ಶಿರೂರು ದುರಂತ: ಮುಂದುವರಿದ ಶೋಧಕಾರ್ಯ: ಒಂದೊಂದೇ ಅವಶೇಷಗಳು ಹೊರಕ್ಕೆ

ಅಂಕೋಲಾ : ಜುಲೈ 16 ರಂದು ಶಿರೂರು ಬಳಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ದುರಂತದಲ್ಲಿ ಒಟ್ಟು 11 ಮಂದಿ ನಾಪತ್ತೆಯಾಗಿ ದ್ದರು. ಅವರಲ್ಲಿ ಕೇರಳದ ಅರ್ಜುನ್ ಸೇರಿದಂತೆ ಈಗಾಗಲೇ ಒಂಬತ್ತು ಮಂದಿ ಮೃತ ದೇಹವಾಗಿ ಪತ್ತೆಯಾಗಿದ್ದಾರೆ.ಇನ್ನುಳಿದಂತೆ ಸ್ಥಳೀಯ ಜಗನ್ನಾಥ ನಾಯ್ಕ, ಮತ್ತು ಗೋಕರ್ಣ ಸಮೀಪದ ಗಂಗೆ ಕೊಳ್ಳ ನಿವಾಸಿ ಲೋಕೇಶ್ ನಾಯ್ಕ ಶೋಧ ಕಾರ್ಯ, ಶಾಸಕ ಸತೀಶ್ ಸೈಲ್ ವಿಶೇಷ ಸೂಚನೆಯ ಮೇರೆಗೆ, ನೊಂದ ಕುಟುಂಬದವರ ಸಮ್ಮುಖದಲ್ಲಿಯೇ ಮುಂದುವರೆಯುತ್ತಿದೆ.

ಅರ್ಜುನ್ ಲಾರಿಯಲ್ಲಿ ಏನೆಲ್ಲಾ ಸಿಕ್ಕಿತು : ಶಿರೂರು ಗುಡ್ಡ ಕುಸಿತದ ಬಳಿಕವೂ ರಿಂಗಣಿಸಿತ್ತೇ ಮೊಬೈಲ್ ?

ಮೂರನೇ ಹಂತದ ಎಂಟನೇ ದಿನದ ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಹುದುಗಿ ಬಿದ್ದಿದ್ದ ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ 110 ಕೆ.ವಿ ಸಾಮರ್ಥ್ಯದ ಡಿ ಟೈಪ್ ಟವರ್ (ಕಂಬವನ್ನು ) ಮಹೇಂದ್ರ ಡೊಂಗ್ರೆ ನೇತೃತ್ವದ ಅಭಿನೇಶಿಯ ಓಶಿಯನ್ ಸರ್ವಿಸ್ ತಂಡದ ಮುಳುಗು ತಜ್ಞರು,ಪತ್ತೆ ಹಚ್ಚಿದ್ದು, ಡ್ರೆಜ್ಜಿಂಗ್ ಯುನಿಟ್ ನಲ್ಲಿರುವ ಕ್ರೇನ್ ಮೂಲಕ ಮೇಲೆತ್ತಲಾಗಿದೆ. ದುರ್ಘಟನೆ ಸಂಭವಿಸಿದ ದಿನ ಉಳುವರೆ ಭಾಗದ ಗುಡ್ಡ ಹಾಗೂ ಶಿರೂರು ಭಾಗದ ಗುಡ್ಡದ ಮಧ್ಯೆ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಟವರ್ ಹಾಗೂ ತಂತಿಗಳಿಗೆ ಭಾರೀ ಹಾನಿಯಾಗಿತ್ತು. ಕುಮಟಾ ಕಡೆಯಿಂದ ಗೋಕರ್ಣ ಹಾಗೂ ಅಂಕೋಲಾ ಮಧ್ಯದ ವಿದ್ಯುತ್ ಸಂಪರ್ಕ ಇದೇ ಮಾರ್ಗವಾಗಿ ನಡೆಯುತ್ತಿದ್ದು,33 ಕೆ ವಿ ಸಾಮರ್ಥ್ಯ ಹೊಂದಿತ್ತು ಎನ್ನಲಾಗಿದೆ.

ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ,ಟವರ್ ಒಂದು ಈಗಲೂ ಕುಸಿದು ಬಿದ್ದ ಸ್ಥಿತಿಯಲ್ಲಿಯೇ ಇರುವುದನ್ನು ಕಾಣಬಹುದಾಗಿದೆ. ದುರ್ಘಟನೆ ಸಂಭವಿಸಿದ ದಿನ ಹೆದ್ದಾರಿ ಅಂಚಿಗಿದ್ದ ಇನ್ನೊಂದು ಟವರ್ ಕಲ್ಲುಬಂಡೆಗಳು ಹಾಗೂ ಮಣ್ಣಿನ ಜರಿತದ ವೇಳೆ ಗಂಗಾವಳಿ ನದಿಯಲ್ಲಿ ಬಿದ್ದು ಅಲ್ಲಿಯೇ ಹುದುಗಿ ಹೋಗಿತ್ತು. ಈ ನಡುವೆ ನದಿಯಲ್ಲಿ ನೀರಿನ ಹರಿವಿಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿಗಳು ಕಾರ್ಯಾಚರಣೆಗೆ ಅಡ್ಡಿಯಾಗಿದ್ದವು. ಹೆಸ್ಕಾಂ ಇಲಾಖೆಯ ಸಿಬ್ಬಂದಿಗಳ ಸಹಕಾರದಲ್ಲಿ ಕೆಲ ತಂತಿಗಳನ್ನು ತುಂಡರಿಸಲಾಗಿತ್ತು.

ಆದರೂ ಕಲ್ಲು ಬಂಡೆ ಹಾಗೂ ಮಣ್ಣು ರಾಶಿಗಳಡಿ ಕೆಲವು ಹುದುಗಿ ಬಿದ್ದಿರುವುದು,ಗಿಡಮರಗಳು ಟವರ್ ಕಂಬದೊಳಗೆ ಸಿಲುಕಿಕೊಂಡಿರುವುದು,ನದಿಯಲ್ಲೂ ಅಲ್ಲಲ್ಲಿ ಅಡೆತಡೆಯಾಗುವಂತೆ ಬಿದ್ದುಕೊಂಡಿರುವುದು ಒಟ್ಟಾರೆ ಕಾರ್ಯಚರಣೆಗೆ ತೊಡಕಾಗುತ್ತಿತ್ತು . ಸೆ 27 ರ ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿ, ಬಹು ಹೊತ್ತು ಕಾರ್ಯಾಚರಣೆ ನಡೆಸಿ, ನದಿಯಿಂದ ಟವರನ್ನು ಮೇಲೆತ್ತುವ ಸಾಹಸ ಹಾಗೂ ಸವಾಲಿನ ಕೆಲಸಕ್ಕೆ ಮುಂದಾಗಲಾಗಿತ್ತು. ಡ್ರೆಜ್ಜಿಂಗ್ ಟೀಮ್ , ಸ್ಥಳೀಯ ಮೀನುಗಾರರು ಹಾಗೂ, ಎಸ್ ಡಿ ಆರ್ ಎಫ್ ಹಾಗೂ ಸಂಬಂಧಿತ ಕೆಲ ಇಲಾಖೆಗಳ ಸಹಕಾರದಲ್ಲಿ ಕೊನೆಗೂ ಟವರನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದೆ.ಮುಂದಿನ ಸಮಯದ ಕಾರ್ಯಾಚರಣೆಯಲ್ಲಿ ಏನೆಲ್ಲ ಸಿಗಲಿದೆ ಕಾದುನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version