‘ಅಪರೂಪದ ಮತ್ತು ವಿನಾಶೋನ್ಮುಖ ಔಷಧಿ ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಬಳಕೆ ಸ್ಥಳೀಯರದ್ದೇ ಕರ್ತವ್ಯ’ ವಾಗಿದೆಯೆಂದು ಟಿ. ಡಿ. ವಿಶ್ವ ವಿದ್ಯಾಲಯದ ಹಿರಿಯ ವಿಜ್ಞಾನಿ ಹಾಗೂ ಬರಹಗಾರ ಬಿ ಎಸ್ ಸೋಮಶೇಖರ್ ತಿಳಿಸಿದರು. ಅವರು ಕಾಸರಕೋಡಿನ ಸ್ನೇಹಕುಂಜದಲ್ಲಿ ನಡೆದ ಔಷಧಿ ಸಸ್ಯ ಪ್ರಭೇದಗಳ ಸಂರಕ್ಷಣೆ, ಮೌಲ್ಯವರ್ಧನೆ ಮತ್ತು ನೆಟ್ಟು ಬೆಳೆಸುವಿಕೆಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ತರಬೇತುದಾರರಾಗಿ ಪಾಲ್ಗೊಂಡು ಮಾತನಾಡುತ್ತ ಈ ವಿಷಯ ತಿಳಿಸಿದರು.
ಅನಾದಿಯಿಂದಲೂ ಚಿಕಿತ್ಸಕ, ಆರೋಗ್ಯವರ್ಧಕ ಮತ್ತು ರೋಗನಿರೋಧಕ ಗುಣಗಳನ್ನು ಹೊಂದಿರುವ ಅನೇಕ ಔಷಧಿ ಸಸ್ಯಗಳ ಬಳಕೆಯ ಬಗ್ಗೆ ಉಲ್ಲೇಖಗಳಿವೆ. ಆದರೆ ಸಾವಿರಾರು ಔಷಧಿ ಸಸ್ಯಗಳನ್ನು ನಾವು ಗುರುತಿಸಿಲ್ಲ ಮತು ಅದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿಲ್ಲ. ಹಾಗಾಗಿ ನೈಸರ್ಗಿಕವಾಗಿ ಸಿಗುವ ಔಷಧಿ ಸಸ್ಯಗಳ ಸುಸ್ಥಿರ ಸಂಗ್ರಹ, ಸಮರ್ಪಕ ಬಳಕೆ ಮತ್ತು ರಚನಾತ್ಮಕ ಮಾರಾಟ ವ್ಯವಸ್ಥೆಯ ಅಗತ್ಯ ಇದೆ ಎಂಬುದಾಗಿ ಹೇಳಿದರು.
ನೈಸರ್ಗಿಕವಾಗಿ ಸಿಗುವ ಔಷಧಿ ಸಸ್ಯಗಳ ಸಂಗ್ರಹ, ಅವುಗಳ ಸರಿಯಾದ ಸಂಸ್ಕರಣಾ ಕ್ರಮಗಳು ಮತ್ತು ನ್ಯಾಯಯುತ ಬೆಲೆಗೆ ಅವುಗಳ ಮಾರಾಟ, ತನ್ಮೂಲಕ ಇದೊಂದು ಜೀವನೋಪಾಯದ ಮಾರ್ಗವಾಗುತ್ತದೆ ಎಂದು ಹೇಳಿದರು. ಜೊತೆಗೆ ನೈಸರ್ಗಿಕವಾಗಿ ಸಿಗುವ ಔಷಧಿ ಸಸ್ಯಗಳ ಪಾರಂಪರಿಕ/ಸಾoಪ್ರದಾಯಿಕ ಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಂದೋoದು ತಲೆಮಾರು ಕಳೆದಂತೆ ಇಂತಹ ಬಹಳಷ್ಟು ಜ್ಞಾನ ನಷ್ಟವಾಗಿದೆ. ಆದ್ದರಿಂದ ಅಂತಹ ಜ್ಞಾನದ ನಷ್ಟವಾಗದಂತೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಜುಮ್ಮನಕಾಯಿ, ದಾಸವಾಳ, ಚಿರಾತಕಡ್ಡಿ, ನೆಲಮಾವು, ಕಾಡು ಅರಿಶಿಣ, ನುಗ್ಗೆ ಸೊಪ್ಪು, ದಾಳಿಂಬೆ ಸಿಪ್ಪೆ, ಲಕ್ಕಿ ಸೊಪ್ಪು, ಕಿರೆ ಸೊಪ್ಪು, ಸೊರಲೆ ಸೊಪ್ಪು, ಹೊನಗೊನೆ, ಕೆಸು, ಇಲಿ ಕಿವಿ ಸೊಪ್ಪು, ನೆಲ ಬಸಲೆ, ಮುಂಗರವಳ್ಳಿ, ಕವಳೆ ಕಾಯಿ, ಕೊಡಸ, ಗಣಿಕೆ ಸೊಪ್ಪು, ಆರೋ ರೂಟ್, ಮುರುಗಲು, ಜ್ಯೋತಿಷ್ಮತಿ, ಉಪ್ಪಗೆ, ಗೌರೀ ಹೂವು, ನೆಲ ತೆಂಗು ಮುಂತಾದ ಔಷಧಿ ಸಸ್ಯಗಳ ಉಪಯೋಗಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ನೆಟ್ಟು ಬೆಳೆಸಬೇಕಾದ ಅನಿವಾರ್ಯತೆಯುಳ್ಳ ಹಲವು ಸಸ್ಯಗಳ ಕುರಿತು ಮಾಹಿತಿ, ಬೆಳೆಸುವ ವಿಧಾನ ಮತ್ತು ಮಾರುಕಟ್ಟೆಯ ಲಭ್ಯತೆಯ ಕುರಿತು ಚರ್ಚೆನಡೆಯಿತು.
ನಂತರದಲ್ಲಿ ನಿರ್ಗುಂಡಿ ತೈಲ, ಭೃಂಗರಾಜ ಹಾಗೂ ಬ್ರಾಹ್ಮಿ ತೈಲ ತಯಾರಿಕಾ ವಿಧಾನಗಳನ್ನು ಸ್ನೇಹಕುಂಜದ ತಜ್ಞ ವೈದ್ಯರು ಹಾಗೂ ನರ್ಸಗಳು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ಆರಂಭದಲ್ಲಿ ನರಸಿಂಹ ಹೆಗಡೆ ಮಾತನಾಡಿ ಕರಾವಳಿ ಭಾಗದಲ್ಲಿ ಕಾಂಡ್ಲಾ ಕಾಡುಗಳ ಸಂರಕ್ಷಣೆಯ ಕೆಲಸದ ಕುರಿತು ವಿವರಿಸಿದರು. ಈ ತರಬೇತಿಯು ಸ್ಥಳೀಯ ಸಂಪನ್ಮೂಲ ಆಧಾರಿತ ಅಭಿವೃದ್ಧಿ ಸಾಧಿಸುವ ಪ್ರಯತ್ನಗಳಲ್ಲಿ ಒಂದಾಗಿದೆಯೆoದು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಕಲ್ಕಟ್ಟೆಯ ಶ್ರೀ ದುರ್ಗಾಂಬಾ, ಹರ್ನೀರಿನ ಶ್ರೀ ಮಹಾಸತಿ, ಧಾರೇಶ್ವರದ ಧಾರಾನಾಥ, ಮಾದಿಕೊಟ್ಟಿಗೆಯ ಶ್ರೀ ವೇಂಕಟೇಶ್ವರ, ಹೊರಭಾಗದ ಆನಂದಜ್ಯೋತಿ, ಬಡಗಣಿಯ ಸಮೃದ್ಧಿ ಹಾಗೂ ಗೋಳಿಬೆಟ್ಟದ ಜಟಕೇಶ್ವರ ಸ್ವ. ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಕನ್ಸರ್ನ ಇಂಡಿಯಾ, ಐಎಫ್‌ಎಚ್‌ಡಿ ಮತ್ತು ಸ್ನೇಹಕುಂಜ ಸಂಸ್ಥೆಗಳು ಜೊತೆಯಾಗಿ ಕಾರ್ಯಕ್ರಮ ಸಂಯೋಜಿಸಿದ್ದವು.