ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸುವವರು ಮಾಸ್ಕ ಧರಿಸುವುದು, ಸೆನಿಟೈಜರ್ ಬಳಸುವುದು, ಸಾಮಾಜಿಕ ಅಂತರ ನಿಯಮ ಪಾಲಿಸಬೇಕು.
ಅಂಕೋಲಾ: ಲಾಕ್‌ಡೌನ್ ಅವಧಿಯಲ್ಲಿ ಬಂದ್ ಆಗಿದ್ದ ನ್ಯಾಯಾಲಯದ ಕಲಾಪಗಳು ಜೂನ್ 1ರ ಸೋಮವಾರದಿಂದ ಪುನರ್ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಭಾನುವಾರ ಪುರಸಭೆ ಮತ್ತು ಅಗ್ನಿ ಶಾಮಕ ದಳದ ನೈರ್ಮಲ್ಯ ಜಾಗೃತಿ ತಂಡದವರು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯದ ಆವರಣವನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಶುಚಿಗೊಳಿಸಿದರು.
ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿಯವರು ವಿವಿಧ ಹಂತಗಳಲ್ಲಿ ಲಾಕ್ ಡೌನ್ ಘೋಷಿಸಿದ್ದರು. ಈ ವೇಳೆಯಲ್ಲಿ ನ್ಯಾಯಾಲಯದಲ್ಲಿ ಕಲಾಪಗಳು ಸಹ ಬಂದ್ ಆಗಿತ್ತು. ಲಾಕ್ ಡೌನ್ 5ನೇ ಹಂತದಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದಂತೆ ಕಂಡು ಬರುತ್ತಿದೆ. ಲಾಕ್‌ಡೌನ್ ತೆರವಿನ ನಂತರ ನ್ಯಾಯಾಲಯ ವ್ಯವಸ್ಥೆ ತೆರೆದುಕೊಳ್ಳಲಿದೆಯಾದರೂ ಪ್ರತಿ ದಿನ ನಿಗದಿತ ಕೆಲವೇ ಪ್ರಕರಣಗಳ ವಿಚಾರಣೆ ನಡೆಯಲಿದೆ ಎನ್ನಲಾ ಗಿದೆ. ಇದೇ ವೇಳೆ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸುವವರು ಮಾಸ್ಕ ಧರಿಸುವುದು, ಸೆನಿಟೈಜರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡಬೇಕಿದೆ.
ಈ ಹಿಂದೆ ಪಟ್ಟಣದ ವಿವಿಧ ಮುಖ್ಯರಸ್ತೆಯಂಚಿನಲ್ಲಿ ಸೋಡಿಯಂ ಹೈಪೋ ದ್ರಾವಣವನ್ನು ಸಿಂಪಡಿಸಿ, ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತೆ ವಹಿಸಿದ್ದ ನೈರ್ಮಲ್ಯ ಜಾಗೃತಿ ತಂಡದವರು, ಕ್ವಾರಂಟೈ ನ್ ಕೇಂದ್ರಗಳಾಗಿ ಪರಿವರ್ತಿತವಾಗಿರುವ ಪಟ್ಟಣದ ಬಿಸಿಎಂ ಹಾಸ್ಟೇಲ್, ನಾಡವರ ಸಮುದಾಯಭವನ ಮತ್ತು ಕೇಣಿಯ ಹಾಸ್ಟೇಲ್ ಸುತ್ತ-ಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಮಾರ್ಗದರ್ಶನದಲ್ಲಿ ವಿಷ್ಣು ಗೌಡ, ಉಮಕಾಂತ ನಾಯ್ಕ ಮತ್ತು ಪೌರಕಾರ್ಮಿಕರು ಹಾಗೂ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಜಯಾನಂದ ಪಟಗಾರ, ಸಿಬ್ಬಂದಿಗಳಾದ ಗಜಾನನ ನಾಯ್ಕ, ತಿಪ್ಪಣ್ಣ ನಾಯಕ, ಗಣೇಶ ನಾಯ್ಕ, ರವಿರಾಜ್ ಭೂತೆ, ವಿಘ್ನೇಶ್ವರ ನಾಯ್ಕ, ಚಂದ್ರಹಾಸ ಗೌಡ, ಅಮಿತ ನಾಯ್ಕ ಮತ್ತಿತರರು ಕಾರ್ಯನಿರ್ವಹಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