಿ ನೀಡಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ನೇರವಾಗಿ ತಿಳಿದುಕೊಳ್ಳುವ ಅವಕಾಶ ಅವರಿಗೆ ದೊರಕಿತು.

ಈ ಸಂಪೂರ್ಣ ಪ್ರವಾಸದ ವೆಚ್ಚ, ವೀಸಾ ವ್ಯವಸ್ಥೆ, ವಸತಿ ಹಾಗೂ ಮಾರ್ಗದರ್ಶನದ ಜವಾಬ್ದಾರಿಯನ್ನು ಜಪಾನ್ ಸರ್ಕಾರವೇ ವಹಿಸಿಕೊಂಡಿತ್ತು.

ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ಪ್ರತಿಭೆಯ ಮೂಲಕ ಜಪಾನ್ ಸರ್ಕಾರದ ಆಹ್ವಾನ ಪಡೆದು ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಂಡಿರುವುದು ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ಅವಕಾಶ ಸಿಕ್ಕರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಆಕಾಶ್ ಹರಿಕಂತ್ರ ಜೀವಂತ ಉದಾಹರಣೆಯಾಗಿದ್ದಾರೆ.

ಆಕಾಶ್ ಹರಿಕಂತ್ರ ಅವರು ಪ್ರಾಥಮಿಕ ಶಿಕ್ಷಣವನ್ನು ಕೊಡ್ಕಣಿ ಸರ್ಕಾರಿ ಶಾಲೆಯಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ಬರ್ಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Back to top button