Uttara Kannada
Trending

ಗ್ರಂಥಸ್ಥ ವ್ಯಕ್ತಿತ್ವದ ಮುಲ್ಲಾ ಇಲಾಖೆಗೆ ಮಾದರಿ

“ಎದೆಯದನಿ” ಮುಲ್ಲಾಭಿನಂದನದ ಲೋಕಾರ್ಪಣದಲ್ಲಿ ಡಿಡಿಪಿಆಯ್ ಹರೀಶ ಅಭಿಮತ

ಕುಮಟಾ : ತಾಲ್ಲೂಕಿನ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್ ಗಫಾರ್ ಮುಲ್ಲಾರವರು ತಮ್ಮ ಸಜ್ಜನಿಕೆಯ ಕಾರ್ಯವೈಖರಿಯಿಂದಾಗಿ ಶ್ಲಾಘ್ಯರೆನಿಸಿ, ಗ್ರಂಥಸ್ಥ ವ್ಯಕ್ತಿತ್ವವಾಗಿ ಸಾಕಾರಗೊಂಡು, ಇಲಾಖಾಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ ಗಾಂವಕರ್ ನುಡಿದರು.

ಅವರು ಎ.ಜಿ.ಮುಲ್ಲಾ ಅಭಿನಂದನಾ ಸಮಿತಿಯಿಂದ ಹಿರೇಗುತ್ತಿಯ ಕನ್ನಡ ಶಾಲೆಯಲ್ಲಿ ಆಯೋಜಿಸಿದ “ಮುಲ್ಲಾಭಿನಂದನ” ಕಾರ್ಯಕ್ರಮದಲ್ಲಿ – ಮಂಜುನಾಥ ಗಾಂವಕರ್ ಬರ್ಗಿ ಹಾಗೂ ಎಚ್. ಬಿ. ರಾವೂತ್‌ರವರ ಜಂಟಿ ಸಂಪಾದಕತ್ವದಲ್ಲಿನ “ಎದೆಯದನಿ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ವರ್ಗವಾದ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರನ್ನು ಅಭಿನಂದನಾ ಕೃತಿಯೊಂದಿಗೆ ಬೀಳ್ಕೊಡುವಲ್ಲಿ ಕೃತಿಗೆ ವಸ್ತುವಾದ ಅವರ ಘನವ್ಯಕ್ತಿತ್ವವು ಇತರ ಅಧಿಕಾರಿಗಳಿಗೆ ಸ್ಪೂರ್ತಿದಾಯಕವಾಗಿದೆಯೆಂದರು.

ಅಭಿನoದನೆಗೆ ಭಾಜನರಾದ ಸೊರಬದ ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್ ಗಫಾರ್ ಮುಲ್ಲಾರವರು ಮಾತನಾಡಿ, ಕುಮಟಾದಲ್ಲಿ ನೀಡಲಾದ ಗೌರವವನ್ನು ಜೀವಿತದಲ್ಲಿ ಮರೆಯಲಾರೆನೆಂದು, ಇನ್ನುಳಿದ ಸೇವೆಯನ್ನು ಮತ್ತಷ್ಟು ಸಜ್ಜನಿಕೆಯಿಂದ ಸಲ್ಲಿಸುತ್ತೇನೆಯೆಂದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಎ.ಜಿ. ಮುಲ್ಲಾ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಮಾತನ್ನಾಡಿ ಸತ್ತ÷್ವಯುತವಾದ ವ್ಯಕ್ತಿಗಳೆಂದೂ ತಮ್ಮ ವ್ಯಕ್ತಿತ್ವದ ಮೂಲಕ ಇದ್ದಾಗಲಷ್ಟೇಯಲ್ಲದೇ ನಿರ್ಗಮಿಸಿದ ಬಳಿಕವೂ ಆರಾಧಿಸಲ್ಪಡುತ್ತಾರೆಂಬುದಕ್ಕೆ ಮುಲ್ಲಾಭಿಂದನವೇ ಸಾಕ್ಷಿಯಾದೆಯೆಂದರು. ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟರವರು ಮಾತನಾಡಿ, ಮುಲ್ಲಾರವರು ತಮ್ಮ ಕಾರ್ಯವೈಖರಿಯಿಂದ ಹಾಗೂ ಸಾತ್ತಿ÷್ವಕ ನಡೆಯಿಂದ ಯಾರಿಗೂ ಬೇಡವಾಗದೇ ಹೋದವರು ಎಂದರು. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ್ ನಾಯಕ ಮಾತನ್ನಾಡಿ ವರ್ಗಕೋಣೆಯಲ್ಲಿ ಸಮರ್ಥವಾಗಿ ಪಾಠ ಮಾಡುತ್ತಿದ್ದ ಎ. ಜಿ. ಮುಲ್ಲಾರವರು ಅಪರೂಪದ ಅಧಿಕಾರಿಯೆಂದರು.

ಎ. ಜಿ. ಮುಲ್ಲಾ ಅಭಿನಂದನಾ ಸಮಿತಿಯ ಅಧ್ಯಕ್ಷ ಬಾಲಚಂದ್ರ ಗಾಂವಕರ ಸ್ವಾಗತಿಸಿದರು. ಹಿರೇಗುತ್ತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ ವಂದಿಸಿದರು. ಮಾಸೂರು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಿವಾ ನಾಯ್ಕ ಅಭಿನಂದನಾ ನುಡಿಯನ್ನಾಡಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಬಿ ಗಾಂವಕರ ಆಶಯ ನುಡಿಯನ್ನಾಡಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಪ್ರಕಾಶ ನಾಯಕ “ಎದೆಯದನಿ” ಕೃತಿಯನ್ನು ಪರಿಚಯಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ತಾರಾ ನಾಯ್ಕ ಪ್ರಾರ್ಥಿಸಿದರು. ಬರ್ಗಿ ಪ್ರೌಢಶಾಲಾ ಶಿಕ್ಷಕಿ ಚಂಪಾವತಿ ನಾಯ್ಕ ನಿರೂಪಿಸಿದರು.

ಎ. ಜಿ. ಮುಲ್ಲಾ ಅಭಿನಂದನಾ ಸಮಿತಿಯಿಂದ ಮುಲ್ಲಾರವರಿಗೆ ವೈಸೂರು ಪೇಟವನ್ನು ತೊಡಿಸಿ, ಶಾಲು, ಫಲ-ತಾಂಬೂಲ-ಸ್ಮರಣಿಕೆ, ಫಲಕಗಳೊಂದಿಗೆ “ವಿದ್ಯಾವಾರಿಧಿ”ಯೆಂಬ ಉಪಾಧಿಯನ್ನಿತ್ತು ಸನ್ಮಾನಿಸಲಾಯಿತು.

ಮುಲ್ಲಾಭಿನಂದನದಲ್ಲಿ ಅಧಿಕಾರಿದ್ವಯರೊಂದಿಗೆ ಬರ್ಗಿಯವರಿಗೆ ಸನ್ಮಾನ

ಕುಮಟಾ : ತಾಲ್ಲೂಕಿನ ಹಿರೇಗುತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಎ. ಜಿ. ಮುಲ್ಲಾ ಅಭಿನಂದನಾ ಸಮಿತಿಯಿಂದ ಕುಮಟಾದ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್ ಗಫಾರ್ ಮುಲ್ಲಾರವರಿಗೆ “ಎದೆಯದನಿ” ಗ್ರಂಥ ಸಮರ್ಪಣೆಯೊಂದಿಗೆ ಬೀಳ್ಕೊಟ್ಟ ಸುಸಮಯದಲ್ಲಿ ಮಾತೃ ಜಿಲ್ಲೆಯಲ್ಲಿ ನೂತನರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿರುವ ಹರೀಶ ಗಾಂವಕರರವರನ್ನು “ಅಭಿಜಾತ ಅಧಿಕಾರಿ”ಯೆಂದು, ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟರವರನ್ನು “ಯಶೋಮುಖಿ ಕ್ಷೇತ್ರ ಶಿಕ್ಷಣಾಧಿಕಾರಿ”ಯೆಂತಲೂ ಉಪಾಧಿಯನ್ನಿತ್ತು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಎ. ಜಿ. ಮುಲ್ಲಾ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಹಾಗೂ “ಎದೆಯದನಿ” ಕೃತಿಯ ಪ್ರಧಾನ ಸಂಪಾದಕರಾದ, ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿಯವರನ್ನು ಸೊರಬ-ಶಿವಮೊಗ್ಗದ ಎ. ಜಿ. ಮುಲ್ಲಾ ಅಭಿಮಾನಿಗಳು ಟೈಟಾನ್ ಕೈಗಡಿಯಾರವನ್ನು ನೀಡಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ-ಅಭಿನಂದಿಸಿದರು.

ಅಭಿಜಾತ ಪ್ರತಿಭೆ ಗೌತಮ ಗಾಂವಕಾರರ ಸಾಹಿತ್ಯ ನಾಡಿನ ಆಸ್ತಿ
“ಗೌತಮ ಗೌರವ”ದಲ್ಲಿ ಕಥೆಗಾರ ಡಾ. ಗುಂದಿ ಅಭಿಮತ

ಕುಮಟಾ : ಬಹುಭಾಷಾ ವಿದ್ವಾಂಸ, ಅಪ್ರತಿಮ ಚಿಂತಕ, ತೂಕಬದ್ಧ ಮಾತುಗಾರ, ಪ್ರಬುದ್ಧ ಬರಹಗಾರ, ಅಂಕೋಲಾದ ನವ ಕರ್ನಾಟಕ ಸಂಘದ ಸಂಸ್ಥಾಪಕ – ಗೌರವಾಧ್ಯಕ್ಷರಾದ ಗೌತಮ ಗಾಂವಕಾರರ ಸಾಹಿತ್ಯವು ನಾಡಿನ ಆಸ್ತಿ ಎಂದು ಕಥೆಗಾರ – ವಿಶ್ರಾಂತ ಪ್ರಾಚಾರ್ಯ ಡಾ. ರಾಮಕೃಷ್ಣ ಗುಂದಿಯವರು ಹೇಳಿದರು.

ಅವರು ತೊರ್ಕೆಯ ನಾಡವರ ಸಂಘ, ಅಂಕೋಲಾದ ನವ ಕರ್ನಾಟಕ ಸಂಘ ಹಾಗೂ ಕನ್ನಡ ಚಂದ್ರಮದ ಸಂಯುಕ್ತ ಆಶ್ರಯದಲ್ಲಿ ಗೌತಮ ಗಾಂವಕಾರರ ಮನೆಯಂಗಳದಲ್ಲಿ ಆಯೋಜಿಸಿದ “ಗೌತಮ ಗೌರವ” ಕಾರ್ಯಕ್ರಮದಲ್ಲಿ ನವ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿಯವರ “ಗೀತಗೌತಮ” ಗೀತಾಭಿನಂದನ – ಭಾವಾನುಸ್ಪಂದನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಗೌತಮ ಗಾಂವಕಾರರು ರಚಿಸಿರುವ ಅಪಾರವಾದ ಸಾಹಿತ್ಯವು ಪ್ರಕಟಗೊಳ್ಳದೇ ಹಾಗೆಯೇ ಉಳಿದುಕೊಂಡಿರುವುದಕ್ಕೆ ವಿಷಾದವನ್ನು ವ್ಯಕ್ತಪಡಿಸಿ, ಗೌತಮರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದಲ್ಲಿ ನಾಡಿನ ಸಾಹಿತ್ಯಾಭ್ಯಾಸಿಗಳಿಗೆ ಪ್ರಯೋಜನವಾಗುತ್ತದೆಯೆಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ ಗಾಂವಕರರವರು ಗೌತಮ ಗಾಂವಕಾರರವರ ಅಧ್ಯಯನ, ಅಧ್ಯಾಪನ, ವಿದ್ವತ್‌ಪೂರ್ಣವಾದ ವ್ಯಕ್ತಿತ್ವವು ಅನನ್ಯವಾಗಿದೆಯೆಂದರಲ್ಲದೇ ಗೌತಮರೊಂದಿಗಿನ ತಮ್ಮ ಒಡನಾಟದ ಮಧುರಕ್ಷಣಗಳನ್ನು ನೆನಪಿಸಿಕೊಂಡು, ಗೌತಮರ ಸಮಗ್ರ ಸಾಹಿತ್ಯವು ಪ್ರಕಟವಾಗಬೇಕೆಂಬ ಗುಂದಿಯವರ ಅಭಿಪ್ರಾಯಕ್ಕೆ ಸಹಮತವನ್ನು ವ್ಯಕ್ತಪಡಿಸಿ, ಅದಕ್ಕೆ ತಮ್ಮ ಬೆಂಬಲವಿದೆಯೆoದರು.

