ಪೋಲಿಸ್ ಪೇದೆ ಸಹಿತ ಐವರು ಸೋಂಕಿತರು ಗುಣಮುಖರಾಗಿ ಬಿಡುಗಡೆ
ಸೋಂಕಿನ ಸರಪಳಿ ತುಂಡರಿಸಿದ ಎ.ಸಿ ಅಜೀತ್ ಎಮ್ ಮತ್ತು ತಾಲೂಕಾಡಳಿತ, ಹಾಗು ಪೊಲೀಸರು
ಅಂಕೋಲಾ : ಕೊರೊನಾ ವಾರಿಯರ್ಸ್ ಮುಖ್ಯ ಭೂಮಿಕೆಯಲ್ಲಿ ಬರುವ ಪೋಲಿಸ್ ಇಲಾಖೆಯ ಸಿಬ್ಬಂದಿಗಳೆಲ್ಲರೂ ಸೋಮವಾರ ತಮ್ಮ ಠಾಣೆಯ ಹೊರ ಆವರಣದಲ್ಲಿ ಅತೀವ ಸಂತಸದಿಂದ ಕುಟುಂಬ ಸದಸ್ಯರೋರ್ವರನ್ನು ಚಪ್ಪಾಳೆ ತಟ್ಟಿ, ಹೂಮಳೆಗರೆದು ಸ್ವಾಗತಿಸಿ ಸಂಭ್ರಮಿಸಿದರು. ಕೊರೊನಾ ವಿರುದ್ದ ಹೋರಾಡಿ ಗೆದ್ದು ಬಂದ ತಮ್ಮ ಸಿಬ್ಬಂದಿಯನ್ನು ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್.ಐ, ಇ.ಸಿ.ಸಂಪತ್ ಅವರು ಹಾರ ಹಾಕಿ ಶಾಲು ಹೊದಿಸಿ ಗೌರವಿಸುವ ಮೂಲಕ ಇತರೆ ಎಲ್ಲಾ ಸಿಬ್ಬಂದಿಗಳಿಗೆ ಆತ್ಮಸ್ತೈರ್ಯ ಹೆಚ್ಚಿಸುವ ಕೆಲಸ ಮಾಡಿದರು.
ಸಿಬ್ಬಂದಿಗೆ ಸೋಂಕು ತಗುಲಿದ್ದರಿಂದ ಪೊಲೀಸರು ಸಹ ಆತಂಕಗೊಂಡಿದ್ದರು. ಈ ಪೊಲೀಸ್ ಸಿಬ್ಬಂದಿಯ ಸಂಪರ್ಕಿತರಾಗಿದ್ದ ಠಾಣೆಯ ಇತರೆ ಪೊಲೀಸರನ್ನು ಸಹ ಕ್ವಾರಂಟೈನ್ ಮಾಡಲಾಗಿತ್ತು. ಅವರ ವರದಿ ಸಹ ನೆಗಟಿವ್ ಆಗಿತ್ತು. ಸದ್ಯ ಇವರು ಕೊರೋನಾ ಗೆದ್ದು ಮರಳಿದ್ದು, ಎಲ್ಲ ಪೊಲೀಸರು ನಿರಾಳರಾಗುವಂತೆ ಮಾಡಿದೆ. ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್.ಐ, ಇ.ಸಿ.ಸಂಪತ್ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಕೇಳಿಬಂದಿದೆ.
ಐವರು ಬಿಡುಗಡೆ:
ಬೀಟ್ ಪೋಲಿಸ್ ಸೇರಿದಂತೆ, ಹುಲಿದೇವರವಾಡ, ರಾಮನಗುಳಿ, ಕೋಟೆವಾಡ ಹಾಗೂ ಬಡಗೇರಿಯ, ಒಟ್ಟು ಐವರು ಸೋಂಕಿತರು ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೊದಲು ಪಾಸಿಟಿವ್ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಕುಮಟಾದ ಕೋವಿಡ್ ಹೆಲ್ತ್ ಸೆಂಟರ್‍ಗೆ ದಾಖಲಿಸಲಾಗಿತ್ತು. ಹೆಚ್ಚಿನ ಸೋಂಕು ಲಕ್ಷಣಗಳಿಲ್ಲದ ಇವರು ಶೀಘ್ರ ಚೇತರಿಸಿಕೊಂಡಿದ್ದು, ಗಂಟಲುದ್ರವ ಮರು ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ತಾಲೂಕಿನ ಒಟ್ಟೂ 21 ಸೋಂಕಿತರ ಪೈಕಿ 17 ಮಂದಿ ಗುಣಮುಖರಾಗುವದರೊಂದಿಗೆ ಕೇವಲ 4 ಸೋಂಕಿತರು ಮಾತ್ರ ಗುಣಮುಖರಾಗುವುದು ಬಾಕಿ ಇದೆ.
ಇಂದು 37 ವರದಿ ನೆಗೆಟಿವ್:
ತಾಲೂಕಿನಲ್ಲಿ ಈವರೆಗೆ ಒಟ್ಟು 949 ಜನರ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳಲ್ಲಿ 21 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಮವಾರ ಬಂದ ಎಲ್ಲಾ 37 ವರದಿಗಳು ನೆಗೆಟಿವ್ ಆಗಿದ್ದು, ಈವರೆಗೆ ಒಟ್ಟು 824 ವರದಿಗಳು ನೆಗೆಟಿವ್ ಆಗಿವೆ. ಮತ್ತೆ 104 ವರದಿಗಳು ಬರಬೇಕಿದೆ. ಕಳೆದ 2-3 ದಿನಗಳಿಂದ ಯಾವುದೇ ಹೊಸ ಗಂಟಲುದ್ರವ ಮಾದರಿ ಸಂಗ್ರಹಿಸಿಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ ಜುಲೈ4ರ ನಂತರ ಯಾವುದೇ ಹೊಸ ಪ್ರಕರಣಗಳು ಧೃಡಪಡದಿರುವುದು ಮತ್ತು ಈ ಹಿಂದಿನ ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್ಸಾಗುತ್ತಿರುವುದು ತಾಲೂಕಿನ ಜನತೆಯ ನೆಮ್ಮದಿಗೆ ಕಾರಣವಾಗಿದೆ. ಸೋಂಕಿನ ಸರಪಳಿ ತುಂಡರಿಸಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಅಜೀತ್ ಎಮ್ ಅವರ ನೇತೃತ್ವದಲ್ಲಿ ತಾಲೂಕಾಡಳಿತ, ಆರೋಗ್ಯ ಇಲಾಖೆ ಮತ್ತು ಸಂಬಂಧಿಸಿದ ಎಲ್ಲಾ ಕೊರೊನಾ ವಾರಿಯರ್ಸ್ ಯೋಧರ ಸೇವೆ ಹಾಗೂ ಶ್ರಮವನ್ನು ಮೆಚ್ಚಲೇಬೇಕಿದೆ.
ವೃದ್ಧನ ಸಾವು :
ಅಂಕೋಲಾ ಮೂಲದ ಅಂದಾಜು 68 ವಯಸ್ಸಿನ ವ್ಯಕ್ತಿಯೋರ್ವರು ಹೊರಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದ್ದು, ಕೋವಿಡ್-19 ಶಂಕೆ ವ್ಯಕ್ತವಾಗಿದೆ ಎಂದು ಕೇಳಿಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಕರಳುಬೇನೆಯ ಸಮಸ್ಯೆಯಿಂದ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇವರು ತಾಲೂಕಿನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿನ ಹಿನ್ನಲೆ ಅಥವಾ ಆರೋಗ್ಯದ ಏರುಪೇರಿನಿಂದಾಗಿ ಹೆಚ್ಚಿನ ಚಿಕಿತ್ಸೆಗೆ ಒಳಪಡಲು ಬೇರೆ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ, ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)