ಅಪೂರ್ಣವಾಗಿದ್ದ ಸೇತುವೆ ಹಾಗೂ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕಿ | ಖಾಸಗಿ ಭೂ ಮಾಲಿಕರೊಂದಿಗೂ ಚರ್ಚೆ: ತ್ರಿಮೂರ್ತಿಗಳ ನುಡಿಯಿಂದ ಜನತೆಯಲ್ಲಿ ಮೂಡಿದ ಹೊಸ ಭರವಸೆ

ಅಂಕೋಲಾ : ತಾಲೂಕಿನ ಅವರ್ಸಾ ಮುಡೆಕಟ್ಟಾ ದಂಡೆಬಾಗವರೆಗಿನ ಬಹುಕೋಟಿ ವೆಚ್ಚದ ರಸ್ತೆ ಮತ್ತು ಸೇತುವೆ ಕಾಮಗಾರಿ ಯೋಜನೆ ಪೂರ್ಣಗೊಳ್ಳದೆ,ನಿಷ್ಪ್ರಯೋಜಕವಾಗಿತ್ತು . ಈ ಕುರಿತು ಸ್ಥಳೀಯರು ಮಾಧ್ಯಮದವರ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಾಹಕ ಇಂಜಿನೀಯರ ಯೋಜನಾ ವಿಭಾಗ ಕಾರವಾರದ ಯೋಜನಾ ಅನುಷ್ಠಾನ ಘಟಕದಲ್ಲಿ ಈ ಕಾಮಗಾರಿ ನಡೆದಿತ್ತು.

ಉತ್ತರಕ್ಕೆ ದಂಡೆಬಾಗವರೆಗಿನ ರಸ್ತೆ ಮತ್ತು ಸೇತುವೆ ಬಹುತೇಕ ಪೂರ್ಣಗೊಂಡಿದೆ ಆದರೆ ಸೇತುವೆಯ ದಕ್ಷಿಣ ದಿಕ್ಕಿಗಿರುವ ಬೆಲೇಕೇರಿ ವ್ಯಾಪ್ತಿಯ ಬೊಗ್ರಿಗದ್ದೆಯಿಂದ ಸೇತುವೆಗೆ ಸಂಪರ್ಕ ರಸ್ತೆಯೇ ಇಲ್ಲವಾಗಿದೆ. ಶಿವಾ ನಾಯ್ಕ ನೇತೃತ್ವದ ಸ್ಥಳೀಯರ ಬೇಡಿಕೆಗಳ ಕುರಿತು ಬೆಳಕು ಚೆಲ್ಲಿ,ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ವಿಸ್ಮಯ ವಾಹಿನಿಯೂ ವಿಸ್ತ್ರತ ವರದಿ ಪ್ರಸಾರ ಮಾಡಿತ್ತು.
ಸೇತುವೆ ಮೇಲೆ ನಿಂತು ರಸ್ತೆ ಸಂಪರ್ಕಕ್ಕೆ ಅತ್ಯವಶ್ಯವಾಗಿ ಬೇಕಿರುವ ಖಾಸಗಿ ಜಮೀನಿನ ಸ್ಥಳ ಪರಿಶೀಲಿಸಿದ ಶಾಸಕಿ ರೂಪಾಲಿ ನಾಯ್ಕ ಪಿ.ಎಮ್.ಜಿ.ಎಸ್.ವೈ ಇಲಾಖೆಯ ಎಂಜಿನೀಯರನ್ನು ತೀವ್ರ ತರಾಟೆಗೆ ತೆಗೆದುಕೊಂಡು,

ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ 9.44 ಕೋಟಿ.ರೂ. ಹಣವನ್ನು ವ್ಯಯಿಸಲಾಗುತ್ತಿದೆ. ಆದರೆ ಸೇತುವೆಯ ಒಂದು ತುದಿಯಲ್ಲಿ ರಸ್ತೆಗಾಗಿ ಜಮೀನು ಪಡೆಯದೆ ಇಷ್ಟೊಂದು ಹಣ ಹಾಕಿ ಕಾಮಗಾರಿ ಹೇಗೆ ಮಾಡಿದಿರಿ? ಯಾಕೆ ಮಾಡಿದಿರಿ ಎಂದು ಖಾರವಾಗಿಯೇ ಪ್ರಶ್ನಿಸಿ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ರಸ್ತೆಯನ್ನು ನಿರ್ಮಿಸಿ ಕೊಡಿ ಎಂದು ತಾಕೀತು ಮಾಡಿದರು.