“ಗೀತಗೌತಮ”ದ ಕೃತಿಕಾರ – ನವ ಕರ್ನಾಟಕ ಸಂಘದ ಅಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಮಾತನಾಡುತ್ತಾ, “ಗೌತಮ ಗಾಂವಕಾರರು ನಾಡು ಕಂಡ ಬಹುಮುಖ ಅಭಿಜಾತ ಪ್ರತಿಭೆಯಾಗಿದ್ದು, ತಮ್ಮ ಸಜ್ಜನಿಕೆಯ ಒಲವು-ನಿಲುವುಗಳಿಂದ ಘನ ವ್ಯಕ್ತಿತ್ವವನ್ನು ಸಿದ್ಧಿಸಿಕೊಂಡಿದ್ದು, ಅವರನ್ನು ಗೌರವಿಸಿರುವುದು ಸಾಂಸ್ಕೃತಿಕ ಬದ್ಧತೆಯೆಂದರು.

ಇದೇ ಸಂದರ್ಭದಲ್ಲಿ ಗೌತಮ ಗಾಂವಕಾರರವರಿಗೆ “ಸುಬೋಧ ಗೌತಮ”ವೆಂಬ ಉಪಾಧಿಯನ್ನಿತ್ತು, ಮೈಸೂರು ಪೇಟವನ್ನು ತೊಡಿಸಿ, ಸ್ಮರಣಿಕೆ, ಫಲ-ತಾಂಬೂಲ-ಫಲಕ-ಶಾಲುಗಳೊAದಿಗೆ ಆಪ್ತವಾಗಿ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನ್ನಾಡಿದ ಗೌತಮ ಗಾಂವಕಾರರು, “ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೊದಲಿಗೆ ಗಮನಿಸಬೇಕು. ದುರ್ಬಲನಿಗೆ ಧ್ವನಿಯಾಗಬೇಕು, ಡಂಬಾಚಾರರಹಿತವಾಗಿ ಬಾಳಬೇಕು. ಆತ್ಮಶ್ಲಾಘನೆಯು ಸರ್ವಥಾ ಸಲ್ಲ. ಮೌಲಿಕವಾಗಿ ಬಾಳಬೇಕು. ಬದುಕನ್ನು ಪ್ರೀತಿಸಬೇಕು. ಮಾತೃನೆಲವನ್ನು-ತಮ್ಮವರನ್ನು ಅಪಾರವಾಗಿ ಪ್ರೀತಿಸುತ್ತಿದ್ದುದರಿಂದಲೇ ಊರಿನಲ್ಲಿಯೇ ನೆಲೆಸಿದ್ದೇನೆ. ಬೇಕಾದ ಕಾರ್ಯ ಮಾಡುವವರನ್ನು ಬೆಂಬಲಿಸಿದ್ದೇನೆ. ಬೇಡದ್ದನ್ನು ಮಾಡುವವರನ್ನು ಯಾರೂ ಬೆಂಬಲಿಸಬಾರದು, ಗೌತಮ ಗೌರವವು ಶತಾಯುಷಿಯಾಗಬೇಕೆಂಬ ಆಸೆಯನ್ನು ಹುಟ್ಟಿಸಿದೆ” ಎಂದು ನುಡಿದರು.

ಕನ್ನಡ ಚಂದ್ರಮದ ಅಧ್ಯಕ್ಷ – ಪ್ರಕಾಶಕ ಜಗದೀಶ ನಾಯಕ, ಹೊಸ್ಕೇರಿ ಸ್ವಾಗತಿಸಿ – ವಂದಿಸಿದರು. ಕಮಲಾ ಗಾಂವಕರ, ವಿಶಾಲ ನಾಯಕ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button