ಅಂಕೋಲಾ : ರಂಗ ಪ್ರಸಾದನ ಕಲೆಯಲ್ಲಿ ಪರಿಗಣಿತರು ಮತ್ತು ನಾಟಕ ಮತ್ತಿತರ ರಂಗ ಪರಿಕರಗಳ ಹೊಸತನದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿರುವ ‘ಮಹಾಲಸಾ ಡ್ರಾಮಾ ಸೀನ್ಸ್’ ಮಾಲಕರಾದ ಮೋಹನ ಎಸ್. ನಾಯ್ಕ ಕುಂಬಾರಕೇರಿಯವರ ಧರ್ಮಪತ್ನಿ ಗೌರಿ ಮೋಹನ ನಾಯ್ಕ(66) ಶುಕ್ರವಾರ ಬೆಳಗಿನ ಜಾವ ವಿಧಿವಶರಾದರು.
ಕಳೆದ 2-3 ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇವರಿಗೆ ಮಂಗಳೂರು ಮತ್ತಿತರೆಡೆ ಹಲವು ಬಾರಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಗಂಭೀರ ಖಾಯಿಲೆಯ ರೋಗಲಕ್ಷಣಗಳು ತೀವ್ರವಾಗುತ್ತಾ ಸಾಗಿ ಇತ್ತೀಚೆಗೆ ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದರು. ಗುರುವಾರ ಆರೋಗ್ಯ ಸ್ಥಿತಿಯಲ್ಲಿ ಕಂಡು ಬಂದ ಏರುಪೇರಿನಿಂದಾಗಿ ಅಂಕೋಲಾ ಮತ್ತು ಕಾರವಾರದ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತಪಾಸಣೆಗೊಳಪಡಿಸಿದ್ದರಾದರೂ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.
ತುಂಬು ಕುಟುಂಬದ ಸದ್ಗೃಹಿಣಿಯಾಗಿದ್ದ ಮೃತ ಗೌರಿ ನಾಯ್ಕ ಸಮಾಜದ ಎಲ್ಲರೊಡನೆ ಪ್ರೀತಿ-ವಿಶ್ವಾಸದಿಂದ ಬಾಳಿ-ಬದುಕಿದ್ದರು. ಕುಟುಂಬದ ಶ್ರೇಯಸ್ಸಿನಲ್ಲಿ ಮಹಾಗೌರಿಯೇ ಆಗಿದ್ದ ಅವರು ಶುಕ್ರವಾರವೇ ದೈವಾಧೀನರಾಗಿದ್ದಾರೆ.
ಮೃತರು, ಪತಿ ಮೋಹನ ನಾಯ್ಕ, ಮೂವರು ಗಂಡು ಮತ್ತು ಮೂವರು ಹೆಣ್ಣುಮಕ್ಕಳು, ಮೊಮಕ್ಕಳು ಸೇರಿದಂತೆ ಕುಟುಂಬವರ್ಗ ಮತ್ತು ಅಪಾರ ಬಂಧು-ಬಳಗ ತೊರೆದಿದ್ದಾರೆ.
ವಿಸ್ಮಯನ್ಯೂಸ ವಿಲಾಸ ನಾಯಕ ಅಂಕೋಲಾ.