ತಾಳೇಗರಿ ಆಧಾರದ ಮೇಲೆ ಭವಿಷ್ಯ ನುಡಿಯುವ ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಕೊರೊನಾ ಅಟ್ಟಹಾಸದ ಬಗ್ಗೆ ಹಿಂದೆಯೇ ಭವಿಷ್ಯ ನುಡಿದಿದ್ದರು. ಸಾಮಾನ್ಯವಾಗಿ ಯುಗಾದಿಯ ವೇಳೆಯೂ ಭವಿಷ್ಯ ನುಡಿಯುವ ಕೋಡಿಶ್ರೀಗಳು ಈ ಬಾರಿ, ಹಬ್ಬಕ್ಕೆ ಮುನ್ನವೇ ಆಪತ್ತು ಕಾದಿದೆ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದ್ದರು. ಕಳೆದ ಆಗಸ್ಟ್ 2019ರಲ್ಲಿ “ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ” ಎಂದು ಕೋಡಿ ಶ್ರೀಗಳು ಹೇಳಿದ್ದರು ಮತ್ತು ಈ ವರ್ಷದ ಫೆಬ್ರವರಿಯಲ್ಲೂ ಅದನ್ನು ಪುನರುಚ್ಚಿಸಿದ್ದರು. ಕಳೆದ ಫೆಬ್ರವರಿ ಎಂಟರಂದು ಗದಗ್ ನಲ್ಲಿ ಮಾತನಾಡುತ್ತಿದ್ದ ಕೋಡಿ ಶ್ರೀಗಳು, “ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಮೂಲಕ, ಪ್ರಕೃತಿಯ ಮುಂದೆ ಎಲ್ಲರೂ ಹುಲು ಮಾನವರು ಎನ್ನುವುದು ಸಾಬೀತಾಗುತ್ತದೆ. ಪ್ರಕೃತಿ ದತ್ತವಾದ ಕಾಯಿಲೆಗಳು ಮಾನವ ಸಮಾಜವನ್ನು ಆವರಿಸುತ್ತದೆ” ಎಂದು ಕೋಡಿ ಶ್ರೀಗಳು ಹೇಳಿದ್ದರು. ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ. ಎದುರಾಗುವ ಕಾಯಿಲೆ ಬರೀ ಮನುಷ್ಯನಿಗೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಜಡತ್ವದ ವಸ್ತುಗಳಿಗೂ ಆವರಿಸಬಹುದು. ಔಷಧಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ” ಎಂದು ಕೋಡಿ ಶ್ರೀಗಳು ನುಡಿದಿದ್ದರು.
ಈಗ ಇಡೀ ವಿಶ್ವಕ್ಕೆ ಮಾರಣಾಂತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಗೆ ಇದುವರೆಗೂ ಯಾರಿಗೂ ಲಸಿಕೆಯನ್ನು ಕಂಡು ಹಿಡಿಯಲಾಗಲಿಲ್ಲ. ಎಲ್ಲವೂ ಟೆಸ್ಟಿಂಗ್ ಹಂತದಲ್ಲಿ ಇದೆ. “ಸಹಸ್ರ ಸಹಸ್ರ ವರುಷಗಳಿಂದ ಋಷಿ, ಮುನಿ, ಯೋಗಿಗಳು ಜಪತಪದಿಂದ ರಕ್ಷಣೆ ಮಾಡುತ್ತಾ ಬಂದಿರುವ ಭೂಮಿ ನಮ್ಮದು. ಹೀಗಾಗಿ ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ” ಎಂದೂ ಕೋಡಿ ಶ್ರೀಗಳು ಹೇಳಿದ್ದಾರೆ.