ಸೇತುವೆ ಕಾಮಗಾರಿ ಮುಗಿದು ಎರಡು ವರ್ಷವಾದರೂ ಸಂಪರ್ಕ ಸೇತುವೆ ನಿರ್ಮಿಸದೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಇಲಾಖೆಯವರಿಗೆ ಕೇಳಿದರೆ ಖಾಸಗಿಯವರ ಜಾಗದ ಸಮಸ್ಯೆ ಎನ್ನುತ್ತಾರೆ, ಹಳ್ಳ ದಾಟಲು ನಮಗೆ ಈ ಹಿಂದೆ ಇದ್ದ ದೋಣಿ ವ್ಯವಸ್ಥೆಯೂ ಇಲ್ಲವಾಗಿದ್ದು, ಸೇತುವೆ ಮೇಲೆ ಹೋಗೋಣವೆಂದರೆ ಸೇತುವೆಗೆ ಕೂಡು ರಸ್ತೆಯಿಲ್ಲದೇ ನಾವೆಲ್ಲರೂ ಪರದಾಡುವಂತಾಗಿದೆ. ಎಂದು ಗ್ರಾಮಸ್ಥರು ಹೇಳಿಕೊಂಡಿದ್ದರು..

ಸಮಸ್ಯೆ ಅಲಿಸಿ, ಸ್ಥಳ ಪರಿಶೀಲಿಸಿದ ಶಾಸಕಿ, ಸರಕಾರದ ಹಣ ಪೋಲಾಗಲು ಬಿಡುವದಿಲ್ಲ. ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಿದ್ದೇನೆ, ಶೀಘ್ರದಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ. ಹಿಂದಿನ ಶಾಸಕರ ಅವಧಿಯಲ್ಲಿ ಏನು ಒಪ್ಪಂದವಾಗಿದೆ ಎಂದು ತಿಳಿಯದಾಗಿದೆ.

ಎಲ್ಲಿಯೇ ಆಗಲಿ, ಯಾರದ್ದೇ ಆಗಿರಲಿ ಖಾಸಗಿ ಜಮೀನಿನಲ್ಲಿ ರಸ್ತೆ ಮತ್ತಿತರ ಕಾಮಗಾರಿ ಪ್ರಾರಂಭಿಸುವ ಮೊದಲೇ ಜಮೀನಿನ ಹಸ್ತಾಂತರದ ಬಗ್ಗೆ ಒಪ್ಪಂದವಾಗಿರುತ್ತದೆ. ಅದರ ಪ್ರಕಾರ ಎಸ್ಟಿಮೇಟ್ ಮಾಡಿರುತ್ತಾರೆ- ಹಾಗೊಮ್ಮೆ ಆಗಿದ್ದರೆ ಈಗ ಜಮೀನು ಬಿಟ್ಟಕೊಡದೆ ಸಾರ್ವಜನಿಕರಿಗೆ ತೊಂದರೆ ಕೊಡುವದು ಸರಿಯಲ್ಲ. ಕೆಲಸ ಪೂರ್ತಿ ಮುಗಿಸದೆ ಮುಗಿದಿದೆ ಎಂದು ಹೇಳಿಕೊಳ್ಳುವದು ಯಾರಿಗೂ ಶೋಭೆತರುವದಿಲ್ಲ..ಹಿಂದಿನ ಶಾಸಕರಿಗೆ ಅಪ್ತರಾಗಿದ್ದವರ ಖಾಸಗಿ ಜಮೀನು ಇದಾಗಿದ್ದು, ಸೈಲ್ ಅವರು ಸರದಾರ ಎಂದು ಕಿರೀಟ ತೊಡುವ ಮೊದಲು ಈ ಕುರಿತು ಇದೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಆಗಲಿ ಎಂದು ಹೇಳಿ, ಸೇತುವೆಯ ಸರದಾರ ಎನಿಸಿಕೊಂಡ ಮಾಜಿ ಶಾಸಕ ಸತೀಶ್ ಸೈಲ್ ರವರೂ ಈ ಭಾಗದ ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃಧ್ಧಿ ಕಾರ್ಯ ಕುಂಠಿತಗೊಳ್ಳದೇ, ಪರಸ್ಪರ ಸಹಕಾರ ಮನೋ ಭಾವನೆಯಿಂದ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಿ ಎಂದು ಸೂಚ್ಯವಾಗಿ ಹೇಳಿದಂತಿತ್ತು

