ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಮೇಲ್ ಸೇತುವೆ ಬೇಕೆನ್ನುವ ಹೋರಾಟಕ್ಕೆ ಜನ-ಪ್ರತಿನಿಧಿಗಳಿಂದ ಹಸಿರು ನಿಶಾನೆ
ಹೊನ್ನಾವರ : ಸತತ 5 ವರ್ಷಗಳಿಂದ ತಾಲೂಕಿನಲ್ಲಿ ಹಾದು ಹೋಗುತ್ತಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಮೇಲ್ ಸೇತುವೆ ಬೇಕೆನ್ನುವ ಹೋರಾಟಕ್ಕೆ ಜನ-ಪ್ರತಿನಿಧಿಗಳಿಂದ ಹಸಿರು ನಿಶಾನೆ ದೊರೆತಿದ್ದು ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ದಿನಕರ ಶೆಟ್ಟಿ, ಹಾಗೂ ಶಾಸಕರಾದ ಸುನೀಲ್ ನಾಯ್ಕರವರಿಗೆ ಸಮಿತಿಯು ಅಭಿನಂದಿಸುವುದಾಗಿ ಹೆದ್ದಾರಿ ಮೇಲ್ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಎಮ್.ಎನ್.ಸುಬ್ರಹ್ಮಣ್ಯ, ಸಂಚಾಲಕ ಲೋಕೇಶ ಮೆಸ್ತ, ಕಾರ್ಯದರ್ಶಿ ರಘು ಪೈ, ಪದಾಧೀಕಾರಿಗಳಾದ ಸಂಜು ಶೇಟ್, ಮಹೇಶ ಮೆಸ್ತ. ಹಾಗೂ ಪ.ಪಂ. ಅಧ್ಯಕ್ಷ ಶಿವರಾಜ ಮೆಸ್ತ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಜನ ಮತ್ತು ವಾಹನಗಳ ಸುಗಮ ಸಂಚಾರಕ್ಕೆ, ಪ್ರವಾಸಿಗರಿಗೆ, ರಸ್ತೆ ಪ್ರಯಾಣಿಕರಿಗೆ ತೊಂದರೆ ಆಗದ ರೀತಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ, ವೈಜ್ಞಾನಿಕವಾಗಿ ಮೇಲ್ ಸೇತುವೆ ರಚಿಸಲು ಒತ್ತಾಯಿಸಿ ಕಳೆದ 5 ವರ್ಷಗಳಿಂದ ವಿವಿಧ ಸಂಘಟನೆಗಳ ಬೆಂಬಲದೊ0ದಿಗೆ ಸಮಿತಿಯನ್ನು ರಚಿಸಿ ಹೋರಾಟವನ್ನು ನಡೆಸಿ ಮೇಲ್ ಸೇತುವೆಗೆೆ ಹಕ್ಕೊತ್ತಾಯಿಸಿ ಸಮಿತಿಯು ಸರ್ಕಾರಕ್ಕೆ ಸಾರ್ವಜನಿಕರಿಂದ ಹಾಗೂ ವಿಧ್ಯಾರ್ಥಿಗಳಿಂದ ಮೆರವಣಿಗೆ ನಡೆಸಿ ಮನವಿ ನೀಡಿತ್ತು. ಹೋರಾಟಗಾರರ ಬೇಡಿಕೆಗಳಿಗೆ ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ್ ನಾಯ್ಕ ಸ್ಪಂದಿಸಿ ಸಂಸದ ಅನಂತಕುಮಾರ ಹೆಗಡೆಯವರ ಗಮನಕ್ಕೂ ತಂದಿದ್ದರು.
ಈ ಹಿಂದೆ ಸಂಸದರು ಸ್ವತಃ ರಾಜ್ಯ ಕಂದಾಯ ಮಂತ್ರಿಗಳ ಜೊತೆಗೆ ಹಾಗೂ ಹೆದ್ದಾರಿ ಗುತ್ತಿಗೆ ಕಂಪನಿ ಹಾಗೂ ಹೆದ್ದಾರಿ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಯ ಕುರಿತು ಮಾಹಿತಿ ಪಡೆದಿದ್ದರು. ಕೋರೊನಾ ಸಮಯದಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಪುನಃ ಹೆದ್ದಾರಿ ಗುತ್ತಿಗೆದಾರರು ಕಾಮಗಾರಿಗೆ ಮುಂದಾದಾಗ ಸಮಿತಿಯ ಸದಸ್ಯರು ಸೋಮವಾರ ಕಾರವಾಕ್ಕೆ ಆಗಮಿಸಿದ ಸಂಸದರಿಗೆ ಮಾಹಿತಿ ನೀಡಿ ಹೆದ್ದಾರಿ ಮೇಲ್ ಸೇತುವೆಗಾಗಿ ಒತ್ತಾಯಿಸಿದ್ದರಿಂದ ಸಂಸದರು ನವೆಂಬರ್ 20 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಮುಖ್ಯ ಮಂತ್ರಿಗಳ ಸಭೆಯಲ್ಲಿ ಹೆದ್ದಾರಿ ಮೇಲ್ ಸೇತುವೆಗಾಗಿ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದು ಸಮಿತಿಯ ಹೋರಾಟಕ್ಕೆ ಸಿಕ್ಕ ನೈತಿಕ ಜಯವಾಗಿದೆ. ಜನರ ಜೀವ, ಆಸ್ತಿ-ಪಾಸ್ತಿ ರಕ್ಷಣೆಗೆ ಆಸಕ್ತಿ ತಾಳಿ ಹೆದ್ದಾರಿ ಮೇಲ್‌ಸೇತುವೆ ನಿರ್ಮಾಣಕ್ಕೆ ಕ್ರಮ ಜರುಗಿಸಲು ಮುಂದಾಗಿರುವ ಸಂಸದ ಅನಂತ ಕುಮಾರ ಹೆಗಡೆ ಹಾಗೂ ದಿನಕರ ಶೆಟ್ಟಿ ಮತ್ತು ಸುನೀಲ ನಾಯ್ಕರವರನ್ನು ಸಮಿತಿಯು ಅಭಿನಂದಿಸುತ್ತದೆ. ಅನಂತ ಕುಮಾರ ಹೆಗಡೆಯವರ ಪ್ರಯತ್ನದಿಂದ ಹೆಮ್ಮೆಯ ಪ್ರಧಾನಿ ಮೋದಿಯವರ ಕನಸು ತಾಲೂಕಿನಲ್ಲಿ ಈ ಮೂಲಕ ನನಸಾಗಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದರು.