Big News
Trending

Sirsi Kumta Highway: 7 ತಿಂಗಳು ಕುಮಟಾ-ಶಿರಸಿ ರಸ್ತೆ ಬಂದ್: ನವೆಂಬರ್ 1 ರಿಂದ ಸಂಪೂರ್ಣ ಸ್ಥಗಿತ

ಬದಲಿ ಮಾರ್ಗ ಯಾವುದು? ಶಿರಸಿ ಜಾತ್ರೆ ವೇಳೆ ಪರ್ಯಾಯ ವ್ಯವಸ್ಥೆ ಏನು?

ಶಿರಸಿ: ಹೆದ್ದಾರಿ ವಿಸ್ತರಣೆ ಹಿನ್ನಲೆಯಲ್ಲಿ ನವೆಂಬರ್ 1 ರಿಂದ 2024 ಮೇ 31ರ ವರೆಗೆ ಶಿರಸಿ-ಕುಮಟಾ ಮಾರ್ಗದಲ್ಲಿ ( Sirsi Kumta Highway) ವಾಹನ ಸಂಚಾರ ಸಂಪೂರ್ಣ ಸ್ಥಗಿತ ಮಾಡಲಾಗುತ್ತಿದೆ. ಈಗಾಗಲೇ ಶಿರಸಿ ವಿಭಾಗ ವ್ಯಾಪ್ತಿಯ 33 ಕಿ.ಮೀ. ರಸ್ತೆಯಲ್ಲಿ 25 ಕಿ.ಮೀ. ಆಗಿದೆ. 2.84 ಕಿ.ಮೀ. ಒಂದು ಕಡೆ ರಸ್ತೆಯಾಗಿದೆ.

ಉಳಿದಂತೆ 6.18 ಕಿ.ಮೀ. ರಸ್ತೆ ಆಗಬೇಕಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆ, 9 ಸೇತುವೆ ನಿರ್ಮಾಣ ಆಗಬೇಕಿದೆ. ಹೀಗಾಗಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಶಿರಸಿ-ಕುಮಟಾ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.

Sirsi Kumta Highway: ಪರ್ಯಾಯ ಮಾರ್ಗ ಯಾವುದು?

ಮಾರ್ಗ ಸಂಪೂರ್ಣ ಸ್ಥಗಿತ ಮಾಡುವ ಕಾರಣ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಅಂಕೋಲಾ-ಶಿರಸಿ ಸಂಪರ್ಕಕ್ಕೆ ಯಲ್ಲಾಪುರ ಮಾರ್ಗ, ಹೊನ್ನಾವರ-ಶಿರಸಿಗೆ ಮಾವಿನಗುಂಡಿ ಮೂಲಕ ಹಾಗೂ ಕುಮಟಾ-ಶಿರಸಿಗೆ ಬಡಾಳ್ ಘಟ್ಟದ ಮೂಲಕ ಮತ್ತು ವಡ್ಡಿ ಘಟ್ಟದ ಮೂಲಕ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಶಿರಸಿ ಮಾರಿಕಾಂಬಾ ಜಾತ್ರೆ ಸಮಯದಲ್ಲಿ ಶಿರಸಿ ಕುಮಟಾ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಶಿರಸಿ ಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮಾರ್ಗದಲ್ಲಿ ಎಲ್ಲ ತರದ ಭಾರಿ ವಾಹನಗಳ ಸಹಿತ ಸಂಚಾರಕ್ಕೆ ಅವಕಾಶ ಇದೆ..ಆದರೆ ಘಟ್ಟ ಭಾಗದ ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕುಮಟಾ ಮಾರ್ಗದಿಂದ ದೊಡ್ಮನೆ ಘಟ್ಟ ಭಾಗದಿಂದ ಸಿದ್ದಾಪುರ ಮಾರ್ಗವಾಗಿ ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.

ಈ ಕುರಿತು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಮಾತನಾಡಿ, ಶಿರಸಿ ಕುಮಟಾ ರಸ್ತೆ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಗುತ್ತಿಗೆ ಪಡೆದ ಕಂಪನಿ ಆರ್.ಎನ್.ಎಸ್. ಕೋರಿಕೆ ಮೇರೆಗೆ ಈ ಮಾರ್ಗದಲ್ಲಿ ಸಂಚಾರ ಸ್ಥಗಿತ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಲಘು ಮತ್ತು ಭಾರೀ ವಾಹನಗಳ ಸಂಚಾರ?

  1. ಶಿರಸಿಯಿoದ ಯಲ್ಲಾಪುರ ಮಾರ್ಗ ಮತ್ತು ಅಂಕೋಲಾ ಮಾರ್ಗದಲ್ಲಿ ಎಲ್ಲ ತರದ ಭಾರಿ ವಾಹನಗಳ ಸಂಚಾರ.
  2. ಘಟ್ಟ ಭಾಗದ ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ.
  3. ಕುಮಟಾ ಮಾರ್ಗದಿಂದ ದೊಡ್ಮನೆ ಘಟ್ಟ ಭಾಗದಿಂದ ಸಿದ್ದಾಪುರ ಮಾರ್ಗವಾಗಿ ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಅವಕಾಶ.
  4. ಹೊನ್ನಾವರ ಮೂಲಕ ಮಾವಿನಗುಂಡಿ ಘಟ್ಟ ಭಾಗದಿಂದ ಸಿದ್ದಾಪುರ ಮಾರ್ಗವಾಗಿ ಶಿರಸಿ ಮಾರ್ಗದಲ್ಲಿ ಎಲ್ಲಾ ತರದ ವಾಹನಗಳಿಗೆ ಅವಕಾಶ ಇದೆ.

2020ರಲ್ಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನ ನಿರ್ಬಂಧಕ್ಕೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಇದೀಗ ಹೆದ್ದಾರಿ ಪ್ರಾಧಿಕಾರವು ಸಹ ಸಂಚಾರ ದಟ್ಟಣೆ ಕಡಿಮೆ ಮಾಡಿ ಕಾಮಗಾರಿ ಮುಗಿಸಲು ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿದೆ. ಈಗಾಗಲೇ ಅಗಲೀಕರಣದ 33 ಕಿಲೋಮೀಟರ್ ವ್ಯಾಪ್ತಿಯಲ್ಲಿ 26 ಕಿಲೋಮೀಟರ್ ವರೆಗೂ ಕಾಮಗಾರಿ ನಡೆಯುತ್ತಿದೆ.

ಭಾರತ್ ಮಾಲಾ ಫೇಸ್- 1 ಅಡಿಯಲ್ಲಿ ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೇಕೇರಿ ಬಂದರು ಲಿಂಕ್ ರೋಡ್ ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾ ವರೆಗೆ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 370 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. 

ವಿಸ್ಮಯ ನ್ಯೂಸ್, ಶಿರಸಿ

Back to top button