ಇಂಡಿಯಾ ಬುಕ್ ಆಫ್‌ ರೆಕಾರ್ಡ್ ಗೆ ಶಿರಸಿ ಕಲಾವಿದನ ಕಲಾಕೃತಿ ಆಯ್ಕೆ

ಶಿರಸಿ: ಕೇವಲ ಮೂರು ನಿಮಿಷದಲ್ಲಿ ನೂರು ಚಿತ್ರಗಳನ್ನು ಬರೆದು, ಸಂಯೋಜಿಸಿ ಡಾ.ರಾಜಕುಮಾರ್ ಫೋಟೊವನ್ನು ತಯಾರಿಸಿದ್ದಾರೆ. ಹೌದು,ಚಿತ್ರಕಲೆಯ ಮೂಲಕ ಹೆಸರು ಮಾಡಿದ ಕೌಶಿಕ್ ಕರಷ್ಣ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ. ಈತನ ಸಂಯೋಜಿತ ಸಂಯೋಜಿತ ಕಲಾಕೃತಿಯು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿದೆ. ಈ ಮೂಲಕ ಚಿತ್ರ ಕಲಾವಿದರಲ್ಲಿ ಈ ದಾಖಲೆ ಬರೆದ ಜಿಲ್ಲೆಯ ಮೊದಲ ವ್ಯಕ್ತಿ ಎಂಬ ಖ್ಯಾತಿ ಕೌಶಿಕ್ ಕೃಷ್ಣ ಹೆಗಡೆಯದು.
ಕಳೆದ ಆಗಸ್ಟ್ ನಲ್ಲಿ ಇವರು ಚಿತ್ರ ರಚಿಸಿ ಕಳಿಸಿಕೊಟ್ಟಿದ್ದರು. ಅದು ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಲು ಆಯ್ಕೆಗೊಂಡು ಸೆ. 19 ರಂದು ಈ ಕುರಿತಾದ ಪ್ರಮಾಣಪತ್ರ ಸಿದ್ದವಾಗಿ ಈಗ ಕೌಶಿಕ್ ಅವರ ಕೈ ಸೇರಿದೆ. ಈ ಚಿತ್ರ ಸಾಧನೆಯು 2021 ರ ಜನವರಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಮುದ್ರಿತವಾಗಲಿದೆ ಎಂದು ತಿಳಿಸಲಾಗಿದೆ.

ಶಿರಸಿ ತಾಲೂಕಿನ ಕೌಶಿಕ್ ಹೆಗಡೆ ಗಡಿಹಳ್ಳಿಯವರಾಗಿದ್ದು ದೈವೀದತ್ತವಾಗಿ ಬಂದ ಕಲಾ ಪ್ರತಿಭೆಯನ್ನು ಬೆಳೆಸಿಕೊಂಡು ಮುಂದುವರೆಯುವ ಆಸಕ್ತಿಯಿಂದ ಐಬಿವಿಎ ಕೋರ್ಸ್ ಪೂರೈಸಿ ಕಳೆದ 8 ವರ್ಷಗಳಿಂದ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರಾಗಿದ್ದಾರೆ. ಲ್ಯಾಂಡ್ ಸ್ಟೇಪ್, ಎಬ್ಬಾಕ್ಸ್ ಪೇಂಟಿಂಗ್, ವಾಟರ್ ಕಲರ್ ಮತ್ತು ತೈಲವರ್ಣ ಬಳಕೆ, ಕಲರ್ ಪೆನ್ಸಿಲ್, ಪೆನ್ಸಿಲ್ ಶೇಡಿಂಗ್‍ನಿಂದ ಚಿತ್ರಗಳನ್ನು ರಚಿಸುತ್ತ ಬಂದಿದ್ದು ಪೋರ್ಟ್ರೇಟ್ ಬರೆಯುವಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರ ಅನೇಕ ಕಲಾಕೃತಿಗಳು ನಾಡಿನ ಗಮನ ಸೆಳೆದಿವೆ.

ತಮ್ಮ ಕಲಾಕೃತಿಗಳ ಮೂಲಕ ಪರಿಚಿತರಾದ ಇವರು ನಾಡಿನ ಉಡುಪಿ, ಮಂಗಳೂರು, ಬೆಂಗಳೂರು, ತುಮಕೂರು, ಹಂಪೆ ಇತ್ಯಾದಿಗಳೆಡೆಯಲ್ಲದೆ ನೆರೆಯ ರಾಜ್ಯ ಗೋವಾ, ಮಹಾರಾಷ್ಟ್ರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ತರಬೇತಿ ಶಿಬಿರಗಳಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.

ಶಿರಸಿಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರಶಸ್ತಿ ಪಡೆದಿರುವ ಇವರ ಕಲಾಕೃತಿಗಳು ತುಮಕೂರು ಕಲಾ ಪ್ರಶಸ್ತಿ, ಕೆಮೆಲಿನ್ ಕಲಾ ಪ್ರಶಸ್ತಿ, ಅಯೋಧ್ಯಾ ಕಲಾ ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಗಮನಾರ್ಹ ಸಂಗತಿಯಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

Exit mobile version