ಹೆಸರಾಂತ ವೈದ್ಯ ಅವಿನಾಶ ತಿನೇಕರ್ ವಿಧಿವಶ

ಅಂಕೋಲಾ : ಪಟ್ಟಣದ ಆರ್ಯಾ ಮೆಡಿಕಲ್ ಸೆಂಟರ್‍ನ ಹೆಸರಾಂತ ವೈದ್ಯ ಅವಿನಾಶ ತಿನೇಕರ್ (62) ಶನಿವಾರ ವಿಧಿವಶರಾದರು. ಕಳೆದ ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಎದುರಿನ 24*7 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೇವೇಳೆ ಅವರಲ್ಲಿ ಕೊವೀಡ್ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಆರೋಗ್ಯ ಪರಿಸ್ಥಿತಿ ವಿಷಮವಾಗಿ ಚಿಕಿತ್ಸೆ ಫಲಕಾ ರಿಯಾಗದೇ ಕೊನೆಯುಸಿರೆಳದರು.

ಹಲವು ವೈದ್ಯಕೀಯ ಮೂಲ ಭೂತ ಸಮಸ್ಯೆಗಳಿಂದ ವಂಚಿತವಾಗಿರುವ ಅಂಕೋಲಾ ತಾಲೂಕಿನವರ ಪಾಲಿಗೆ ತುರ್ತು ಸಂದರ್ಭಗಳಲ್ಲಿ ತನ್ನ ಸೇವೆಯ ಮೂಲಕ ಆಶಾ ಕಿರಣವಾಗಿ ಹಲವಾರು ರೋಗಿಗಳ ಮತ್ತು ಅವರ ಕುಟುಂಬದವರ ಪಾಲಿನ ಆರೋಗ್ಯ ದೇವತೆಯಂತಿದ್ದ ಡಾ. ತಿನೇಕರ್, ಅಪಘಾತ, ವಿಷ ಪ್ರಾಶನ, ಹೆರಿಗೆ, ಇನ್ನಿತರ ಅತ್ಯಂತ ತುರ್ತು ಸಂದರ್ಭಗಳಲ್ಲಿ ಸಹ ಸಾಂದರ್ಭಿಕ ಚಿಕಿತ್ಸೆ ನೀಡಿ ಸಾವಿರಾರು ಜನರ ಪ್ರಾಣ ರಕ್ಷಣೆಗೆ ಸೇವೆ ನೀಡಿ ಹೆಸರಾಗಿದ್ದರು. ಅಂಕೋಲಾ ರೋಟರಿ ಕ್ಲಬ್‍ನಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಗಮನಾರ್ಹ ಸಾಮಾಜಿಕ ಸೇವೆ ಸಲ್ಲಿಸಿದ್ದ ಇವರು ಈಗಲೂ ಆ ಸಂಸ್ಥೆಯ ಸಕ್ರೀಯ ಸದಸ್ಯರಾಗಿ ತೊಡ ಗಿಸಿಕೊಂಡಿದ್ದರು. ಅನೇಕ ಬಡ ವಿದ್ಯಾರ್ಥಿಗಳಿಗೆ ತನ್ನಿಂದಾದ ಸಹಾಯ ನೀಡುತ್ತಲೇ ಬಂದಿದ್ದರು.

ನಿಜವಾದ ಕೊರೊನಾ ಯೋಧ-ವೈದ್ಯ : ತಮ್ಮ ಜೀವದ ಹಂಗು ತೊರೆದು ಲಾಕ್‍ಡೌನ್ ಆರಂಭದಿಂದಲ್ಲೂ ಜಿಲ್ಲೆಯ ವಿವಿಧ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತಲೇ ಬಂದಿದ್ದರು. ತನ್ನ ಆಸ್ಪತ್ರೆಗೆ ದಾಖಲಾಗಿದ್ದ ಅಗ್ರಗೋಣ ಶೆಡಿಕಟ್ಟಾದ ವ್ಯಕ್ತಿಯೊರ್ವನಲ್ಲಿ ಕೊವೀಡ್ ಪಾಸಿಟಿವ್ ಕಾಣಿಸಿಕೊಂಡಿದ್ದರೂ, ಧೃತಿಗೆಡದೆ ತನ್ನ ನಿರಂತರ ಸೇವೆಯನ್ನು ಮುಂದುವರಿಸಿದ್ದರು. ಈ ನಡುವೆ ಎರಡು ಬಾರಿ ಆಸ್ಪತ್ರೆಯಲ್ಲಿ ದಾಖಲಾ ಗಿದ್ದ ಕೆಲ ರೋಗಿಗಳಿಗೆ ಪಾಸಿಟಿವ್ ಲಕ್ಷಣಗಳು ಕಂಡು ಬಂದಿತ್ತು ಎನ್ನಲಾಗಿದ್ದು, ಸೋಂಕಿತರ ಚಿಕಿತ್ಸೆಯ ವೇಳೆ ಅಥವಾ ಸಂಪರ್ಕದಿಂದ ವೈದ್ಯರಲ್ಲಿಯೂ ಸೋಂಕಿನ ನಂಜಾಣು ವಕ್ಕರಿಸಿ ಕೊಂಡಿರುವ ಸಾಧ್ಯತೆ ಇದ್ದು, ವೈದ್ಯರ ಜೀವಕ್ಕೆ ಸಂಚಕಾರ ತಂದಿತೇ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ವೈದ್ಯರ ಆರೋಗ್ಯ ಸ್ಥಿತಿಯ ಏರುಪೇರಿನಿಂದಾಗಿ ಅಂಕೋಲಾದಿಂದ ಹುಬ್ಬಳ್ಳಿ ಆಸ್ಪತ್ರೆಗೆ ಸಾಗಿಸಿದ ವೇಳೆಯೇ ತಾಲೂಕಿನ ಹಲವಡೆ ವೈದ್ಯರ ಇರುವಿಕೆಯ ಕುರಿತು ಸುಳ್ಳು ವದಂತಿಗಳು ಹಬ್ಬಿತ್ತು. ಕೊನೆಗೂ ತಾಲೂಕಿನ ಹಲವರ ಪಾಲಿಗೆ ದುರದೃಷ್ಟವೋ ಎಂಬಂತೆ ಖ್ಯಾತ ವೈದ್ಯರು ಇನ್ನಿಲ್ಲವಾಗಿರುವುದು ವಿಧಿಯಾಟವೇ ಸರಿ.


ಮೃತರು, ಪತ್ನಿ ಡಾ.ಶ್ರೀದೇವಿ ತಿನೇಕರ್, ಮಗಳು ವೈದ್ಯ ವಿದ್ಯಾರ್ಥಿನಿ ಐಶ್ವರ್ಯಾ, ಅಪಾರ ಬಂಧು ಬಳಗ, ಆಸ್ಪತ್ರೆಯ ಸಿಬ್ಬಂದಿಗಳು, ಹಿತೈಷಿಗಳು ಮತ್ತು ತಾಲೂಕಿನ ಜನತೆಯನ್ನು ತೊರೆದಿದ್ದಾರೆ. ಡಾ. ಅವಿನಾಶ ನಿಧನಕ್ಕೆ ತಾಲೂಕು, ಜಿಲ್ಲೆಯ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾವಿರಾರು ರೋಗಿ ಗಳ ಕುಟುಂಬದವರು ಮತ್ತು ಈ ಹಿಂದೆ ಚಿಕಿತ್ಸೆ ಒಳಪಟ್ಟವರು ವೈದ್ಯರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version