Uttara Kannada
Trending

ಅಂಕೋಲಾ ಪುರಸಭೆ ನಾರಿಮಣಿಯರ ಪಾಲು ?

ಶಾಂತಲಾ ನಾಡಕರ್ಣಿ ಅಧ್ಯಕ್ಷೆ ?
ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೆಸಾರ್ಟ ರಂಗು ! ?

ಅಂಕೋಲಾ : ಸ್ಥಳೀಯ ಪುರಸಭೆಯ 9ನೇ ಅವಧಿಗೆ ಬಿಜೆಪಿಯ ಶಾಂತಲಾ ಅರುಣ ನಾಡಕರ್ಣಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾದಂತಿದ್ದು, ಪಕ್ಷೇತರ ಸದಸ್ಯೆಯಾದ ಹನುಮಟ್ಟಾದ ರೇಖಾ ಗಾಂವಕರ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಉಪಾಧ್ಯಕ್ಷ ಹುದ್ದೆ ಅಲಂಕರಿಸಲು ಸಿದ್ದತೆ ನಡೆಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿ ಬರುತ್ತಿದ್ದು, ಭಾನುವಾರ ನಡೆಯಲಿರುವ ಚುನಾವಣೆ ಮತ್ತು ತದನಂತರದ ಫಲಿತಾಂಶದಿಂದ ಅಧಿಕೃತವಾಗಿ ತಿಳಿದು ಬರಬೇಕಿದೆ.

ಮಹಿಳಾ ನಾಯಕಿ ಮತ್ತು ಶಾಸಕಿಯಾಗಿರುವ ರೂಪಾಲಿ ನಾಯ್ಕ ಮತ್ತು ಬಿಜೆಪಿಯ ಚತುರ ನಡೆಯಿಂದ ಈ ಸಾಧ್ಯತೆಗಳು ಹೆಚ್ಚಿದ್ದು, ಪುರಸಭೆಯ ಆಡಳಿತದ ಚುಕ್ಕಾಣಿ ಬಹುತೇಕ ನಾರಿಮಣಿಗಳ ಪಾಲಾಗಲಿದೆ. ಒಂದೊಮ್ಮೆ ಕಾಂಗ್ರೆಸ್‍ನವರು ಅಧ್ಯಕ್ಷರಾದರೆ ಮಾತ್ರ ಅಧ್ಯಕ್ಷಗಾದಿ ಪುರಷರ ಅಧಿಪತ್ಯಕ್ಕೆ ಒಳಪಡಲಿದೆ ಆದರೆ ಈ ಸಾಧ್ಯತೆಗಳು ತೀರಾ ವಿರಳ ಎನ್ನುವುದು ರಾಜಕೀಯ ಚಿಂತಕರ ವಿಶ್ಲೇಷಣೆಯಾಗಿದೆ.

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾದ 10 ಸದಸ್ಯರಿದ್ದು, ಬಿಜೆಪಿ 8 ಸ್ಥಾನ ಗಳಿಸಿದ್ದರೆ, 5 ಜನ ಪಕ್ಷೇತರರು ಆಯ್ಕೆಯಾಗಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು 13 ಸದಸ್ಯ ಬಲ ಬೇಕಿ ದ್ದು, ಎರಡು ರಾಷ್ಟ್ರೀಯ ಪಕ್ಷಗಳಿಗೆ ಅಂತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಪಕ್ಷೇತರರ ಒಲುಮೆ ಮತ್ತು ಬೆಂಬಲದ ಮೇಲೆಯೇ ಹೆಚ್ಚಿನ ಅವಲಂಭನೆಯಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೆ ಅಧಿಕಾರ ದೊರೆ ಯುವುದು ಕಷ್ಟಸಾಧ್ಯ ಎನ್ನುವ ಮಾತು ಕೇಳಿ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು, ಮತದಾನದ ಹಕ್ಕುಳ್ಳ ಸ್ಥಳೀಯ ಶಾಸಕಿ ಮತ್ತು ಸಂಸದರು ಬಿಜೆಪಿಗರೇ ಆಗಿರುವುದು, ಅಧಿಕಾರ ಕಮಲ ಪಾಳಯದ ಪಾಲಾಗುವ ಬಹುತೇಕ ಸಾಧ್ಯತೆಗಳೇ ಹೆಚ್ಚಿವೆ.

ರೆಸಾರ್ಟ ರಾಜಕೀಯ ರಂಗು : ಜಿಲ್ಲೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರದ ಗದ್ದುಗೆ ಏರಲು ನಾನಾ ರಾಜಕೀಯ ತಂತ್ರಗಾರಿಕೆ ಮುಂದುವರೆಸಿರುವ ಕೆಲವರು, ತಮ್ಮ ಪಕ್ಷ ಸಂಘಟನೆ, ಚರ್ಚೆ,ಸದಸ್ಯರ ಒಗ್ಗಟ್ಟು ಪ್ರದರ್ಶನ, ಮತ್ತಿತರ ಕಾರಣಗಳಿಂದ ಕೊನೆಕ್ಷಣದವರೆಗೂ ಸದಸ್ಯರೆಲ್ಲರನ್ನು ಒಂದೆಡೆ ಕೂಡಿಸುವ ಪ್ರಯತ್ನ ಮಾಡಿದಂತಿದ್ದು, ಪಕ್ಕದ ರಾಜ್ಯದ ಪ್ರಮುಖ ಐಷಾರಾಮಿ ಹೋಟೇಲೊಂದರ 20ಕ್ಕೂ ಹೆಚ್ಚು, ಕೊಠಡಿಗ ಳನ್ನು ಮುಂಗಡವಾಗಿ ಕಾಯ್ದಿರಿಸಿ ಅಲ್ಲಿಯೇ ತನ್ನೆಲ್ಲಾ ಸದಸ್ಯರನ್ನು ಮತ್ತು ಪಕ್ಷಕ್ಕೆ ಬಲ ತುಂಬಬಹುದಾದ ಇತರರನ್ನು ಕರೆತರುವ ಯೋಜನೆ ರೂಪಿಸಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿ ಬರುತ್ತಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೆಸಾರ್ಟ್ ರಾಜಕಾರಣದ ರಂಗು ಏರಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button