ಶಾಸಕರ ಭೇಟಿಯ ವೇಳೆ ಸ್ಥಳೀಯರಾದ ಶಿವಾ ಕೇ ನಾಯ್ಕ, ಉದಯ ಏ ನಾಯ್ಕ, ಕಿರಣ ಟಿ ನಾಯ್ಕ, ಹರೀಷ ಜೆ ನಾಯ್ಕ, ವಿನೋದ ಎನ್ ನಾಯ್ಕ, ಗೋಪಾಲ ಎಂ ನಾಯ್ಕ, ಬುದವಂತ ನಾಯ್ಕ, ಅಕ್ಷಯ ನಾಯ್ಕ, ಸಂದೀಪ ನಾಯ್ಕ, ಭಗವಾನ ಎಸ್ ನಾಯ್ಕ, ಗಗನ ಪೆಡ್ನೇಕರ, ಅಜಿತ ನಾಯ್ಕ, ಸುನೀಲ ನಾಯ್ಕ, ಸಂತೋಷ ನಾಯ್ಕ, ಕಿರಣ ಕಲ್ಗುಟಕರ, ಯೇಸುದಾಸ ನಾಯ್ಕ, ಅನಂತ ಭಟ್, ಹೊನ್ನಪ್ಪ ನಾಯ್ಕ, ಸುರೇಂದ್ರ ಎಸ್ ನಾಯ್ಕ, ಮಹಾದೇವ ತಳೇಕರ , ಮಂಜು ಬಲಿಯಾ ನಾಯ್ಕಇನ್ನಿತರರು ಉಪಸ್ಥಿತರಿದ್ದರು. ಪಿಎಸೈ ಪ್ರವೀಣ ಕುಮಾರ ಹಾಗೂ ಸಂಬಂಧಿಸಿದ ಇತರೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಸ್ಥಳ ವೀಕ್ಷಣೆ ನಡೆಸಿದ ಶಾಸಕಿ ರೂಪಾಲಿ ನಾಯ್ಕ,ಕೆಲ -ಹೊತ್ತಿನಲ್ಲಿಯೇ ಖಾಸಗಿ ಜಾಗದ ಮಾಲಕ ಅವರ್ಸಾದ ಹೆಸರಾಂತ ಉದ್ದಿಮೆದಾರ ಮಂಗಲದಾಸ್ ಕಾಮತ್ ಅವರ ಜೊತೆ ಜಮೀನು ಹಸ್ತಾಂತರ ಪ್ರಕ್ರಿಯೆ ಕುರಿತು ಚರ್ಚಿಸಿದ್ದು,ಈ ವೇಳೆ ಜಾಗದ ಮಾಲಕರು, ಸಂಬಂಧಿಸಿದ ಇಲಾಖೆ ಅಥವಾ ಯಾರೊಬ್ಬರೂ ರಸ್ತೆ ನಿರ್ಮಾಣಕ್ಕಾಗಿ ನನ್ನ ಬಳಿ ಈ ವರೆಗೂ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ನನ್ನ ಮಾಲ್ಕಿ ಹಕ್ಕಿನ ಜಾಗ ಬಿಟ್ಟುಕೊಡಲು ಸಿದ್ದನಿದ್ದೇನೆ.ಇಂದಿನ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಭೂಮಿ ಹೆಚ್ಚಿನ ಬೆಲೆ ಬಾಳಬಹುದು. ರಸ್ತೆ ನಿರ್ಮಾಣ ಉದ್ದೇಶಿತ ಯೋಜನೆಗೆ ನಾನು ಬಿಟ್ಟು ಕೊಡುವ ಭೂಮಿಗೆ ಕನಿಷ್ಟ ಪಕ್ಷ, ಸರ್ಕಾರದ ಅಂದಾಜು ಬೆಲೆಯಂತೆ ಆದರೂ ಪರಿಹಾರ ನೀಡಬೇಕು.ಸ್ವಲ್ಪ ಕಡಿಮೆ ಹಣ ನೀಡಿದರು ನಮ್ಮೂರ ಸುತ್ತಮುತ್ತಲ ಜನತೆ ಪರವಾಗಿ ತ್ಯಾಗ ಮಾಡಲು ಸಿದ್ಧನಿದ್ದೇನೆ.ಆದರೆ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ಅರ್ಧಕ್ಕೆ ನಿಲ್ಲಲು ನನ್ನಿಂದಲೇ ಸಮಸ್ಯೆಯಾಗಿದೆ ಎಂಬಷ್ಟರ ಮಟ್ಟಿಗೆ ಕೆಲವರು ಬಿಂಬಿಸ ಹೊರಟಿರುವ್ರದು ಸರಿಯಲ್ಲ ಎಂದು ಹೇಳಿದ್ದಾಗ ತಿಳಿದು ಬಂದಿದೆ.

ಖಾಸಗಿ ಮಾಲಕರ ಬೇಡಿಕೆ ಹಾಗೂ ನಿಲುವು ಸಹಜ ಮತ್ತು ಸಮಂಜಸ ವಾಗಿದೆ ಎಂಬರ್ಥದಲ್ಲಿ,ಪ್ರತಿಕ್ರಿಯಿಸಿದ ಶಾಸಕಿ ರೂಪಾಲಿ ನಾಯ್ಕ,ತಹಸಿಲ್ದಾರ್,ಉಪವಿಭಾಗಾಧಿಕಾರಿಗಳು,ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಯೋಗ್ಯ ತೀರ್ಮಾನ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದ್ದು,ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಭೂಮಾಲಕರ ವಿಶೇಷ ಪ್ರಯತ್ನದಿಂದ,ಸಮಸ್ಯೆಗಳೆಲ್ಲವೂ ಇತ್ಯರ್ಥಗೊಂಡು ಸೇತುವೆ ಅತಿ ಶೀಘ್ರದಲ್ಲಿ ಜನಸಂಚಾರಕ್ಕೆ ತೆರೆದುಕೊಳ್ಳುವಂತೆ ಆಗಲಿ ಎನ್ನುವುದು ಸ್ಥಳೀಯರ ಆಶಯವಾಗಿದೆ.

ಈ ಕುರಿತು ವಿಸ್ಮಯ ವಾಹಿನಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್, ಭೂ ಮಾಲಕ ಮಂಗಲದಾಸ ಕಾಮತ್ ಅವರನ್ನು ಸಂಪರ್ಕಿಸಿದಾಗ,ಅವರು ನೀಡಿರುವ ಜನಪರ ಕಾಳಜಿಯ ಹೇಳಿಕೆಗಳು, ಈ ರಸ್ತೆ ಮತ್ತು ಸೇತುವೆಯ ಉದ್ದೇಶಿತ ಯೋಜನೆ ಪೂರ್ಣಗೊಳಿಸಲು ಪ್ರತಿಯೊಬ್ಬರೂ ಬದ್ಧರಾದಂತಿದ್ದು, ಜನತೆಗೂ ಶುಭ ಸಂದೇಶ ರವಾನಿಸಿದಂತಿದೆ.ಆ ಕಾಲ ಆದಷ್ಟು ಬೇಗ ಕೂಡಿ ಬರಲಿ ಎಂದು ನಮ್ಮ ವಾಹಿನಿಯೂ ಜನಪರ ಕಾಳಜಿಯಿಂದ ಸಂಬಧಿಸಿದವರೆಲ್ಲರ ಪ್ರಯತ್ನಕ್ಕೆ ಶುಭ ಹಾರೈಸುತ್ತದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version