ಮಾಹಿತಿ
Trending

ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಅಂಕೋಲಾದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು

ಅಂಕೋಲಾ: ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿದ್ದು ಸರ್ಕಾರ ಮತ್ತು ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶನದಲ್ಲಿ ಹಲವು ಮುಂಜಾಗೃತೆ ಕ್ರಮ ಕೈಗೊಳ್ಳುತ್ತಿದ್ದಾರೆ. ತಾಲೂಕಿನ ಎಲ್ಲಾ 4 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಿರುವುದು ಕಂಡುಬಂದಿದೆ.
ಅಂಕೋಲಾ ತಾಲೂಕಿನಲ್ಲಿ ಒಟ್ಟೂ 29 ಪ್ರೌಢ ಶಾಲೆಗಳಿದ್ದು, ಬುಧವಾರ ಸಮಾಜವಿಜ್ಞಾನ ಪರೀಕ್ಷೆ ಬರೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ 4ನೇ ಪರೀಕ್ಷೆ ಎದುರಿಸಿದರು. ತಾಲೂಕಿನ ಒಟ್ಟಾರೆಯಾಗಿ 1180 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ.
ತಾಲೂಕಿನ ಪ್ರತಿಷ್ಠಿತ ಪಿ.ಎಮ್ ಪ್ರೌಢಶಾಲೆಯೊಂದರಲ್ಲಿಯೇ 161 ಗಂಡು ಹಾಗೂ 171 ಹೆಣ್ಣು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಶೀಲಾ ಆಯ್.ಬಂಟ್ ಸುವ್ಯವಸ್ಥೆಗೆ ಮಹತ್ವ ನೀಡಿದ್ದು, ಹೆಚ್ಚುವರಿ ಅಧೀಕ್ಷಕ ನಾಗರಾಜ ರಾಯ್ಕರ ಮಾರ್ಗದರ್ಶನದಲ್ಲಿ ಅರುಣ ನಾಯ್ಕ, ಚಂದ್ರಹಾಸ ರಾಯ್ಕರ ಮತ್ತಿತ್ತರ ಸಿಬ್ಬಂದಿಗಳು ಸಿಟಿಂಗ್ ಸ್ಕಾಡ್, ಮೊಬೈಲ್ ಸ್ಕಾಡ್, ಕೊಠಡಿ ಮೇಲ್ವಿಚಾರಕ, ರಿಲಿವರ್‍ರಾಗಿ ತಮ್ಮ ತಮ್ಮ ಪರೀಕ್ಷಾ ಕರ್ತವ್ಯ ನಿರ್ವಹಿಸಿದರು.ಉದ್ಘೋಷಕ ಗಣಪತಿ ಆರ್. ತಾಂಡೇಲ ಪರೀಕ್ಷೆ ಆರಂಭವಾಗುವುದಕ್ಕೂ ಮೊದಲು ಮತ್ತು ಪರೀಕ್ಷೆ ಮುಕ್ತಾಯದ ನಂತರ ಎರಡು ಬಾರಿ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯ ನಿಭಾಯಿಸಿದರು.
ಪರೀಕ್ಷಾ ಕೇಂದ್ರದ ಇತರ ಎಲ್ಲ ಸ್ತರದ ಸಿಬ್ಬಂದಿಗಳು ಬೆಳಿಗ್ಗೆಯೇ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಕೆಲಸ ಕಾರ್ಯ ಆರಂಭಿಸಿದ್ದು ಕಂಡುಬಂತು. ಗ್ರಾಮೀಣ ಭಾಗ ಸೇರಿದಂತೆ ಹಲವೆಡೆಯಿಂದ ವಿದ್ಯಾರ್ಥಿಗಳನ್ನು ಕರೆ ತರಲು ಸಾರಿಗೆ ಬಸ್ಸ್ ಸೇವೆ ಬಳಸಿಕೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು, ಶಾಲಾ ಆವರಣ ಪ್ರವೇಶಿಸುವ ಮೊದಲು ತಮ್ಮ ಕೈ-ಕಾಲುಗಳನ್ನು ತೊಳೆದುಕೊಂಡು ಬರಲು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಹತ್ವ ನೀಡಿರುವುದು ಕಂಡುಬಂತು. ಪ್ರವೇಶ ದ್ವಾರದ ಬಳಿ ಎಲ್ಲಾ ವಿದ್ಯಾರ್ಥಿಗಳ ಕೈಗೆ ಸೆನಿಟೈಜರ್ ಹಾಕಿ ಸೋಂಕು ನಿವಾರಣ ಕ್ರಮ ತೆಗೆದುಕೊಳ್ಳಲಾಯಿತು., ಆರೋಗ್ಯ ಸಿಬ್ಬಂದಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ ಬಳಸಿ ದೇಹದ ತಾಪಮಾನ ಪರೀಕ್ಷಿಸಿದರು. ವಿದ್ಯಾರ್ಥಿಗಳ ಮಾಸ್ಕ ಧರಿಸಿರುವುದನ್ನು ಖಚಿತಪಡಿಸಿಕೊಂಡು ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ಹೆಚ್ಚಿಸಲಾಯಿತು. ಭಾರತ ಸ್ಕೌಟ್ಸ್ ಸಿಬ್ಬಂದಿಗಳು ವಿಶೇಷ ಸಹಕಾರ ನೀಡುತ್ತಿದ್ದಾರೆ.

ತಾಲೂಕಿನ ಎಲ್ಲಾ ಪರೀಕ್ಷಾಕೇಂದ್ರಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ತಹಶೀಲ್ದಾರ ಉದಯ ಕುಂಬಾರ ಪರೀಕ್ಷಾ ಕೇಂದ್ರಗಳಿಗೆ ತೆರಳಿ ವ್ಯವಸ್ಥೆ ಪರಿಶೀಲಿಸುತ್ತಿದ್ದು, ಸಿಪಿಐ ಕೃಷ್ಣಾನಂದ ಜಿ.ನಾಯಕ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಈ.ಸಿ.ಸಂಪತ್ ಮತ್ತು ಪೊಲೀಸ್ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವಂತೆ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ, ವಿವಿಧ ಇಲಾಖೆಗಳ ಸಹಕಾರ ಪಡೆದು ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡುತ್ತಿದ್ದಾರೆ ಮತ್ತು ವಿದ್ಯಾರ್ಥಿ ಪಾಲಕರ ಆತಂಕ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button