Uttara Kannada
Trending

ಸ್ವಚ್ಛ, ಸುಂದರ ಅಂಕೋಲಾ ನಮ್ಮ ಕನಸು

ಅಂಕೋಲಾ: ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಅಧಿಸೂಚನೆಯಂತೆ ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎಂಬ ಧ್ಯೇಯವಾಖ್ಯದೊಂದಿಗೆ ಅಂಕೋಲಾ ಪುರಸಭೆ ಕಾರ್ಯಾಲಯದಿಂದ ವಿವಿಧ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಚಾತಾಹಿ ಸೇವಾ ಕಾರ್ಯಕ್ರಮದಲ್ಲಿ ಸ್ವಚ್ಛ ಸುಂದರ ಅಂಕೋಲಾ ನಮ್ಮ ಕನಸು ಎಂಬ ಪರಿಕಲ್ಪನೆಯಲ್ಲಿ ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ ಎಂಬಂತೆ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಮತ್ತು ಸಿಬ್ಬಂದಿಗಳು ನಾನಾ ಯೋಜನೆ ರೂಪಿಸುತ್ತಿದ್ದಾರೆ. ಪಟ್ಟಣದಾದ್ಯಂತ ನಾನಾ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಸುಂದರ ಬಿತ್ತಿ ಪತ್ರ ಮತ್ತು ಗೋಡೆಗಳ ಮೇಲೆ ಮೂಡಿಸುವ ಚಿತ್ರಗಳ ಮೂಲಕ ಜನರ ಗಮನ ಸೆಳೆಯಲು ಪ್ರಯೋಗ ಮುಂದುವರೆಸಿರುವ ಪುರಸಭೆ, ಪಿ.ಎಂ.ಪ್ರೌಢ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಇಂದಿರಾ ಕ್ಯಾಂಟೀನ್, ಬಸ್ ನಿಲ್ದಾಣ ಪಕ್ಕದ ಪುರಸಭೆ ಸಮೂದಾಯಭವನದ ಎದುರುಗಡೆಯ ಕಂಪೌಂಡ ಗೋಡೆಯ ಮೇಲೆ ಸ್ವಚ್ಛತೆ, ಪರಿಸರ, ಆರೋಗ್ಯ ಸಂಬಂಧಿ ಚಿತ್ರಗಳನ್ನು ಮತ್ತು ಗೋಡೆ ಬರಹಗಳನ್ನು ಬರೆಸಿ ಸಂದೇಶ ನೀಡುತ್ತಿದೆ.
ತಹಶೀಲ್ದಾರ ಕಾರ್ಯಾಲಯ ಎದುರುಗಡೆ ಮತ್ತು ಜೈಹಿಂದ್ ಮೈದಾನದಲ್ಲಿ ಜಿಲ್ಲೆಯಲ್ಲಿಯೇ ಉತ್ತಮ ಎನ್ನಬಹುದಾದ ರೀತಿಯಲ್ಲಿ ಬೃಹತ್ ಜಾಗೃತಿ ಫಲಕಗಳನ್ನು ಅಳವಡಿಸಿ ಗಮನ ಸೆಳೆಯುತ್ತಿದೆ. ಕಸವನ್ನು ಮೂಲದಲ್ಲಿಯೇ ವಿಂಗಡಸಿ ಪುರಸಭೆ ಕಸ ಸಂಗ್ರಹಣ ವಾಹನಕ್ಕೆ ನೀಡುವಂತೆ ಕೇಳಿಕೊಳ್ಳುವುದರಿಂದ ಹಿಡಿದು ಜೀವ ಜಲರಕ್ಷಿಸಿ ಗಿಡ ಮರ ಬೆಳಸಿ, ಪ್ಲಾಸ್ಟಿಕ್ ತ್ಯಾಜೀಸಿ ಪರಿಸರ ಉಳಿಸಿ, ಧೂಮ ಪಾನದ ದುಷ್ಪರಿಣಾಮ, ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಬೇಡಿ ಎಂಬ ಹತ್ತಾರು ಉತ್ತಮ ಸಂದೇಶ ನೀಡಲಾಗಿದೆ.
ಮಾಸ್ಕ ಧರಿಸಿದ ವಿದ್ಯಾರ್ಥಿಗಳು, ಕೊರೊನಾ ತಡೆಗೆ ಮುಂದಾದ ವೈದ್ಯ ಮತ್ತು ಕೊರೊನಾದ ಭೀಕರತೆಯನ್ನು ಸಾರುವ ಚಿತ್ರ ಗಮನಸೆಳೆಯುತ್ತಿದೆ. ಅಂಬಾರಕೊಡ್ಲದ ಹೆಸರಾಂತ ಕಲಾಕಾರ ಅಶೋಕ ಬಿ. ಗೌಡ ಮತ್ತು ಸಂಗಡಿಗ ರಮೇಶ ಗೌಡ, ತಮ್ಮ ಕುಂಚದ ಕಲೆಯ ಮೂಲಕ ಜಾಗೃತಿ ಸಂದೇಶ ಮೂಡಿಬರಲು ಶ್ರಮಿಸಿದ್ದಾರೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button