ಅಂಕೋಲಾ: ಲಾಕ್‍ಡೌನ್ ಅವಧಿಯ ಆರಂಭದಿಂದಲೂ ಆಗಾಗ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎನ್ನುವ ಸುಳ್ಳು ಸುದ್ದಿ ಅಂಕೋಲಾದಲ್ಲಿ ಹರಿದಾಡುತ್ತಲೇ ಇದ್ದರೂ ಯಾವುದೇ ಸೋಂಕು ದೃಡಪಡದೇ ಜನತೆ ನಿಶ್ಚಿಂತೆಯಿಂದ ಇದ್ದರು. ಜಿಲ್ಲೆಯನ್ನೇ ವ್ಯಾಪಿಸುತ್ತಿರುವ ಕಿಲ್ಲರ್ ಕೊರೊನಾ ಈ ವರೆಗೂ ಅಂಕೋಲಿಗರ ಮೇಲೆ ದಾಳಿ ಮಾಡಲು ಸಾಧ್ಯವಾಗಿರಲಿಲ್ಲ.
ಕಳೆದ 2-3 ದಿನಗಳ ಹಿಂದೆ ಭಾವಿಕೇರಿಯ ವ್ಯಕ್ತಿಗಳಿಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದಾಗಿನಿಂದ ತಾಲೂಕಿನ ಜನತೆಯ ಎದೆ ಡವ-ಡವ ಎನ್ನುತ್ತಲೇ ಇತ್ತು. ಆತಂಕಿತರಾದ ಜನರು ಪರಿಚಯಿಸ್ಥರ ಬಳಿ ಕೊರೊನಾ ಬಂದಿದೆ ಅಂತೆ ಎಂದು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿಕೊಂಡಿದ್ದರು. ವಾಟ್ಸಪ್ ಮತ್ತಿತ್ತರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಶಂಕೆ ವ್ಯಕ್ತಪಡಿಸಿ ಮೆಸೇಜುಗಳ ವೈರಲ್ ಆಗಿದ್ದವು.
ಶಂಕಿತ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ವರದಿ ಬರುವ ಮುನ್ನವೇ ಜನರು ಆತಂಕಿತರಾಗಿರುವುದನ್ನು ತಿಳಿದು ತಾಲೂಕಾಡಳಿತದ ಮುಖ್ಯಸ್ಥರು ಈವರೆಗೂ ಯಾವುದೇ ಸೋಂಕು ದೃಢಪಟ್ಟಿಲ್ಲ ಎನ್ನುವ ಸ್ಪಷ್ಟನೆ ನೀಡಿದ್ದರು. ಆದರೂ ಶಂಕಿತ ವ್ಯಕ್ತಿಗಳ ಗಂಟಲು ದ್ರವದ ವರದಿಗಾಗಿ ಎಲ್ಲರೂ ಭಯ ಮತ್ತು ಕುತೂಹಲದಿಂದ ಕಾಯುತ್ತಿದ್ದಂತೆ ಕಂಡುಬಂದಿತು. ಆದರೆ ಅಂಕೋಲಾದ ಭಾವಿಕೇರಿ ಮೂಲದ ಮಹಿಳೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಈ ಮಹಿಳೆಯ ತಂದೆ ಮುಂಬೈನಲ್ಲಿ ನೆಲೆಸಿದ್ದು ಕಳೆದ ಕೆಲ ದಿನಗಳ ಹಿಂದೆ ಕುಮಟಾಕ್ಕೆ ಬಂದು ಕ್ವಾರೆಂಟೈನ್‍ನಲ್ಲಿದ್ದರು. ತನ್ನ ತಂದೆಯನ್ನು ನೋಡಲು ಕುಮಟಾಕ್ಕೆ ಗಂಡನ ಜೊತೆ ಹೋಗಿ ಬಂದಿದ್ದಳು. ಈಗ ಈ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಅಂತೂ ಇಂತೂ ಅಜೇಯ ದಾಖಲೆಯೊಂದಿಗೆ ಕೊರೊನಾ ವಿರುದ್ಧ ಸೆಣಸಾಟದಲ್ಲಿ ಮಾದರಿಯಾಗಿದ್ದ, ಅಂಕೋಲಾದ ತಾಲೂಕಾಡಳಿತ ಸೇರಿದಂತೆ ವಿವಿಧ ಇಲಾಖೆಗಳು, ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಅವಿರತ ಸೇವೆ ಹಾಗೂ ಮುಂಜಾಗ್ರತೆಗೆ ಪೆಟ್ಟು ಬಿದ್ದಂತಾಗಿದ್ದು, ಮಳೆಗಾಲದ ಮುಂದಿನ ದಿನಗಳು ಅಂಕೋಲಿಗರ ಪ್ರಜ್ಞಾವಂತಿಕೆಗೆ ಸವಾಲೆಸೆದಿವೆ. ಇನ್ನು ಮುಂದಾದರೂ ನಾವೆಲ್ಲರೂ ಜಾಗೃತರಾಗಿ ಕೊರೊನಾ ಜೊತೆಜೊತೆಯಲ್ಲಿಯೇ ಹೋರಾಡುತ್ತಾ ಜೀವನ ಸಾಗಿಸಬೇಕಿದೆ ಮತ್ತು ನಮ್ಮ ಹಾಗೂ ಸಮಾಜದ ಆರೋಗ್ಯ ರಕ್ಷಣೆ ಕಾಳಜಿಯಿಂದ ಸಾಮಾಜಿಕ ಪ್ರಜ್ಞೆ ಮೆರೆಯಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ-