Big News
Trending

ಸುಡುತ್ತಿರುವ ಕೆಂಡದ ಮೇಲೆ ನಡೆದಾಡುವ ಭಕ್ತರು: ಹಾಲುಹಬ್ಬದ ವಿಶಿಷ್ಠತೆ ನೋಡಿ

ಸಿದ್ದಾಪುರ: ರೈತರು ಬೆಳೆದ ಹೊಸ ಬೆಳೆಗಳನ್ನ ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರಿತಿಯ ಹಾಲಬ್ಬವೊಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಟ್ಟೆಕೈ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದು ಮಂಗಳವಾರ ಸಂಪನ್ನಗೊoಡಿತು. ಹೌದು, ಹೊಸಕ್ಕಿ ಹಬ್ಬ ಇಲ್ಲವೇ ಹಾಲಬ್ಬ ಎಂದೇ ಕರೆಸಿಕೊಳ್ಳುವ ಈ ಹಬ್ಬವು ಸಿದ್ದಾಪುರದ ಕಟ್ಟೆಕೈ ಗ್ರಾಮದಲ್ಲಿ ಆಚರಿಸುವ ವಿಶಿಷ್ಟ ಹಬ್ಬ. ರೈತಾಪಿ ವರ್ಗದವರೇ ಹೆಚ್ಚಾಗಿ ಇರುವ ಗ್ರಾಮದಲ್ಲಿ ತಾವು ಬೆಳೆದ ಬೆಳೆಗಳನ್ನು ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ತಲೆ ತಲಾಂತರಗಳಿoದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಅದರಂತೆ ಈ ಭಾರಿಯೂ ಭಾನುವಾರದಿಂದ ಮೂರುದಿನಗಳ ಕಾಲ ಹಬ್ಬ ಅದ್ದೂರಿಯಾಗಿ ನಡೆಯಿತು. ಮೊದಲ ದಿನ ಮಹಾಸತಿ ದೇವಾಲಯದಿಂದ ದೇವರನ್ನು ಹುಲಿದೇವರ ಮನೆಗೆ ತಂದು ಪೂಜೆ ಸಲ್ಲಿಸಿದ ಗ್ರಾಮಸ್ಥರು, ತಾವು ಬೆಳೆದ ಹೊಸ ಬೆಳೆಗಳನ್ನು ದೇವರಿಗೆ ನೈವೇದ್ಯ ಮಾಡಿದ್ರು. ಎರಡನೇ ದಿನ ಬೃಹ್ಮದೇವರ ಕಾನಿನಲ್ಲಿ ಕೆಂಡದ ಸೇವೆಗೆ ಸಿದ್ದತೆ ಮಾಡಿಕೊಂಡ ಗ್ರಾಮಸ್ಥರು ಸಂಜೆ ಹೊತ್ತಿಗೆ ದೇವರನ್ನು ಕಾನಿಗೆ ಒಯ್ದು ಜಾಗರಣ ನಡೆಸಿದ್ರು. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಮೂರನೇ ದಿನವಾದ ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ಬಳಿಕ ದೇವರ ಪಾಲಿಕೆಯನ್ನು ಹೊತ್ತು ಸಿದ್ದಗೊಂಡಿದ್ದ ಕೆಂಡದ ರಾಶಿಯ ಸುತ್ತ ಸುತ್ತುವರಿದು ಕೆಂಡ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೇರೆದರು. ಇನ್ನು ಕೆಂಡಹಾಯುವುದನ್ನು ಮತ್ತು ವಿಶಿಷ್ಟ ಹಾಲಬ್ಬ ನೋಡುವುದಕ್ಕಾಗಿಯೇ ಗ್ರಾಮಸ್ಥರಲ್ಲದೆ ಅಕ್ಕಪಕ್ಕದ ಊರಿನಿಂದ ನೂರಾರು ಮಂದಿ ಆಗಮಿಸಿದ್ದರು. ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಹಬ್ಬ ರೈತ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.


ವಿಸ್ಮಯ ನ್ಯೂಸ್, ಸಿದ್ದಾಪುರ

Back to top button