Uttara Kannada
Trending

ಅರಣ್ಯ ಇಲಾಖೆ ಸಿಬ್ಬಂದಿ ವರ್ತನೆ: ಪ್ರಶ್ನಾವಳಿ ಪ್ರಕಟಿಸಿ ಉತ್ತರಕ್ಕೆ ಆಗ್ರಹಿಸಿದ ಅರಣ್ಯ ಹಕ್ಕು ಹೋರಾಟಗಾರ ವೇದಿಕೆ

ಯಲ್ಲಾಪುರ: ಇತ್ತೀಚಿನ ಅರಣ್ಯ ಸಿಬ್ಬಂದಿಗಳ ವರ್ತನೆಯು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದ್ದು, ಅರಣ್ಯ ಸಿಬ್ಬಂದಿಗಳ ವರ್ತನೆಯಿಂದ ಸಾರ್ವಜನಿಕವಾಗಿ ಉಂಟಾದ ಗೊಂದಲವನ್ನು ನಿವಾರಿಸುವ ದಿಶೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಬಹಿರಂಗವಾಗಿ ಪತ್ರ ಬರೆದು, ಪ್ರಮುಖ ಏಳು ಪ್ರಶ್ನಾವಳಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಮುಂದಿನ ಹತ್ತು ದಿನಗಳಲ್ಲಿ ಕಾನೂನಾತ್ಮಕ ಅಂಶದಿಂದ ಪ್ರಶ್ನಾವಳಿಗಳಿಗೆ ಸ್ಪಷ್ಟ ಉತ್ತರವನ್ನು ನೀಡಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಆಗ್ರಹಿಸಿದೆ.

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಅರಣ್ಯವಾಸಿಗಳ ಸಾಗುವಳಿ ಹಕ್ಕು, ವಹಿವಾಟು ಮತ್ತು ಅರಣ್ಯ ಸಿಬ್ಬಂದಿಗಳು ಅರಣ್ಯ ವಾಸಿಗಳಿಗೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ, ಕಿರುಕುಳ, ಅರಣ್ಯ ವಾಸಿಗಳ ಹಕ್ಕಿಗೆ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಅರಣ್ಯ ಸಿಬ್ಬಂದಿಗಳ ವರ್ತನೆಯು ಸಂಶಯಾಸ್ಪದವಾಗಿದೆ. ಇದರಿಂದ ಸಾರ್ವಜನಿಕವಾಗಿ ವ್ಯಾಪಕವಾದ ಚರ್ಚೆಗೆ ಆಸ್ಪದವಾಗಿದೆ. ಹೀಗಿದ್ದಾಗ್ಯೂ ಅರಣ್ಯ ಅಧಿಕಾರಿಗಳು ಸ್ಪಷ್ಟನೆ ಹಾಗೂ ಸ್ಪಷ್ಟೀಕರಣ ನೀಡದಿರುವದರಿಂದ, ಹೋರಾಟಗಾರರ ವೇದಿಕೆಯು ಅರಣ್ಯ ಅಧಿಕಾರಿಗಳಿಗೆ ಸ್ಪಷ್ಟೀಕರಣ ಬಯಸಿ ಇಂದು ಸ್ಥಳೀಯ ಯಲ್ಲಾಪುರ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಇವರಿಗೆ ಪ್ರಮುಖ ಏಳು ಪ್ರಶ್ನಾವಳಿಯ ಬಹಿರಂಗ ಪತ್ರವನ್ನು ಹಸ್ತಾಂತರಿಸಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಇಲಾಖೆಗೆ ಪ್ರಶ್ನಿಸಲಾದ ಪ್ರಶ್ನಾವಳಿ:

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ವಾಸಿಗಳ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗೆ ಅರಣ್ಯ ಸಿಬ್ಬಂದಿಗಳು ಆತಂಕ ಪಡಿಸಲು ಅವಕಾಶ ಇದೆಯೋ ಹೇಗೇ?, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ, ಜಿಪಿಎಸ್ ಸರ್ವೇ ಆಗಿ ಕೃಷಿ ಚಟುವಟಿಕೆಗೆ ಪೂರಕವಾದ ಹಾಗೂ ಅರಣ್ಯವಾಸಿಯ ವಾಸ್ತವ್ಯದ ಇಮಾರತ್ತು ದುರಸ್ಥಿ ವ ಬದಲಾವಣೆಗೆ ಅಥವಾ ಸ್ಥಳೀಯ ಸಂಸ್ಥೆಯಲ್ಲಿ ಕಟ್ಟಡ ನಂಬರ ಇರುವ ಜಿರ್ಣಾವ್ಯಸ್ಥೆ ಕಟ್ಟಡಕ್ಕೆ ಪುನರ್ ನಿರ್ಮಾಣಕ್ಕೆ ಅವಕಾಶ ಇದೆಯೋ ಹೇಗೆ?, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿಗೊಳಿಸುತ್ತಿರುವ ಸಾಗುವಳಿಗೆಗೆ ಆತಂಕಗೊಳಿಸುವ ಅರಣ್ಯ ಸಿಬ್ಬಂದಿಗಳ `ಕೃತ್ಯ’ ಕಾನೂನು ಬಾಹಿರ ಕೃತ್ಯವ್ಯವಾಗುವುದೋ ಹೇಗೆ?, ಎಂದು ಪ್ರಶ್ನಿಸಿದ್ದಾರೆ.

ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಕ್ಷೇತ್ರಕ್ಕೆ ಕೋವೀಡ್ ಸಾಂಕ್ರಾಮಿಕ ರೋಗ ನಿಯಂತ್ರಣ, ನಿಯಮ ಮತ್ತು ನೀತಿ ಜಾರಿಯಲ್ಲಿ ಇರುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮುಖಕವಚ(ಮಾಸ್ಕ) ಧರಿಸದೇ ಪ್ರವೇಶ ಮಾಡಿದ್ದಲ್ಲಿ ಅಪರಾಧ ಆಗುವುದೋ ಹೇಗೆ?, ಅರಣ್ಯ ಕಾಯಿದೆಯಲ್ಲಿ ಜನಸಾಮಾನ್ಯರಿಗಾಗಲಿ ಅಥವಾ ಅರಣ್ಯ ಗುನ್ನೆಯಲ್ಲಿ ಅಪರಾಧಿಸಲ್ಪಟ್ಟ ಆರೋಪಿತನ ಮೇಲೆ ಆರೋಪಿತನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಅವಕಾಶ ವಿದೆಯೋ?, ಅರಣ್ಯ ಕಾಯ್ದೆಯಲ್ಲಿ ಅರಣ್ಯ ಗುನ್ನೆಗೆ ಸಂಬಂಧಿಸಿ ಖಾಸಗಿ ವ್ಯಕ್ತಿಯ ಕಬಜಾ ಭೋಗ್ವಟೆಯಲ್ಲಿ ಇರುವ ಸ್ಥಳಕ್ಕೆ ಶೋಧಕ್ಕಾಗಲಿ, ತನಿಖೆಗಾಗಲಿ, ಬಂಧಿಸಲಾಗಲಿ, ನ್ಯಾಯಾಲಯದ ಪರವಾನಗಿ ಇಲ್ಲದೇ ಪ್ರವೇಶಿಸಲು ಅವಕಾಶ ವಿದೆಯೋ?, ಭಾರತೀಯ ದಂಡಸಂಹಿತೆಯ ಕಲಂ ಅಡಿಯಲ್ಲಿ ಅರಣ್ಯ ಸಿಬ್ಬಂದಿಗಳು ಪ್ರಥಮ ವರ್ತಮಾನ ದಾಖಲಿಸಲು ಬರುತ್ತದೆಯೋ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button