Important
Trending

ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಪಲ್ಟಿ : ಓರ್ವ ಸಾವು

ಅಂಕೋಲಾ: ಅನಂತಪುರoನಿoದ ಗೋವಾಕ್ಕೆ ಹುಬ್ಬಳ್ಳಿ-ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಅಂಕೋಲಾ ತಾಲೂಕಿನ ಕಂಚಿನಬಾಗಿಲ ಸಮೀಪ ಶನಿವಾರ ಮುಂಜಾನೆ ಅಪಘಾತಕ್ಕೀಡಾಗಿದ್ದು, ಈ ಭೀಕರ ದುರಂತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸುಮಾರು 36 ಪ್ರಯಾಣಿಕರಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬಸ್ ಜಖಂಗೊoಡಿದೆ. ಕೊಪ್ಪಳ ಮೂಲದ ಶರಣಪ್ಪ ಕಲ್ಲಮಠ (೪೨) ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಒಟ್ಟು ಸುಮಾರು 20 ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ.

ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇನ್ನು ಕೆಲವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಬಸ್ ಚಾಲಕನಿಗೂ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಅಂಕೋಲಾ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಾಹನದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ರಾಷ್ಟ್ರೀಯ ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು ಹಾಗೂ ಅಂಕೋಲಾ ಪೊಲೀಸರು ಸ್ಥಳದಲ್ಲಿ ಹಾಜರಿದ್ದು , ಸಂಚಾರ ನಿಯಂತ್ರಣ ಮತ್ತು ಆ ಬಳಿಕ ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.

ಅಪಘಾತದ ವೇಳೆ ಪುಟಾಣಿ ಬಾಲಕಿಯಿದ್ದ ಕುಟುಂಬವೊoದನ್ನು ಲಕ್ಷ್ಮೇಶ್ವರದ ಯುವ ಉದ್ಯಮಿ ನಾರಾಯಣ ಡಿ. ನಾಯಕ ತಮ್ಮ ಖಾಸಗಿ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದರು. ಸ್ಥಳೀಯರ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೊದಲು ರಸ್ತೆ ಎಡಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಬಲಭಾಗಕ್ಕೆ ಪಲ್ಟಿಯಾಗಿದೆ.

ಘಟನಾ ಸ್ಥಳಕ್ಕೆ ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಹಾಗೂ ಸಂಚಾರ ವಿಭಾಗದ ಪಿಎಸ್‌ಐ ಸುನೀಲ್ ಹುಲ್ಲೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಂಡರು. ಪಿ ಎಸ್ ಐ ಲಲಿತಾ ರಜಪೂತ್ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಕಲೆಹಾಕಿದರು.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button